ರಾಂಗ್ ಸೈಡ್ ಡ್ರೈವಿಂಗ್ ವಿರುದ್ಧ ಸಮರ ಸಾರಿದ ರಾಜ್ಯ ಪೋಲಿಸರು – ಆಗಸ್ಟ್ 1ರಿಂದ 12 ಸಾವಿರಕ್ಕೂ ಅಧಿಕ ಕೇಸ್ : ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ
ನ್ಯೂಸ್ ಆ್ಯರೋ : ರಸ್ತೆಯ ವಿರುದ್ಧ ದಿಕ್ಕಿನಲ್ಲಿ (ರಾಂಗ್ ಸೈಡ್) ವಾಹನ ಚಾಲನೆ ವಿರುದ್ಧ ಸಮರ ಸಾರಿರುವ ರಾಜ್ಯ ಪೋಲಿಸರು ಆಗಸ್ಟ್ 1ರಿಂದ ಇಂದಿನವರೆಗೆ 12 ಸಾವಿರಕ್ಕೂ ಅಧಿಕ ಕೇಸ್ ದಾಖಲಿಸಿ ದಂಡ ವಸೂಲಿ ಮಾಡಿರುವುದಾಗಿ ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತೆ) ಅಲೋಕ್‌ಕುಮಾರ್ ಮಾಹಿತಿ ನೀಡಿದ್ದಾರೆ.
ಎಕ್ಸ್ ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತೆ) ಅಲೋಕ್‌ಕುಮಾರ್ ಜಿಲ್ಲಾವಾರು ಪಟ್ಟಿ ಬಿಡುಗಡೆಗೊಳಿಸಿದ್ದು, ಈ ಪೈಕಿ ಬೆಂಗಳೂರು ನಗರದಲ್ಲೇ 9,397 ಕೇಸ್ ದಾಖಲಾಗಿದೆ.
ರಾಜ್ಯದಲ್ಲಿ ರಸ್ತೆ ಅಪಘಾತ ಮತ್ತು ಸಾವು ನೋವು ತಡೆಗಟ್ಟುವ ನಿಟ್ಟಿನಲ್ಲಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ತರಲು ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ ಮಾಡುವರ ವಿರುದ್ಧ ಆಗಸ್ಟ್ 1ರಿಂದ ಕೇಸ್ ಮತ್ತು ಎಐಆರ್ ದಾಖಲಿಸುವಂತೆ ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತೆ) ಅಲೋಕ್‌ಕುಮಾರ್ ಆದೇಶಿಸಿದ್ದರು.
ಮುಖ್ಯವಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ ಜೀವಕ್ಕೆ ಅಪಾಯವಾಗಿದೆ. ಆದರಿಂದ ಹೆದ್ದಾರಿಗಳ ಮೇಲೆ ವಿರುದ್ಧ ದಿಕ್ಕಿನಲ್ಲಿ ಚಾಲನೆ ಮಾಡುವ ವಾಹನ ಚಾಲಕ/ಸವಾರರ ವಿರುದ್ಧ ಬಿಎನ್‌ಎಸ್ 281 ರ ಅನ್ವಯ ಮತ್ತು ಭಾರತೀಯ ಮೋಟಾರು ವಾಹನ ಕಾಯ್ದೆ 184 ಅನ್ವಯ ಎಫ್ ಐಆರ್ ದಾಖಲಿಸಿ ಕ್ರಮ ಕೈಗೊಳ್ಳಲು ಅಲೋಕ್ ಕುಮಾರ್ ಪೊಲೀಸರಿಗೆ ಸೂಚಿಸಿದ್ದರು.
ಅಲೋಕ್ ಕುಮಾರ್ ಆದೇಶದ ಮೇರೆಗೆ ಆಗಸ್ಟ್ 1ರಿಂದ ರಾಜ್ಯದ ಎಲ್ಲೆಡೆ ಸಂಚಾರ ಮತ್ತು ಸಿವಿಲ್ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, 12,096 ಕೇಸ್ (ಆ.15 ವರೆಗೆ) ದಾಖಲಿಸಿ ದಂಡ ವಸೂಲಿ ಮಾಡಿದ್ದಾರೆ. ಈ ಪೈಕಿ ಒಟ್ಟು 51 ಎಫ್ಐಆರ್ ಕೂಡ ದಾಖಲು ಮಾಡಿಕೊಳ್ಳಲಾಗಿದೆ.
Leave a Comment