ದೇಶವನ್ನು ಕಾಡುತ್ತಿದೆ ಡಿಜಿಟಲ್ ಅರೆಸ್ಟ್ ಎಂಬ ʻಭೂತʼ; ಪ್ರಧಾನಿ ಮೋದಿ ನೀಡಿದ ಎಚ್ಚರಿಕೆ ಸಂದೇಶವೇನು?
ನ್ಯೂಸ್ ಆ್ಯರೋ: ತಂತ್ರಜ್ಞಾನ ಬೆಳೆದಂತೆ, ಡಿಜಿಟಲ್ ವಹಿವಾಟು ಹೆಚ್ಚುತ್ತಿದ್ದಂತೆ ಆನ್‌ಲೈನ್ ವಂಚನೆಯೂ ಹೆಚ್ಚಾಗುತ್ತಿದೆ. ವಂಚಕರು ನೇರವಾಗಿ ಬ್ಯಾಂಕ್ ಖಾತೆಗೆ ಕನ್ನ ಇಡಲು ಶುರು ಮಾಡಿದ್ದಾರೆ. ಗಾಯಕರು, ಚಿತ್ರ ನಟರು, ಅಷ್ಟೇ ಯಾಕೆ ನಮ್ಮ ಪ್ರಧಾನಿ ಮೋದಿ ಹೆಸರಿನಲ್ಲೂ ವಂಚನೆ ಮಾಡೋದಕ್ಕೆ ಶುರು ಮಾಡಿದ್ದಾರೆ. ಕೆಲ ತಿಂಗಳ ಹಿಂದೆ ಬಿಡುಗಡೆಯಾದ ವಿಶ್ವ ಸೈಬರ್ ಅಪರಾಧ ಸೂಚ್ಯಂಕವು ಭಾರತ ಜಾಗತಿಕ ಮಟ್ಟದಲ್ಲಿ 10ನೇ ಸ್ಥಾನದಲ್ಲಿದೆ ಎಂಬುದನ್ನು ತೋಓರಿಸಿದೆ. ಸೈಬರ್ ಅಪರಾಧದ ಮೂಲ ಹಾಗೂ ಯಾವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಸೈಬರ್ ಅಪರಾಧಗಳು ಘಟಿಸುತ್ತವೆ ಎಂಬುದನ್ನು ಪತ್ತೆ ಹಚ್ಚಲು ಆಕ್ಸ್‌ಫರ್ಡ್ ವಿವಿ, ನ್ಯೂ ಸೌತ್ ವೇಲ್ಸ್ ವಿವಿ, ಮೊನಾಶ್ ವಿವಿ ಹಾಗೂ ಅಂತಾರಾಷ್ಟ್ರೀಯ ಸಂಶೋಧನಾ ಸಂಸ್ಥೆಯಾದ ಸೈನ್ಸ್ ಪೊ ನಡೆಸಿದ ಅಧ್ಯಯನ ಇದಾಗಿದೆ. ಇದೀಗ ಡಿಜಿಟಲ್ ಅರೆಸ್ಟ್, ಇತರ ಸೈಬರ್ ವಂಚನೆ ಮುನ್ನೆಲೆಗೆ ಬಂದಿದ್ದಕ್ಕೆ ಕಾರಣವೂ ಇದೆ.
ಇತ್ತೀಚೆಗೆ ಡಿಜಿಟಲ್ ಅರೆಸ್ಟ್ ಮತ್ತು ಇತರ ಸೈಬರ್ ವಂಚನೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೇ ತಮ್ಮ ʻಮನದ ಮಾತು’ ಬಾನುಲಿ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿರುವುದು ಎಷ್ಟು ಗಂಭೀರ ಎಂಬುದನ್ನು ಸೂಚಿಸುತ್ತದೆ. 2 ವರ್ಷಗಳ ಹಿಂದೆ ಡಿಜಿಟಲ್ ಅರೆಸ್ಟ್ ನಮಗೆ ಗೊತ್ತೇ ಇಲ್ಲದ ಮತ್ತು ನಂಬಲು ಕೂಡ ಸಾಧ್ಯವಿಲ್ಲದ ಸಂಗತಿಯಾಗಿತ್ತು. ಆದರೆ ಈಗ, ಡಿಜಿಟಲ್ ಅರೆಸ್ಟ್ ಎಂಬುದು ನಿಜಜೀವನದ ದೊಡ್ಡ ಬೆದರಿಕೆಯಾಗಿದೆ. ಪ್ರಧಾನಿಯೇ ಎಚ್ಚರಿಕೆ ನೀಡುವಷ್ಟು ಗಂಭೀರವೂ ಆಗಿದೆ. ವಂಚಕರು ಪೊಲೀಸ್, ಸಿಬಿಐ, ಡ್ರಗ್ಸ್ ತಡೆ ಘಟಕ ಮತ್ತು ಕೆಲವೊಮ್ಮೆ ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕಾರಿಗಳ ಹೆಸರು ಹೇಳಿಕೊಂಡು ವಂಚಿಸಲು ಯತ್ನಿಸುತ್ತಾರೆ. ಅವರು ಒಡ್ಡುವ ಮಾನಸಿಕ ಒತ್ತಡ ಎಷ್ಟಿರುತ್ತದೆ ಎಂದರೆ ಸಂತ್ರಸ್ತರು ದಿಗಿಲುಗೊಳ್ಳುತ್ತಾರೆ ಎಂದು ಪ್ರಧಾನಿ ಹೇಳಿದ್ದಾರೆ.
ಡಿಜಿಟಲ್ ಅರೆಸ್ಟ್ ಎಂದರೇನು?
