ʼಮುಂಗಾರು ಮಳೆʼ ನಿರ್ಮಾಪಕರಿಂದ ಹೊಸ ಸಿನಿಮಾ ಅನೌನ್ಸ್​; ಮತ್ತೆ ಒಂದಾದ ಯೋಗರಾಜ್ ಭಟ್ – ಇ.ಕೃಷ್ಣಪ್ಪ

manada-kadalu
Spread the love

‘ಮುಂಗಾರು ಮಳೆ’ ಸಿನಿಮಾ 2006ರಲ್ಲಿ ಬಿಡುಗಡೆಯಾಗಿ ಸೂಪರ್​ ಹಿಟ್​ ಆಗಿತ್ತು. ಆ ಸಿನಿಮಾಗೆ ನಿರ್ದೇಶನ ಮಾಡಿದ್ದ ಯೋಗರಾಜ್​ ಭಟ್​ ಹಾಗೂ ನಿರ್ಮಾಣ ಮಾಡಿದ್ದ ಇ. ಕೃಷ್ಣಪ್ಪ ಅವರು ಈಗ ಮತ್ತೆ ಒಂದಾಗಿದ್ದಾರೆ. ಬರೋಬ್ಬರಿ 18 ವರ್ಷಗಳ ನಂತರ ಅವರಿಬ್ಬರ ಕಾಂಬಿನೇಷನ್​ನಲ್ಲಿ ಹೊಸ ಸಿನಿಮಾ ಬರುತ್ತಿದೆ.

ಈ ಸಿನಿಮಾಗೆ ‘ಮನದ ಕಡಲು’ ಎಂದು ಶೀರ್ಷಿಕೆ ಇಡಲಾಗಿದೆ. ಸುಮುಖ ಅವರು ಈ ಚಿತ್ರಕ್ಕೆ ಹೀರೋ ಆಗಿದ್ದಾರೆ. ರಾಶಿಕಾ ಶೆಟ್ಟಿ ಹಾಗೂ ಅಂಜಲಿ ಅನೀಶ್ ಅವರು ನಾಯಕಿಯರಾಗಿ ನಟಿಸುತ್ತಿದ್ದಾರೆ. ಅನುಭವಿ ನಟ ರಂಗಾಯಣ ರಘು ಅವರಿಗೂ ಈ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರವಿದೆ.

ಜಿ. ಗಂಗಾಧರ್ ಅವರು ‘ಮನದ ಕಡಲು’ ಸಿನಿಮಾಗೆ ಸಹ ನಿರ್ಮಾಪಕರಾಗಿದ್ದಾರೆ. ಬೆಂಗಳೂರಿನಲ್ಲಿ ಈ ಸಿನಿಮಾಗೆ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಅದರ ನಡುವೆ ಸುದ್ದಿಗೋಷ್ಠಿ ನಡೆಸಲಾಗಿದೆ. ಸಿನಿಮಾ ಬಗ್ಗೆ ಯೋಗರಾಜ್​ ಭಟ್​ ಅವರು ಮಾತನಾಡಿದರು. ‘ಕೊರೋನಾ ನಂತರ ಮತ್ತೆ ಇ. ಕೃಷ್ಣಪ್ಪ ಅವರ ಜೊತೆ ಸಿನಿಮಾ ಮಾಡುವುದು ನಿರ್ಧಾರವಾಯಿತು. ಹೊಸಬರ ಜೊತೆಗೆ ಸಿನಿಮಾ ಮಾಡೋಣ ಅಂತ ಕೃಷ್ಣಪ್ಪ ಹೇಳಿದರು. ಅದು ಸುಲಭವಲ್ಲ. ಈ ಚಿತ್ರಕ್ಕೆ ಹೀರೋ ಸಿಕ್ಕಿರಲಿಲ್ಲ. ಯಾವುದೋ ಕೆಲಸದ ಸಲುವಾಗಿ ಫೋನ್‍ ಮಾಡಿದ್ದ ಸುಮುಖ ನಮಗೆಲ್ಲ ಇಷ್ಟವಾದ’ ಎಂದಿದ್ದಾರೆ ಯೋಗರಾಜ್​ ಭಟ್​.

‘ಇದು ಒಂದು ಪ್ರಾಮಾಣಿಕ ಪ್ರಯತ್ನ. ಕನ್ನಡದಲ್ಲಿ ಸಾಕಷ್ಟು ಹೊಸ ಪ್ರತಿಭೆಗಳು ಇದ್ದಾರೆ. ಅವರನ್ನು ಸರಿಯಾಗಿ ಗುರುತಿಸುವ ಕೆಲಸ ಆಗುತ್ತಿಲ್ಲ. ಹೊಸಬರಿಗೆ ಒಳ್ಳೆಯದಾಗಬೇಕು. ಈ ಸಿನಿಮಾ ಕೂಡ ಮುಂಗಾರು ಮಳೆ ಮಟ್ಟಕ್ಕೆ ಹೋಗಬೇಕು’ ಎಂದು ನಿರ್ಮಾಪಕ ಇ. ಕೃಷ್ಣಪ್ಪ ಹೇಳಿದ್ದಾರೆ. ಇನ್ನು ಹರಿಕೃಷ್ಣ ಅವರು ಈ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ. ಸಂತೋಷ್​ ರೈ ಪಾತಾಜೆ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!