ಜೊಮಾಟೊ ಫೂಡ್ ರೆಸ್ಕ್ಯೂ; ಇನ್ಮುಂದೆ ಭರ್ಜರಿ ಡಿಸ್ಕೌಂಟ್ಗೆ ಸಿಗುತ್ತೆ ಆಹಾರ
ನ್ಯೂಸ್ ಆ್ಯರೋ: ಜೊಮಾಟೊ ಇದೀಗ ಹೊಸ ಫೀಚರ್ವೊಂದನ್ನು ಪರಿಚಯಿಸಿದೆ. ರದ್ದಾದ ಆರ್ಡರ್ಗಳ ಆಹಾರ ಪ್ಯಾಕ್ ಅನ್ನು ಡಿಸ್ಕೌಂಟ್ ದರಕ್ಕೆ ಮರುಮಾರಾಟಕ್ಕೆ ಇಡುವಂತಹ ಫೀಚರ್ ಇದು. ಜೊಮಾಟೊ ಪ್ರಕಾರ, ಇದು ಆಹಾರ ವೇಸ್ಟ್ ಆಗದಂತೆ ನೋಡಿಕೊಳ್ಳಲು ಒಂದು ಮಾರ್ಗೋಪಾಯವಾಗಿದೆ.
ಗ್ರಾಹಕರು ತಮಗೆ ಬೇಕಾದ ಆಹಾರಕ್ಕೆ ಆರ್ಡರ್ ಬುಕ್ ಮಾಡಿ, ಕಾರಣಾಂತರಗಳಿಂದ ಅದನ್ನು ರದ್ದು ಮಾಡುವುದುಂಟು. ಇಂತಹ ಕ್ಯಾನ್ಸಲ್ಡ್ ಆರ್ಡರ್ಗಳಿಗೆ ರೀಫಂಡ್ ಇರುವುದಿಲ್ಲ. ಪ್ಯಾಕ್ ಆಗಿರುವಂತಹ ಆಹಾರವನ್ನು ರೆಸ್ಟೋರೆಂಟ್ನವರೂ ಮರಳಿ ಪಡೆಯುವುದಿಲ್ಲ. ಹೀಗಾಗಿ, ಆ ಪ್ಯಾಕ್ ತ್ಯಾಜ್ಯಕ್ಕೆ ಸೇರುವ ಸಾಧ್ಯತೆ ಇರುತ್ತದೆ. ಈಗ ಆ ಆಹಾರ ಇನ್ನೂ ತಾಜಾ ಇರುವಾಗಲೇ ಬೇರೆಯವರಿಗೆ ಅದನ್ನು ಮಾರಾಟ ಮಾಡುವುದು ಜೊಮಾಟೊದ ಗುರಿಯಾಗಿದೆ.
‘ಕ್ಯಾನ್ಸಲೇಶನ್ ಮಾಡುವುದರಿಂದ ಸಾಕಷ್ಟು ಆಹಾರವು ಬಳಕೆಯಾಗದೇ ಹಾಳಾಗಿ ಹೋಗುತ್ತದೆ. ಹೀಗಾಗಿ, ಕ್ಯಾನ್ಸಲೇಶನ್ ಅನ್ನು ನಾವು ಉತ್ತೇಜಿಸುವುದಿಲ್ಲ. ಕ್ಯಾನ್ಸಲೇಶನ್ಗೆ ರೀಫಂಡ್ ಕೂಡ ಮಾಡುವುದಿಲ್ಲ. ಆದರೂ ಕೂಡ ಜೊಮಾಟೊದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಆರ್ಡರ್ಗಳು ಕ್ಯಾನ್ಸಲ್ ಆಗುತ್ತವೆ,’ ಎಂದು ಜೊಮಾಟೊ ಸಿಇಒ ದೀಪಿಂದರ್ ಗೋಯಲ್ ತಮ್ಮ ಎಕ್ಸ್ ಅಕೌಂಟ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಆರ್ಡರ್ಗಳು ಕ್ಯಾನ್ಸಲ್ ಆಗಿರುವ ಆಹಾರ ಪ್ಯಾಕೆಟ್ ಸೀಮಿತ ಅವಧಿಯವರೆಗೆ ಮರುಮಾರಾಟಕ್ಕೆ ಲಭ್ಯ ಇರುತ್ತದೆ. ಆಕರ್ಷಕ ಬೆಲೆಗೆ ಇವು ಲಭ್ಯ ಇರುತ್ತವೆ. ಗ್ರಾಹಕರು ಕೆಲವೇ ನಿಮಿಷಗಳಲ್ಲಿ ಇವುಗಳ ಡೆಲಿವರಿ ಪಡೆಯಬಹುದು. ಇಂಥ ಕ್ಯಾನ್ಸಲ್ಡ್ ಆರ್ಡರ್ಗಳು ಲಭ್ಯ ಇದ್ದರೆ ಜೊಮಾಟೊ ಆ್ಯಪ್ನಲ್ಲಿ ಫೂಡ್ ರೆಸ್ಕ್ಯೂ ಫೀಚರ್ನಲ್ಲಿ (Food Rescue) ಅದನ್ನು ಕಾಣಬಹುದು.