ಡಿಜಿಟಲ್ ಅರೆಸ್ಟ್ ಸೈಬರ್ ವಂಚನೆಯ ಹೊಸ ವಿಧಾನವಾಗಿದೆ. ಇದರಲ್ಲಿ ವಂಚಕರು ಕಾನೂನು ಅಧಿಕಾರಿಗಳಂತೆ ಪೋಸ್ ನೀಡುತ್ತಾರೆ ಮತ್ತು ಆಡಿಯೊ ಅಥವಾ ವೀಡಿಯೊ ಕರೆಗಳಲ್ಲಿ ಜನರನ್ನು ಬೆದರಿಸುತ್ತಾರೆ. ಬಂಧನದ ಸುಳ್ಳು ನೆಪದಲ್ಲಿ ಡಿಜಿಟಲ್ ಒತ್ತೆಯಾಳುಗಳನ್ನಾಗಿ ಮಾಡಿ ಹಣ ಪೀಕುತ್ತಾರೆ.
ಡಿಜಿಟಲ್ ಅರೆಸ್ಟ್‌ಗೆ ಸಂಬಂಧಿಸಿದ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆ ಇವುಗಳ ತನಿಖೆಗಾಗಿ ಕೇಂದ್ರ ಗೃಹ ಸಚಿವಾಲಯವು ಈಗಾಲೇ ಉನ್ನತ ಮಟ್ಟದ ಸಮಿತಿ ರಚಿಸಿದೆ. ಮೂಲಗಳ ಪ್ರಕಾರ, ಸಮಿತಿಯು ಗೃಹ ಸಚಿವಾಲಯದ ಆಂತರಿಕ ಭದ್ರತಾ ಕಾರ್ಯದರ್ಶಿಯ ಮೇಲ್ವಿಚಾರಣೆಯಲ್ಲಿರಲಿದೆ. ಪ್ರಸಕ್ತ ವರ್ಷದಲ್ಲಿ ಈವರೆಗೂ 6,000ಕ್ಕೂ ಹೆಚ್ಚು ಡಿಜಿಟಲ್ ಅರೆಸ್ಟ್ ದೂರುಗಳು ದಾಖಲಾಗಿವೆ. ಹಗರಣಕ್ಕೆ ಸಂಬಂಧಿಸಿದಂತೆ 6 ಲಕ್ಷ ಮೊಬೈಲ್ ಸಂಖ್ಯೆಗಳನ್ನು ನಿರ್ಬಂಧಿಸಿದೆ. ಸೈಬರ್ ಅಪರಾಧ ಸಮನ್ವಯ ಕೇಂದ್ರವು ಕನಿಷ್ಠ 709 ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಿದೆ. ಸೈಬರ್ ವಂಚನೆಗೆ ಸಂಬಂಧಿಸಿದ 3.25 ಲಕ್ಷ ನಕಲಿ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳು ಆದೇಶಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೋಸ ಹೋಗದಿರಲು ಈ ಅಂಶ ಗಮನಿಸಬೇಕು
- ಕರೆ ಮಾಡಿ ಹಣ ಅಕ್ರಮ ವರ್ಗಾವಣೆ, ಡ್ರಗ್ ಕಳ್ಳಸಾಗಣೆಯಂತಹ ಆರೋಪ ಮಾಡಿದ ಸಂದರ್ಭದಲ್ಲಿ ಆತಂಕ ಗೊಳ್ಳಬೇಡಿ. ನಿಮ್ಮ ಭಯ ಮತ್ತು ಆತುರವನ್ನೇ ವಂಚಕರು ಬಂಡವಾಳವಾಗಿ ಮಾಡಿಕೊಳ್ಳುತ್ತಾರೆ.
- ಫೋನ್ ಅಥವಾ ಸಾಮಾಜಿಕ ಮಾಧ್ಯಮಗಳ ಮೂಲಕ ವೈಯಕ್ತಿಕ ಮಾಹಿತಿ, ಬ್ಯಾಂಕ್ ಮಾಹಿತಿಯನ್ನು ಹಂಚಿಕೊಳ್ಳಬೇಡಿ
- ವಂಚಕರಿಗೆ ಪ್ರತಿಕ್ರಿಯಿಸುವ ಮುನ್ನ ತಾಳ್ಮೆಯಿಂದ ಯೋಚಿಸಿ. ಒತ್ತಡದಲ್ಲಿದ್ದಾಗ ಹಣ ವರ್ಗಾವಣೆ ಮಾಡಬೇಡಿ. ತನಿಖಾ ಸಂಸ್ಥೆಗಳು ತಕ್ಷಣ ಹಣ ವರ್ಗಾವಣೆ ಮಾಡುವಂತೆ ಎಂದಿಗೂ ಒತ್ತಡ ಹೇರುವುದಿಲ್ಲ. ಫೋನ್ ಅಥವಾ ಆನ್‌ಲೈನ್ ಮೂಲಕ ಹಣಕ್ಕೆ ಬೇಡಿಕೆ ಇಟ್ಟಲ್ಲಿ ಬಹುತೇಕ ಅದು ಆನ್‌ಲೈನ್ ವಂಚನೆಯೇ ಆಗಿರುತ್ತದೆ
- ಆನ್‌ಲೈನ್ ವಂಚನೆಯ ಅನುಮಾನ ಬಂದರೆ, ಸಂಬಂಧಿತ ಸಂಸ್ಥೆಗಳನ್ನು ಸಂಪರ್ಕಿಸಿ ಪರಿಶೀಲಿಸಿ ಎಚ್ಚರಿಕೆಯಿಂದ ಇರುವುದು ಆನ್‌ಲೈನ್ ವಂಚನೆಯಿಂದ ಪಾರಾಗುವ ಪ್ರಮುಖ ʻಅಸ್ತ್ರʼ.
Leave a Comment