1999ರಿಂದ 2004 ಮುಖ್ಯಮಂತ್ರಿಯಾಗಿ ಎಸ್ಎಂ ಕೃಷ್ಣ ಸೇವೆ; ಕರ್ನಾಟಕಕ್ಕೆ ಧೀಮಂತ ನಾಯಕನ ಕೊಡುಗೆಗಳೇನು?
ನ್ಯೂಸ್ ಆ್ಯರೋ: ರಾಜಕೀಯದಲ್ಲಿ ಹಿರಿಮೆಯ ಹೆಗ್ಗುರುತು ಊರಿದ್ದ ಕನ್ನಡ ನಾಡು ಕಂಡ ಧೀಮಂತ ನಾಯಕ ಎಸ್.ಎಂ ಕೃಷ್ಣ ಅವರು ವಿಧಿವಶರಾಗಿದ್ದಾರೆ. ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಕೃಷ್ಣ ಅವರು ಬೆಂಗಳೂರಿನ ಸದಾಶಿವ ನಗರ ನಿವಾಸದಲ್ಲಿ ಅಗಲಿದ್ದಾರೆ. ಹಿರಿಯ ಚೇತನನ ಅಗಲಿಕೆಗೆ ಇಡೀ ಕರ್ನಾಟಕ ಕಂಬನಿ ಮಿಡಿಯುತ್ತಿದ್ದು, ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.
1932ರಲ್ಲಿ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ಜನಿಸಿದ್ದ ಎಸ್ಎಂ ಕೃಷ್ಣ 1962ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿದರು. ನಂತರದ ದಿನಗಳಲ್ಲಿ ವಿಧಾನ ಪರಿಷತ್, ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರಾಗಿ ಸುಮಾರು 60ಕ್ಕೂ ಹೆಚ್ಚು ವರ್ಷಗಳ ಸುದೀರ್ಘ ರಾಜಕೀಯ ಸೇವೆ ಸಲ್ಲಿಸಿ ದೊಡ್ಡ ಹೆಜ್ಜೆ ಗುರುತನ್ನು ಬಿಟ್ಟು ಹೋಗಿದ್ದಾರೆ.
ರಾಜಕೀಯ ಜೀವನದಲ್ಲಿ ಅವರು ಒಟ್ಟು 10 ಚುನಾವಣೆಗಳನ್ನು ಎದುರಿಸಿದ್ದರು. 6 ವಿಧಾನಸಭಾ ಚುನಾವಣೆಗಳನ್ನು ಎದುರಿಸಿದ್ದು ಇವುಗಳಲ್ಲಿ 4 ರಲ್ಲಿ ಗೆಲುವು, 2 ಚುನಾವಣೆಯಲ್ಲಿ ಸೋಲನ್ನು ಕಂಡಿದ್ದರು. 4 ಲೋಕಸಭಾ ಚುನಾವಣೆಗಳನ್ನು ಎದುರಿಸಿದ್ದು ಈ ಪೈಕಿ 3 ಚುನಾವಣೆಯಲ್ಲಿ ಗೆಲುವು ಪಡೆದು, 1 ಚುನಾವಣೆಯಲ್ಲಿ ಸೋಲು ಕಂಡಿದ್ದರು. ಮದ್ದೂರು ಕ್ಷೇತ್ರದಿಂದ 3 ಬಾರಿ ಹಾಗೂ ಚಾಮರಾಜಪೇಟೆಯಿಂದ 1 ಬಾರಿ ಶಾಸಕರಾಗಿದ್ದರು. ಮೂರು ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿದ್ದರು. 1 ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು. 2 ಬಾರಿ ರಾಜ್ಯಸಭಾ ಸದಸ್ಯರಾಗಿದ್ದರು.
ಮೊಟ್ಟ ಮೊದಲ ಬಾರಿಗೆ ಬ್ರಾಂಡ್ ಬೆಂಗಳೂರಿನ ಕನಸು ಕಂಡು ಅದರ ಸಾಕಾರಕ್ಕೆ ಹೆಜ್ಜೆ
ಭಷ್ಟ್ರ ಅಧಿಕಾರಿಗಳ ದುಸ್ವಪ್ನವಾಗಿದ್ದ ಎನ್.ವೆಂಕಟಾಚಲರನ್ನು ಲೋಕಾಯುಕ್ತಕ್ಕೆ ನೇಮಕ
ಲೋಕಾಯುಕ್ತ ಸಂಸ್ಥೆಯನ್ನ ಬೆಳಕಿಗೆ ತಂದ ಸಾಧನೆ
ಭೂ ದಾಖಲೆಗಳನ್ನ ಮೊದಲ ಬಾರಿಗೆ ಡಿಜಿಟಲಿಕರಣ ಮಾಡಿದ್ದೇ ಕೃಷ್ಣ
ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಬಿಸಿ ಊಟದ ಯೋಜನೆ ಜಾರಿ
ಸಹಕಾರ ಸಂಸ್ಥೆಗಳ ಸದಸ್ಯರಿಗೆ ಯಶಸ್ವಿನಿ ಯೋಜನೆ ಮೂಲಕ ಆರೋಗ್ಯ ವಿಮೆ
ಅಂತರ್ಜನ ಹೆಚ್ಚಿಸಲು ಜಲಸಂವರ್ಧನೆ ಯೋಜನೆ ಮೂಲಕ ಕೆರೆ ತುಂಬಿಸೋ ಕೆಲಸ
ಬ್ರಾಂಡ್ ಬೆಂಗಳೂರಿನ ಮೂಲಕ ಬೆಂಗಳೂರನ್ನು ಸಿಂಗಾಪುರ ಮಾಡಲು ಹೊರಟಿದ್ದರು
ಕೊನೆಗೆ ಕೇವಲ ನಗರಗಳ ಸಿಎಂ ಎಂಬ ವಿಪಕ್ಷಗಳ ಟೀಕೆ ಗುರಿಯಾಗಿದ್ದ ಎಸ್.ಎಂ.ಕೃಷ್ಣ
ಹೌದು. . ಎಸ್ಎಂ ಕೃಷ್ಣ ಅವರು ಹಲವು ಯೋಜನೆಗಳಲ್ಲಿ ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘ ಕೂಡ ಒಂದು. ಮಹಿಳೆಯರ ಸಬಲೀಕರಣಕ್ಕಾಗಿ ಮತ್ತು ಆರ್ಥಿಕ ಸ್ವಾವಲಂಬನೆಗಾಗಿ ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘ ಆರಂಭಿಸಿದರು. ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘ ಮನೆ ಮನೆ ತಲುಪಿದ್ದು, ಇದರಿಂದ ಕೋಟ್ಯಾಂತರ ಮಹಿಳೆಯರು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.
