ಜಾರ್ಖಂಡ್‌ಗೆ ಮತ್ತೆ ಇವರೇ ಸಿಎಂ; ನ.28 ರಂದು ಪ್ರಮಾಣ ವಚನ ಸ್ವೀಕಾರ
ನ್ಯೂಸ್ ಆ್ಯರೋ: ಬಿಜೆಪಿಯ ತೀವ್ರ ಸವಾಲು ಮೆಟ್ಟಿನಿಂತು ಮತ್ತೆ ಅಧಿಕಾರದ ಗದ್ದುಗೆ ಏರಿರುವ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮತ್ತು ಕಾಂಗ್ರೆಸ್ ಮೈತ್ರಿಯು ಸರ್ಕಾರ ರಚನೆಗೆ ಸಜ್ಜಾಗಿದೆ. ಹೇಮಂತ್ ಸೊರೆನ್ ಅವರನ್ನು ಜೆಎಂಎಂ ತನ್ನ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಭಾನುವಾರ ಮಾಡಿಕೊಂಡಿದೆ.
ಸೊರೆನ್ ಅವರು ಜಾರ್ಖಂಡ್ ರಾಜ್ಯಪಾಲ ಸಂತೋಷ್ ಕುಮಾರ್ ಗಂಗ್ವಾರ್ ಅವರನ್ನು ಇಂದು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ರಾಜ್ಯಪಾಲರು ನವೆಂಬರ್ 28 ರಂದು ಪ್ರಮಾಣ ಸ್ವೀಕಾರಕ್ಕೆ ದಿನಾಂಕ ನಿಗದಿ ಮಾಡಿದ್ದಾರೆ. ಸೊರೆನ್ ಅವರು ಜಾರ್ಖಂಡ್‌ನ 14 ನೇ ಮತ್ತು ನಾಲ್ಕನೇ ಅವಧಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ರಾಜ್ಯಪಾಲರ ಭೇಟಿಗೂ ಮೊದಲು ಸೊರೆನ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ನೂತನ ಸರ್ಕಾರ ರಚನೆಯಾಗುವವರೆಗೂ ಹಂಗಾಮಿ ಸಿಎಂ ಆಗಿ ಮುಂದುವರಿಯಲಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹೇಮಂತ್ ಸೊರೆನ್, “ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದೇವೆ. ಮೈತ್ರಿ ಪಕ್ಷದ ಶಾಸಕರ ಬೆಂಬಲ ಪತ್ರವನ್ನೂ ನೀಡಿದ್ದೇವೆ. ನವೆಂಬರ್ 28 ರಂದು ಪ್ರಮಾಣ ವಚನ ಸಮಾರಂಭ ನಡೆಯಲಿದೆ” ಎಂದು ತಿಳಿಸಿದರು.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಹೇಮಂತ್ ಸೊರೆನ್ ಅವರು ಜಾರಿ ನಿರ್ದೇಶನಾಲಯದಿಂದ (ಇಡಿ) ಬಂಧನಕ್ಕೊಳಗಾಗಿದ್ದರು. ಇದರಿಂದ ಜನವರಿಯಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪ್ರಕರಣದಲ್ಲಿ ಹೈಕೋರ್ಟ್ ಜಾಮೀನು ನೀಡಿದ್ದರಿಂದ ಸುಮಾರು ಐದು ತಿಂಗಳ ನಂತರ ಜೂನ್ 28 ರಂದು ಜೈಲಿನಿಂದ ಹೊರಬಂದು ಮತ್ತೆ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದರು.
Leave a Comment