ಆರ್ಡರ್ ಕ್ಯಾನ್ಸಲ್ ಆದ ಆಹಾರ ಪ್ಯಾಕೆಟ್ಗಳು ಮರುಮಾರಾಟವಾದಲ್ಲಿ ಆ ಹೊಸ ಗ್ರಾಹಕರಿಂದ ಪಾವತಿಸಲಾಗುವ ಹಣವನ್ನು ಮೂಲ ಗ್ರಾಹಕ ಮತ್ತು ರೆಸ್ಟೋರೆಂಟ್ಗಳಿಗೆ ಹಂಚಲಾಗುತ್ತದೆ ಎಂದು ಜೊಮಾಟೊ ಹೇಳಿದೆ. ಉದಾಹರಣೆಗೆ, ಒಂದು ಸಾವಿರ ರೂ ಮೊತ್ತದ ಆರ್ಡರ್ ಅನ್ನು ಕ್ಯಾನ್ಸಲ್ ಮಾಡಲಾಯಿತು ಎಂದಿಟ್ಟುಕೊಳ್ಳಿ. ಆ ಪ್ಯಾಕ್ ಅನ್ನು 500 ರೂ ಬೆಲೆಗೆ ಹೊಸ ಗ್ರಾಹಕ ಖರೀದಿಸಿದಾಗ, ಸರ್ಕಾರಕ್ಕೆ ಸಲ್ಲಿಕೆಯಾಗಬೇಕಾದ ತೆರಿಗೆ ಇತ್ಯಾದಿಯನ್ನು ಮುರಿದುಕೊಂಡು ಉಳಿಯುವ ಹಣವನ್ನು ಮೂಲ ಗ್ರಾಹಕ ಮತ್ತು ರೆಸ್ಟೋರೆಂಟ್ಗೆ ಹಂಚಿಕೆ ಮಾಡಲಾಗುತ್ತದೆ.
ಗಮನಿಸಬೇಕಾದ ಸಂಗತಿ ಎಂದರೆ, ಆರ್ಡರ್ ಕ್ಯಾನ್ಸಲ್ ಆದಾಗ ಡೆಲಿವರಿ ಬಾಯ್ ಆ ಪ್ಯಾಕ್ ಅನ್ನು ಡೆಲಿವರಿಗೆಂದು ತೆಗೆದುಕೊಂಡು ಹೋಗುತ್ತಿರಬಹುದು. ಆತ ಇರುವ ಸ್ಥಳದಿಂದ 3 ಕಿಮೀ ದೂರದವರೆಗೆ ಇರುವ ಗ್ರಾಹಕರಿಗೆ ಫೂಡ್ ರೆಸ್ಕ್ಯೂ ಅಲರ್ಟ್ ಸಿಗುತ್ತದೆ. ಇವರು ಅದನ್ನು ಡಿಸ್ಕೌಂಟ್ ದರಕ್ಕೆ ಬುಕ್ ಮಾಡಬಹುದು.
Leave a Comment