ʼಏಳು ದಿನಗಳೊಳಗೆ ಸಮರ್ಪಕ ಉತ್ತರ ಬೇಕುʼ; ಕೊಹ್ಲಿ ಸಹ ಮಾಲೀಕತ್ವದ ಪಬ್ಗೆ ಬಿಬಿಎಂಪಿ ನೋಟಿಸ್
ನ್ಯೂಸ್ ಆ್ಯರೋ: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಇರುವ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಸಹಮಾಲೀಕತ್ವದ ಒನ್ 8 ಕಮ್ಯೂನ್ ಬಾರ್ ಆ್ಯಂಡ್ ರೆಸ್ಟೋರೆಂಟ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಿಸಿ ಮುಟ್ಟಿಸಿದೆ. ಒನ್ 8 ಕಮ್ಯೂನ್ ಬಾರ್ ಆ್ಯಂಡ್ ರೆಸ್ಟೋರೆಂಟ್ (One 8 Commune Pub) ನಲ್ಲಿ ಅಗ್ನಿ ಸುರಕ್ಷತೆ ಅಳವಡಿಸಿಲ್ಲ ಮತ್ತು ಅಗ್ನಿಶಾಮಕ ದಳದ ಪ್ರಮಾಣ ಪತ್ರ ಪಡೆಯದೇ ಕಾನೂನು ಉಲ್ಲಂಘನೆ ಮಾಡಿದ್ದಕ್ಕೆ ನೋಟಿಸ್ ನೀಡಿದೆ.
ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಎಂಬುವರು ಈ ಬಗ್ಗೆ ಪಾಲಿಕೆಗೆ ದೂರು ನೀಡಿದ್ದರು. ದೂರು ಆಧರಿಸಿ ಶಾಂತಿನಗರ ಪಾಲಿಕೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಈ ಹಿಂದೆ ಕೂಡ ಒಂದು ಬಾರಿ ನೋಟಿಸ್ ನೀಡಿದ್ದರೂ ಕೊಹ್ಲಿ ಮಾಲೀಕತ್ವದ ಬಾರ್ ಆ್ಯಂಡ್ ರೆಸ್ಟೋರೆಂಟ್ ಉತ್ತರಿಸದೇ ನಿರ್ಲಕ್ಷ್ಯ ವಹಿಸಿತ್ತು. ಇದೀಗ ಏಳು ದಿನದೊಳಗೆ ಸಮಜಾಯಿಸಿ ನೀಡದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಈ ಸಂಬಂಧ ದೂರುದಾರ, ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಮಾತನಾಡಿ, ಬೆಂಗಳೂರು ನಗರದಲ್ಲಿ ಇರುವಂತಹ ಹಲವಾರು ರೆಸ್ಟೋರೆಂಟ್ ಬಾರ್ ಹಾಗೂ ಪಬ್ಗಳು ಅಗ್ನಿ ಶಾಮಕದಳದ ಯಾವುದೇ ಸುರಕ್ಷಿತೆಗಳು ಇಲ್ಲ. ಈ ಹಿಂದೆ ಬೆಂಗಳೂರಿನಲ್ಲಿ ಅಗ್ನಿ ಅವಘಡಗಳು ನಡೆದಾಗ ಹಲವಾರು ಜನ ಸಾವು ನೋವು ಅನುಭವಿಸಿದ್ದಾರೆ. ಕಾರ್ಲ್ಟನ್ ಭವನದಲ್ಲಿ ಶಾರ್ಟ್ ಸರ್ಕ್ಯೂಟ್ ಆದಾಗ ಅಗ್ನಿ ಅವಘಡದಿಂದ ಜೀವ ಉಳಿಸಿಕೊಳ್ಳಲು ಮಹಡಿಯಿಂದ ಜನ ಜಿಗಿದಿದ್ದರು. ಇಂತಹ ಅವಘಡಗಳು ಮರುಕಳಿಸಬಾರದು ಅಂತ ಬಿಬಿಎಂಪಿ ಹಾಗೂ ಅಗ್ನಿ ಶಾಮಕದಳ ಅಗ್ನಿ ಸುರಕ್ಷತೆ ಕಡ್ಡಾಯಗೊಳಿಸಿದೆ ಎಂದು ಹೇಳಿದರು.
ಸುಮಾರು ಕಟ್ಟಡಗಳಲ್ಲಿ ಅಗ್ನಿ ಶಾಮಕ ಸುರಕ್ಷಿತೆ ಕ್ರಮಗಳು ಇಲ್ಲದಿರುವುದರಿಂದ ಅಂತಹ ಕಟ್ಟಡಗಳಿಗೆ ಲೈಸೆನ್ಸ್ ಕೊಡಬಾರದು. ಅಗ್ನಿ ಸುರಕ್ಷತೆ ಇರದ ಕಟ್ಟಡಗಳಲ್ಲಿ ಕಾರ್ಯಚಟುವಟಿಕೆ ಮಾಡದಂತೆ ನಿಯಮ ತರಲಾಗಿದೆ. ಆದರೆ, ನಿಯಮಗಳನ್ನು ಮೀರಿ ಪಬ್ಗಳನ್ನು ನಡೆಸಲಾಗುತ್ತಿದೆ ಎಂದರು.
ಇನ್ನು ಈ ಹಿಂದೆ ಸರ್ಕಾರ ನಿಯಮವನ್ನು ಗಾಳಿಗೆ ತೂರಿ ತಡರಾತ್ರಿವರೆಗೂ ಪಬ್ ತೆರೆದು ಪಾರ್ಟಿಗೆ ಅನುವು ಮಾಡಿಕೊಟ್ಟಿದ್ದಕ್ಕಾಗಿ ಒನ್ 8 ಕಮ್ಯೂನ್ ಬಾರ್ ಆ್ಯಂಡ್ ರೆಸ್ಟೋರೆಂಟ್ ವ್ಯವಸ್ಥಾಪಕರ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಡರಾತ್ರಿ 1.20ರವರೆಗೂ ಪಬ್ ಓಪನ್ ಮಾಡಿದ್ದ ಆರೋಪದಡಿ ಎಫ್ಐಆರ್ ದಾಖಲಾಗಿತ್ತು.
Leave a Comment