ತಬಲಾ ಮಾಂತ್ರಿಕ ಝಾಕೀರ್ ಹುಸೇನ್ ನಿಧನ; ವಾದನ ನಿಲ್ಲಿಸಿದ 5 ಗ್ರ್ಯಾಮಿ ಪ್ರಶಸ್ತಿ ಪಡೆದ ಹುಸೇನ್

Zakir Hussain
Spread the love

ವಿಶ್ವವಿಖ್ಯಾತ ತಬಲಾ ಮಾಂತ್ರಿಕ ಝಾಕೀರ್ ಹುಸೇನ್ ಇಹಲೋಕ ತ್ಯಜಿಸಿದ್ದಾರೆ. ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಹುಸೇನ್ ಚಿಕಿತ್ಸೆ ಫಲಿಸದೆ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಝಾಕೀರ್ ಹುಸೇನ್ ಅವರು 73 ವಯಸ್ಸಾಗಿದ್ದು ಇಡಿಯೋಪಥಿಕ್ ಪಲ್ಮನರಿ ಫೈಬ್ರೋಸಿಸ್‌ ನಿಂದ ನಿಧನರಾದರು ಎಂದು ಅವರ ಕುಟುಂಬದಿಂದ ಅಧಿಕೃತ ಮಾಹಿತಿ ಹೊರ ಬಿದ್ದಿದೆ.

Tabla Maestro Zakir Hussain Passes Away At 73

ಹುಸೇನ್ ಅವರು ಪತ್ನಿ ಅಂಟೋನಿಯಾ ಮಿನ್ನೆಕೋಲಾ, ಪುತ್ರಿಯರಾದ ಅನಿಸಾ ಖುರೇಷಿ ಮತ್ತು ಇಸಾಬೆಲ್ಲಾ ಖುರೇಷಿ, ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ. ಉಸ್ತಾದ್ ಝಾಕೀರ್ ಹುಸೇನ್ ಭಾರತೀಯ ತಬಲಾ ವಾದಕ, ಸಂಯೋಜಕ, ಸಾರ್ವಕಾಲಿಕ ಶ್ರೇಷ್ಠ ತಬಲಾ ವಾದಕ. ತಬಲಾ ಅಂದ್ರೆ ಝಾಕೀರ್, ಝಾಕೀರ್ ಅಂದ್ರೆ ತಬಲಾ. ಸಂಗೀತಗಾರ ಝಾಕೀರ್ ಹುಸೇನ್ ಇನ್ನು ನೆನಪು ಮಾತ್ರ.

ಇನ್ನು ಝಾಕೀರ್ ಹುಸೇನ್​ರನ್ನ ವಿಶ್ವದ ಶ್ರೇಷ್ಠ ತಬಲಾವಾದಕರಲ್ಲಿ ಒಬ್ಬರೆಂದು ಪರಿಗಣಿಸಲಾಗಿದ್ದು. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಹುಸೇನ್ ಮನೆತನದಲ್ಲಿ ಸಂಗೀತವು ಕೇವಲ ಒಂದು ಕಲಾ ಪ್ರಕಾರವಾಗಿರಲಿಲ್ಲ. ಅದು ಅವರು ಉಸಿರಾಡುವ ಗಾಳಿಯಾಗಿತ್ತು.

ಚಿಕ್ಕ ವಯಸ್ಸಿನಿಂದಲೂ, ಝಾಕೀರ್ ತಬಲಾ ಬಡಿತಗಳ ಸಂಕೀರ್ಣದ ಜಗತ್ತಿನಲ್ಲಿ ಮುಳುಗಿ, ತನ್ನ ತಂದೆಯ ಸಂಗೀತ ಬೋಧನೆಗಳನ್ನು ಹೀರಿಕೊಳ್ಳುತ್ತಾ ವಾದ್ಯದ ಬಗ್ಗೆ ಸಹಜ ತಿಳುವಳಿಕೆಯನ್ನು ಬೆಳೆಸಿಕೊಂಡರು. ಮುಂದೆ ಉಸ್ತಾದ್ ಜಾಕೀರ್ ಹುಸೇನ್ ಅವರು ತಮ್ಮ ಏಳನೇ ವಯಸ್ಸಿನಲ್ಲಿ ಸಂಗೀತ ಕಚೇರಿಗಳಲ್ಲಿ ತಬಲಾ ನುಡಿಸಲು ಪ್ರಾರಂಭಿಸಿದರು. ತಮ್ಮ ಕೌಶಲ್ಯ ಮತ್ತು ನಾವೀನ್ಯತೆಯಿಂದ ಅಭೂತಪೂರ್ವ ಜಾಗತಿಕ ಮನ್ನಣೆಗೆ ಪಾತ್ರರಾದರು.

