IND va SL ODI SERIES : ವಾಂಡರ್ಸೆ ಸ್ಪಿನ್ ಕೈಚಳಕಕ್ಕೆ ಬಾಲ ಮುದುರಿಕೊಂಡ ಟೀಂ ಇಂಡಿಯಾ - ಸಿಂಹಳೀಯರಿಗೆ 32 ರನ್ ಗಳ ಗೌರವಾರ್ಹ ಗೆಲುವು
ನ್ಯೂಸ್ ಆ್ಯರೋ : ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಭಾರತದ ವಿರುದ್ಧ ಶ್ರೀಲಂಕಾ 32 ರನ್‌ಗಳ ಜಯ ಸಾಧಿಸಿದ್ದು, ಸ್ಪಿನ್ ಬೌಲಿಂಗ್ ಮೂಲಕ ಟೀಂ ಇಂಡಿಯಾವನ್ನು ಕಟ್ಟಿ ಹಾಕಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ತಂಡ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 240 ರನ್ ಗಳಿಸಿದರೆ, ಭಾರತ 42.2 ಓವರ್ ಗಳಲ್ಲಿ 208 ರನ್ ಗಳಿಗೆ ಆಲೌಟ್ ಆಯಿತು.
ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ಪರ ಆವಿಷ್ಕಾ ಫೆರ್ನಾಂಡೋ ಮತ್ತು ಕಮಿಂದು ಮೆಂಡಿಸ್ ತಲಾ 40 ರನ್ ಗಳ ಕೊಡುಗೆಯಿತ್ತರೆ, ದುನಿತ್ ವೆಲ್ಲಾಲಗೆ 39 ರನ್ ಗಳಿಸಿ ಶ್ರೀಲಂಕಾ ಸವಾಲಿನ ಮೊತ್ತ ಪೇರಿಸಲು ಕಾರಣವಾದರು.
ಗೆಲುವಿಗೆ 241 ರನ್ ಗಳಿಸಬೇಕಾಗಿದ್ದ ಭಾರತ, ನಾಯಕ ರೋಹಿತ್ ಶರ್ಮಾ ಅವರ ಭರ್ಜರಿ ಬ್ಯಾಟಿಂಗ್ ನಿಂದಾಗಿ 13.2 ಓವರ್ ಗಳಲ್ಲಿ 97 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು. ಆದರೆ ರೋಹಿತ್ ಶರ್ಮಾ ಔಟಾದ ಬಳಿಕ ಬ್ಯಾಟಿಂಗ್ ಕುಸಿತ ಅನುಭವಿಸಿದ ಭಾರತ 208 ರನ್ ಗಳಿಗೆ ಸರ್ವಪತನ ಕಂಡಿತು.
ಟೀಂ ಇಂಡಿಯಾ ಪರ ಆರು ಬ್ಯಾಟ್ಸ್‌ಮನ್ ಗಳು ಎರಡಂಕಿ ಮೊತ್ತ ಗಳಿಸಲೂ ಕೂಡ ಪರದಾಡಿದರು. ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ಶಿವಂ ದುಬೆ ಬ್ಯಾಟಿಂಗ್ ಮರೆತವರಂತೆ ಆಡಿದ್ದು ಅಚ್ಚರಿ ಮೂಡಿಸಿತು. ಅಕ್ಷರ್ ಪಟೇಲ್ 44 ರನ್ ಗಳಿಸಿದರೆ, ವಾಷಿಂಗ್ಟನ್ ಸುಂದರ್ ಅಕ್ಷರ್ ಪಟೇಲ್ ಗೆ ಕೊಂಚ ಸಮಯ ಜೊತೆ ನೀಡಿದರು. ಉಳಿದ ಬ್ಯಾಟ್ಸ್‌ಮನ್ ಗಳು ಜವಾಬ್ದಾರಿ ಮರೆತಂತೆ ಆಡಿದ್ದು ಭಾರತಕ್ಕೆ ಮುಳುವಾಯಿತು.
ಗಾಯಗೊಂಡು ತಂಡದಿಂದ ಹೊರಬಿದ್ದ ವನಿಂದು ಹಸರಂಗ ಬದಲಾಗಿ ಶ್ರೀಲಂಕಾ ಪರ ಆಡಿದ ಜೆಫ್ರಿ ವಾಂಡರ್ಸೆ ಭಾರತದ ಬ್ಯಾಟಿಂಗ್ ನ ಬೆನ್ನೆಲುಬು ಮುರಿದರು. ತಿರುವು ನೀಡುತ್ತಿದ್ದ ಪಿಚ್ ನಲ್ಲಿ ಭಾರತೀಯ ಬ್ಯಾಟ್ಸ್‌ಮನ್ ಗಳನ್ನು ಕುಣಿಸಿದ ವಾಂಡರ್ಸೆ ಆರು ವಿಕೆಟ್ ಪಡೆದು ಕುಪ್ಪಳಿಸಿದರು. ನಾಯಕ ಚರಿತ್ ಅಸಲಂಕಾ ಮೂರು ವಿಕೆಟ್ ಗಳ ಬೇಟೆಯಾಡಿದರು.
ಇಂದೂ ಕೂಡ ಅಸಂಬದ್ಧ ರೀತಿಯ ಪ್ರಯೋಗಕ್ಕಿಳಿದ ಗಂಭೀರ್ ಪರೋಕ್ಷವಾಗಿ ಟೀಂ ಇಂಡಿಯಾ ಸೋಲಿಗೆ ಮುನ್ನುಡಿ ಬರೆದರು. ಗಿಲ್ ಔಟಾದ ಬಳಿಕ ಶಿವಂ ದುಬೆಗೆ ಭಡ್ತಿ ನೀಡಿ ಕಳುಹಿಸಿದ್ದು, ಬ್ಯಾಟಿಂಗ್ ಆರ್ಡರ್ ಮೇಲೆ ಕೆಟ್ಟ ಪರಿಣಾಮ ಬೀರಿತು. ಶಿವಂ ದುಬೆ ಬಂದಷ್ಟೇ ವೇಗವಾಗಿ ಹಿಂದಿರುಗಿದರೆ ಮತ್ತೆ ಬಂದ ಅಯ್ಯರ್, ರಾಹುಲ್ ಬಂದ ಪುಟ್ಟ ಹೋದ ಪುಟ್ಟ ಎಂಬಂತೆ ನಿರ್ಗಮಿಸಿದ್ದು ಟೀಂ ಇಂಡಿಯಾಗೆ ಭಾರೀ ಪೆಟ್ಟು ನೀಡಿತು.
Leave a Comment