ಮದರಸಾ ಶಿಕ್ಷಣ ಕಾಯ್ದೆಯ ಸಿಂಧುತ್ವ ಎತ್ತಿ ಹಿಡಿದ ಸುಪ್ರೀಂ; ಮಹತ್ವದ ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್
ನ್ಯೂಸ್ ಆ್ಯರೋ: ಮಹತ್ವದ ಬೆಳವಣಿಗೆಯಲ್ಲಿ ಮಂಗಳವಾರ ಉತ್ತರಪ್ರದೇಶ ಮದರಸಾ ಶಿಕ್ಷಣ ಕಾಯ್ದೆಯ ಮಹತ್ವವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ.
ಹೌದು.. ಉತ್ತರ ಪ್ರದೇಶದ ಮದರಸಾ ಕಾನೂನನ್ನು ಅಸಂವಿಧಾನಿಕ ಎಂದು ಘೋಷಿಸಿದ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಮೇಲಿನ ತೀರ್ಪನ್ನು ಸುಪ್ರೀಂ ಕೋರ್ಟ್ ಮಂಗಳವಾರ ಪ್ರಕಟಿಸಿದೆ. ತನ್ನ ಆದೇಶದಲ್ಲಿ, ನ್ಯಾಯಾಲಯವು ಕಾನೂನನ್ನು ಸಾಂವಿಧಾನಿಕ ಎಂದು ಹೇಳಿದೆ.
ಆದಾಗ್ಯೂ, ಮದರಸಾ ಕಾಯಿದೆಯು ಫಝಿಲ್ ಮತ್ತು ಕಾಮಿಲ್ ಪದವಿಗಳಿಗೆ ಸಂಬಂಧಿಸಿದಂತೆ ಉನ್ನತ ಶಿಕ್ಷಣವನ್ನು ನಿಯಂತ್ರಿಸುವ ಮಟ್ಟಿಗೆ, ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ (ಯುಜಿಸಿ) ಕಾಯಿದೆಯೊಂದಿಗೆ ಸಂಘರ್ಷದಲ್ಲಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಸೀಮಿತ ವಿಷಯದಲ್ಲಿ, ಇದು ಅಸಂವಿಧಾನಿಕ ಎಂದು ಪರಿಗಣಿಸಲಾಗಿದೆ.
ಉತ್ತರ ಪ್ರದೇಶ ಬೋರ್ಡ್ ಆಫ್ ಮದರಸಾ ಎಜುಕೇಶನ್ ಆಕ್ಟ್ 2004′ ರ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಶಿಕ್ಷಣದ ಗುಣಮಟ್ಟವನ್ನು ನಿಗದಿಪಡಿಸುವುದು ಸರ್ಕಾರದ ಹಕ್ಕು ಎಂದೂ ನ್ಯಾಯಾಲಯ ಹೇಳಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಹೈಕೋರ್ಟ್ ತೀರ್ಪಿನ ವಿರುದ್ಧ ಅಂಜುಮ್ ಕಡಾರಿ ಸಲ್ಲಿಸಿದ ಪ್ರಮುಖ ಸೇರಿದಂತೆ 8 ಅರ್ಜಿಗಳ ತೀರ್ಪನ್ನು ಅಕ್ಟೋಬರ್ 22 ರಂದು ಕಾಯ್ದಿರಿಸಿತ್ತು.
ಮಾರ್ಚ್ 22 ರಂದು, ಅಲಹಾಬಾದ್ ಹೈಕೋರ್ಟ್ ಈ ಕಾಯ್ದೆಯನ್ನು ಅಸಂವಿಧಾನಿಕ ಮತ್ತು ಜಾತ್ಯತೀತತೆಯ ತತ್ವದ ಉಲ್ಲಂಘನೆ ಎಂದು ಘೋಷಿಸಿತ್ತು. ಏಪ್ರಿಲ್ 5 ರಂದು, ಸಿಜೆಐ ನೇತೃತ್ವದ ಪೀಠವು ಉತ್ತರ ಪ್ರದೇಶ ಬೋರ್ಡ್ ಆಫ್ ಮದರಸಾ ಎಜುಕೇಶನ್ ಆಕ್ಟ್, 2004 ಅನ್ನು ರದ್ದುಗೊಳಿಸಿದ ಹೈಕೋರ್ಟ್ ತೀರ್ಪಿಗೆ ತಡೆಯಾಜ್ಞೆ ನೀಡಿತ್ತು.ಆ ಮೂಲಕ ಸುಮಾರು 17 ಲಕ್ಷ ಮದರಸಾ ವಿದ್ಯಾರ್ಥಿಗಳಿಗೆ ಉಸಿರು ನೀಡಿದ್ದು, ಸುಪ್ರೀಂ ಕೋರ್ಟ್‌ನ ತೀರ್ಪಿನಿಂದ ಮದರಸಾಗಳಿಗೆ ಸರ್ಕಾರಿ ಮಾನ್ಯತೆ ಸಿಗಲು ದಾರಿ ಸುಗಮವಾಗಿದೆ. ಮದರಸಾಗಳ ಶಿಕ್ಷಣ ಮಟ್ಟವನ್ನು ಸುಧಾರಿಸಲು ಮತ್ತು ಅವರಿಗೆ ಮಾನ್ಯತೆ ನೀಡಲು ಈ ಕಾಯ್ದೆಯನ್ನು ಮಾಡಲಾಗಿದೆ. ಶಿಕ್ಷಣದ ಗುಣಮಟ್ಟವನ್ನು ನಿಗದಿಪಡಿಸುವುದು ಸರ್ಕಾರದ ಹಕ್ಕು ಎಂದು ನ್ಯಾಯಾಲಯ ಹೇಳಿದೆ.
Leave a Comment