ಇಬ್ಬರು ಸಹೋದರೊಂದಿಗೆ ತಂದೆಯಿಂದ ವಾದ್ಯ ಕಲೆಯುತ್ತಲೇ ಜಾಕೀರ್ ಹುಸೇನ್ ದೊಡ್ಡವರಾದರು, ಬಳಿಕ ಕಥಕ್ ಡ್ಯಾನ್ಸರ್ ಆಗಿದ್ದ ಅಂಟೋನಿಯಾ ಮಿನ್ನೆಕೋಲಾರನ್ನ ಮದುವೆಯಾದರು. ಹುಸೇನ್​ ಅವರಿಗೆ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ.

ಪ್ರತಿಷ್ಠಿತ ಪ್ರಿನ್ಸ್‌ಟನ್ ವಿಶ್ವವಿದ್ಯಾನಿಲಯದ ಹ್ಯುಮಾನಿಟೀಸ್ ಕೌನ್ಸಿಲ್‌ನಿಂದ ಜಾಕೀರ್ ಹುಸೇನ್​ರನ್ನು ಓಲ್ಡ್ ಡೊಮಿನಿಯನ್ ಫೆಲೋ ಎಂದು ಗುರುತಿಸಲಾಯಿತು. ಸಂಗೀತ ವಿಭಾಗದಲ್ಲಿ ಪೂರ್ಣ ಪ್ರಾಧ್ಯಾಪಕರಾಗಿ 2005ರಲ್ಲಿ ಕೆಲಸ ಮಾಡಿದ್ದರು. ಇದಾದ ಮೇಲೆ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಜಾಕೀರ್ ಹುಸೇನ್ ಅವರು ಸಂಗೀತಕ್ಕೆ ನೀಡಿದ ಅಪಾರ ಕೊಡುಗೆಯನ್ನು ಪರಿಗಣಿಸಿ 2022ರ ಮೇನಲ್ಲಿ ಮುಂಬೈ ವಿಶ್ವವಿದ್ಯಾನಿಲಯವು ಅವರಿಗೆ ಗೌರವ ಡಾಕ್ಟರ್ ಆಫ್ ಲಾ (LLD) ಪದವಿ ನೀಡಿ ಗೌರವಿಸಿತ್ತು.

ಝಾಕೀರ್ ಹುಸೇನ್ ಅವರು ತಮ್ಮ ವೃತ್ತಿಜೀವನದಲ್ಲಿ 5 ಗ್ರ್ಯಾಮಿ ಪ್ರಶಸ್ತಿ ಪಡೆದಿದ್ದರು. 66ನೇ ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 5 ಪ್ರಶಸ್ತಿ ಪಡೆದಿದ್ದರು. ಅಷ್ಟೇ ಅಲ್ಲದೆ 1988ರಲ್ಲಿ ಪದ್ಮಶ್ರೀ ಪ್ರಶಸ್ತಿ, 2002ರಲ್ಲಿ ಪದ್ಮಭೂಷಣ ಮತ್ತು 2023ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು.

ಜಾಕಿರ್ ಹುಸೇನ್ ನಿಧನಕ್ಕೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಅಖಿಲೇಶ್ ಯಾದವ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಝಾಕೀರ್ ಹುಸೇನ್ ಅಗಲಿಕೆ ಸಂಗೀತ ಪ್ರಪಂಚಕ್ಕೆ ತುಂಬಲಾರದ ನಷ್ಟ ಉಂಟುಮಾಡಿದೆ.

Leave a Comment

Leave a Reply

Your email address will not be published. Required fields are marked *

error: Content is protected !!