ಕರ್ನಾಟಕದ ಅಸಂಘಟಿತ ವಲಯದ ಕಾರ್ಮಿಕರು, ಮಧ್ಯಮ ಮತ್ತು ಕಡಿಮೆ-ಮಧ್ಯಮ ಆದಾಯ ಹೊಂದಿದವರನ್ನು ಕೇಂದ್ರೀಕರಿಸಿ, ಎಲ್ಲರಿಗೂ ಕೈಗೆಟುಕುವ ಆರೋಗ್ಯ ಸೇವೆಯನ್ನು ನೀಡಲು ಯಶಸ್ವಿನಿ ಯೋಜನೆ ಆರಂಭಿಸಿದರು. ಇದರಿಂದ ಪ್ರತಿಯಿಬ್ಬರಿಗೂ ಹೆಚ್ಚು ಅಗತ್ಯವಿರುವಾಗ ಉನ್ನತ ಗುಣಮಟ್ಟದ ಆರೋಗ್ಯ ಪಡೆಯಬಹುದಾಗಿದೆ.
ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಭೂಮಿ ಕಳೆದುಕೊಂಡವರಿಗೆ 2003-2004ರ ಅವಧಿಯಲ್ಲಿ ಎಸ್ಎಂ ಕೃಷ್ಣ ಪರಿಹಾರ ಘೋಷಣೆ ಮಾಡಿದ್ದರು. ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಭೂಮಿ ಕಳೆದುಕೊಂಡವರು ಪರಿಹಾರಕ್ಕೆ ಆಗ್ರಹಿಸಿ ಬಾಗಲಕೋಟೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಮುಖ್ಯಮಂತ್ರಿಗಳು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದಿದ್ದರು. ಆಗ, ಎಸ್ಎಂ ಕೃಷ್ಣ ಅವರು ಸಚಿವ ಸಂಪುಟ ಸಮೇತ ಬಾಗಲಕೋಟೆ ಬಂದು, 638 ಕೋಟಿ ರೂ. ಪರಿಹಾರ ಘೋಷಣೆ ಮಾಡಿದರು.
ಎಸ್ಎಂ ಕೃಷ್ಣ ಅವರು ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಎಲ್ಲಾ ವಿದ್ಯಾರ್ಥಿಗಳಿಗೂ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಜಾರಿಗೆ ತಂದರು. ಮಧ್ಯಾಹ್ನದ ಬಿಸಿಯೂಟ ಯೋಜನೆ ಇಂದಿಗೂ ಚಾಲನೆಯಲ್ಲಿದೆ.
ಕರ್ನಾಟಕ ರಾಜಧಾನಿ ಬೆಂಗಳೂರಿಗೆ ಸಿಲಿಕಾನ್ ಸಿಟಿ ಅಥವಾ ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ ಎಂಬ ಹೆಸರು ಬರಲು ಎಸ್ಎಂ ಕೃಷ್ಣ ಅವರ ಕೊಡುಗೆ ಅಪಾರವಾಗಿದೆ. ಐಟಿ-ಬಿಟಿ ಕ್ಷೇತ್ರಕ್ಕೆ ಇವರು ಅಗಾದವಾದ ಬೆಂಬಲ ನೀಡಿದರು. ಇವರ ಕಾಲದಲ್ಲಿಯೇ ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗಿದೆ. ಹಾಗೇ ರಾಜ್ಯದಲ್ಲೇ ಮೊದಲ ಫ್ಲೈ ಓವರ್ ತಲೆ ಎತ್ತಿತು.
1999ರಿಂದ 2004 ಕೃಷ್ಣ ರವರು ಮುಖ್ಯಮಂತ್ರಿಯಾಗಿ ನಾಡಿಗೆ ಸಲ್ಲಿಸಿದ ಸೇವೆ ಅವಿಸ್ಮರಣೀಯ. ಸ್ತ್ರೀ ಶಕ್ತಿ, ಅಕ್ಷರ ದಾಸೋಹ, ರೈತರಿಗೆ ಪಹಣಿ ನೀಡುವ ಭೂಮಿ ಯೋಜನೆ, ಯಶಸ್ವಿನಿ ಯೋಜನೆ ಸಮಾಜದ ಸರ್ವ ಜನರನ್ನು ಸ್ಪರ್ಶಿಸಿ ಜನಮನ ಗೆದ್ದ ಯೋಜನೆಗಳಾಗಿವೆ.
Leave a Comment