ರಾಜ್ಯದಲ್ಲಿ ಡೆಂಘಿ ಮಾರಿಯ ಜೊತೆ ಝೀಕಾ ವೈರಸ್ ಕಾಟ – ಮಾರ್ಗಸೂಚಿ ಬಿಡುಗಡೆಗೊಳಿಸಿದ ಆರೋಗ್ಯ ಇಲಾಖೆ : ಈ ರೋಗದ ಲಕ್ಷಣಗಳೇನು?
ನ್ಯೂಸ್ ಆ್ಯರೋ : ಕೆಲದಿನಗಳಿಂದ ರಾಜ್ಯದಲ್ಲಿ ಡೆಂಘೀ ಜ್ವರ ಹೆಚ್ಚಾಗುತ್ತಿರುವ ಬೆನ್ನಲ್ಲೇ ಝೀಕಾ ವೈರಸ್ ಅಬ್ಬರ ಶುರುವಾಗಿದ್ದು, ಈ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಆರೋಗ್ಯ ಇಲಾಖೆಯು ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಡೆಂಘೀ ರೀತಿಯಲ್ಲೇ ಸೋಂಕಿತ ಈಡಿಸ್ ಸೊಳ್ಳೆ ಕಚ್ಚುವುದರಿಂದ ಝೀಕಾ ವೈರಸ್ ಹರಡುತ್ತದೆ. ಸೋಂಕು ಕಾಣಿಸಿಕೊಂಡ ತಕ್ಷಣ ಎಚ್ಚೆತ್ತು ಚಿಕಿತ್ಸೆ ಪಡೆಯುವ ಸಲುವಾಗಿ ರೋಗದ ಗುಣಲಕ್ಷಣ, ಸೋಂಕು ಉಂಟಾದರೆ ತೆಗೆದುಕೊಳ್ಳಬೇಕಿರುವ ಪರಿಹಾರ ಕ್ರಮ, ಸೊಳ್ಳೆ ನಿಯಂತ್ರಣ ಮಾಡಲು ಮಾಡಬೇಕಿರುವ ಕ್ರಮಗಳ ಬಗ್ಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.
ಝೀಕಾ ವೈರಸ್‌ನ ಸೋಂಕು ಉಂಟಾದರೆ ನಿರ್ದಿಷ್ಟ ಚಿಕಿತ್ಸೆ ಹಾಗೂ ಲಸಿಕೆ ಲಭ್ಯವಿಲ್ಲ. ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ. ಮನೆಯಲ್ಲಿಯೇ ಚಿಕಿತ್ಸೆ ಪಡೆಯಬಹುದು. ನಿರ್ಜಲೀಕರಣ ತಪ್ಪಿಸಲು ಹೆಚ್ಚು ನೀರಿನ ಅಂಶವುಳ್ಳ ಆಹಾರ ಪದಾರ್ಥ ಸೇವನೆ, ರೋಗ ಲಕ್ಷಣಗಳಿಗೆ ಅನುಗುಣವಾಗಿ ವೈದ್ಯರ ಸಲಹೆಯಂತೆ ನೀಡುವ ಔಷಧಿ ಪಡೆಯುವ ಜತೆಗೆ ಸಾಕಷ್ಟು ವಿಶ್ರಾಂತಿ ಪಡೆಯಬೇಕು. ಸೋಂಕು ಬೇರೆಯವರಿಗೆ ಹರಡದಂತೆ ಸೊಳ್ಳೆ ಪರದೆ ಉಪಯೋಗಿಸಬೇಕು ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ.
ಝೀಕಾ ವೈರಸ್ ಸೊಳ್ಳೆಗಳ ಮೂಲಕ ವಾಹಕಗಳಾಗಿ ಹರಡುತ್ತದೆ. ಈಡಿಸ್ ಸೊಳ್ಳೆಗಳ ಮೂಲಕ ಈ ವೈರಸ್ ಹರಡುತ್ತದೆ. ಈ ವೈರಸ್ ಸಾಗಿಸುವ ಸೊಳ್ಳೆಗಳು ಮನುಷ್ಯರನ್ನು ಕಚ್ಚಿದಾಗ, ವೈರಸ್ ಮನುಷ್ಯರಿಗೆ ಹರಡುತ್ತದೆ. ಈ ಈಡಿಸ್ ಸೊಳ್ಳೆಗಳು ಹಗಲಿನ ವೇಳೆಯಲ್ಲಿ ಕಚ್ಚುತ್ತವೆ ಹಾಗೂ ಹೆಚ್ಚಾಗಿ ಉಷ್ಣವಲಯದ ಮತ್ತು ಉಪೋಷ್ಣವಲಯದ ಪ್ರದೇಶಗಳಲ್ಲಿ ಕಂಡುಬರುತ್ತದೆ. ಝೀಕಾ ವೈರಸ್ ಕೇವಲ ಸೊಳ್ಳೆ ಕಡಿತದಿಂದ ಮಾತ್ರವಲ್ಲ, ರಕ್ತದ ವರ್ಗಾವಣೆ ಮೂಲಕವೂ ಹರಡಬಹುದು ಎಂದು ತಜ್ಞರು ಹೇಳುತ್ತಾರೆ.
ಝೀಕಾ ರೋಗದ ಲಕ್ಷಣಗಳೇನು?
ಸೌಮ್ಯ ಜ್ವರ
ದದ್ದುಗಳು
ಕಾಂಜಂಕ್ಟಿವಿಟಿಸ್
ಸ್ನಾಯು- ಕೀಲು ನೋವು
ಅಸ್ವಸ್ಥತೆ ಅಥವಾ ತಲೆನೋವು
ಮುನ್ನೆಚ್ಚರಿಕೆ ಹೇಗೆ?
ನಿಮ್ಮ ಮನೆಯಂಗಳದ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ. ಸದ್ಯ ಮಳೆ ಇರುವುದರಿಂದ ರಸ್ತೆಯ ಹೊಂಡಗಳಲ್ಲಿ ನೀರು ನಿಲ್ಲುವುದು ಸಾಮಾನ್ಯ. ಇಂತಹ ಕಡೆ ಸೊಳ್ಳೆಗಳು ಸಂತನೋತ್ಪತ್ತಿ ಹೆಚ್ಚಿಸಿಕೊಂಡು ಮನುಷ್ಯರ ಮೇಲೆ ಹಗಲಿನ ವೇಳೆ ದಾಳಿ ಮಾಡುತ್ತವೆ. ಇವುಗಳಿಂದ ರಕ್ಷಣೆ ಪಡೆದುಕೊಳ್ಳಲು ಬೇಕಾದ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಬೇಕು.
Leave a Comment