ಬೀದಿ ನಾಯಿಗಳ ಹಾವಳಿ ತಡೆಯಲು ಸ್ವೀಕರ್ ನಿಂದ ಮಹತ್ವದ ನಿರ್ಧಾರ; ಇದು ಇತಿಹಾಸದಲ್ಲೇ ಮೊದಲು! ಏನು ಗೊತ್ತಾ?
ನ್ಯೂಸ್ ಆ್ಯರೋ: ‘ವಿಧಾನಸೌಧದಲ್ಲಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಅಧಿಕಾರಿಗಳ ಸಭೆ ಶೀಘ್ರದಲ್ಲಿ ನಡೆಯಲಿದೆ’ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, “ವಿಧಾನಸೌಧ ಬಳಿ ಹಿಂದಿನಿಂದಲೂ ನಾಯಿಗಳ ಹಾವಳಿ ಇದೆ. ವಿಧಾನಸೌಧ ಬಳಿ ಇರುವ ನಾಯಿಗಳ ಬಗ್ಗೆ ಸಾರ್ವಜನಿಕರದು ಭಿನ್ನ ಅಭಿಪ್ರಾಯಗಳಿವೆ. ಕೆಲವರು ನಾಯಿಯಿಂದ ಯಾವುದೇ ಸಮಸ್ಯೆ ಇಲ್ಲವೆಂದರೆ, ಇನ್ನೂ ಕೆಲವರು ನಾಯಿಗಳಿಂದ ಸಮಸ್ಯೆ ಆಗುತ್ತದೆ ಎನ್ನುತ್ತಾರೆ. ಬೆಳಗಿನ ಸಮಯದಲ್ಲಿ ನಾಯಿಗಳು ವಾಕಿಂಗ್ ಬರುವವರಿಗೂ ತೊಂದರೆ ಕೊಡುತ್ತವೆ ಎಂಬ ಅಭಿಪ್ರಾಯವಿದೆ. ನಾಯಿಗಳು ಇಲ್ಲಿಯೇ ಬೀಡು ಬಿಟ್ಟಿದ್ದು, ಇವುಗಳ ಹಾವಳಿಯನ್ನು ತಡೆಯಲು ಮುಂದಾಗಬೇಕಾಗಿದೆ” ಎಂದರು.
ಈ ನಿಟ್ಟಿನಲ್ಲಿ ಅಧಿಕಾರಿಗಳು ಶೀಘ್ರದಲ್ಲಿ ಸಭೆ ನಡೆಸಲಿದ್ದಾರೆ. ವಿಧಾನಸಭೆಯ ಚೀಫ್ ಸೆಕ್ರೆಟರಿ, ಪ್ರಾಣಿ ದಯಾ ಸಂಘದ ಸದಸ್ಯರು ಈ ಸಭೆಯಲ್ಲಿ ಇರಲಿದ್ದಾರೆ. ಈ ಸಭೆಯಲ್ಲಿ ವಿಧಾನಸೌಧದ ಬಳಿ ಇರುವ ನಾಯಿಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು” ಎಂದು ಸ್ಪೀಕರ್ ತಿಳಿಸಿದರು.
ಇನ್ನೂ ತಜ್ಞರಿಗೆ ವರದಿ ನೀಡುವಂತೆ ವಿಧಾನಸಭೆ ಸಭಾಧ್ಯಕ್ಷರು ಸೂಚನೆ ನೀಡಿದ್ದಾರೆ. ಇಂದಿನ ಸಭೆಯಲ್ಲಿ ಶ್ವಾನಗಳ ಸ್ಥಳಾಂತರ ಬೇಡವೆಂದು ತಜ್ಞರು ಸಲಹೆ ನೀಡಿದ್ದಾರೆ. ಹೀಗಾಗಿ ವಿಧಾನಸೌಧದ ಆವರಣದಲ್ಲೇ ಶ್ವಾನಗಳಿಗೆ ಶೆಲ್ಟರ್ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದೆ. ಇದು ಇತಿಹಾಸದಲ್ಲೇ ಐತಿಹಾಸಿಕ ನಿರ್ಧಾರಕ್ಕೆ ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಮುಂದಾಗಿದ್ದಾರೆ.
ಅಂದಾಜಿನ ಪ್ರಕಾರ ವಿಧಾನಸೌಧದಲ್ಲಿ 100ಕ್ಕೂ ಹೆಚ್ಚು ಶ್ವಾನಗಳಿವೆ. ಆದರೆ ಅಧಿಕೃತವಾಗಿ 54 ಶ್ವಾನಗಳಿರುವ ಮಾಹಿತಿ ಸಿಕ್ಕಿದೆ. ಆ ಶ್ವಾನಗಳಿಗೆ ಲೋಕೋಪಯೋಗಿ ಇಲಾಖೆಯೊಂದಿಗೆ ಚರ್ಚಿಸಿ ಶೆಲ್ಟರ್ ವ್ಯವಸ್ಥೆ ಮಾಡಲು ನಿರ್ಧಾರ ಮಾಡಲಾಗಿದೆ. ಪ್ರಾಣಿದಯಾ ಸಂಘಕ್ಕೆ ಈ ಶ್ವಾನಗಳ ಶೆಲ್ಟರ್ ನಿರ್ವಹಣೆ ಉಸ್ತುವಾರಿ ನೀಡಲಿದ್ದಾರೆ. ಶ್ವಾನಗಳಿಗೆ ರೇಬಿಸ್ ಔಷಧಿ ನೀಡುವ ಕುರಿತಾಗಿಯೂ ಚರ್ಚೆಯಾಗಿದೆ.
Leave a Comment