ಅಜಾತ ಶತ್ರು ಎಸ್​ಎಂ ಕೃಷ್ಣ ಚಿತೆಗೆ ಮೊಮ್ಮಗ ಅಗ್ನಿಸ್ಪರ್ಶ; ರಾಜಕೀಯ ಮುತ್ಸದಿ ಪಂಚಭೂತಗಳಲ್ಲಿ ಲೀನ

SM Krshna Cremation
Spread the love

ನ್ಯೂಸ್ ಆ್ಯರೋ: ರಾಜಕೀಯ ಮುತ್ಸದಿ ಎಸ್​ಎಂ ಕೃಷ್ಣ ಅವರ ಅಂತ್ಯಕ್ರಿಯೆ ಸರ್ಕಾರಿ ಗೌರವಗಳೊಂದಿಗೆ ಹುಟ್ಟುರಾದ ಸೋಮನಹಳ್ಳಿಯಲ್ಲಿಂದು ನಡೆಯಿತು. ವೈದಿಕ ಪಂಡಿತರಾದ ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ವಿಧಿವಿಧಾನಗಳ ಬಳಿಕ ಮೊಮ್ಮಗ ಅಮರ್ತ್ಯ ಹೆಗ್ಡೆ, ತಮ್ಮ ಅಜ್ಜ ಎಸ್.ಎಂ.ಕೃಷ್ಣ ಅವರ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಇದಕ್ಕೂ ಮೊದಲು ಶವಪೆಟ್ಟಿಗೆಯಿಂದ ಎಸ್​​ಎಂ ಕೃಷ್ಣ ಅವರ ಪಾರ್ಥಿವ ಶರೀರವನ್ನು ಹೂವಿನಿಂದ ನಿರ್ಮಿಸಲಾಗಿದ್ದ ಕುರ್ಜ್​ಗೆ(ಚಟ್ಟ) ಶಿಫ್ಟ್ ಮಾಡಲಾಗಿದ್ದು, ಬಳಿಕ ತಮ್ಮ ಗುರು ಮಲಗಿದ್ದ ಕುರ್ಜ್ ಅನ್ನು ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಅವರು ​ ಹೊತ್ತುಕೊಂಡು ಹೆಜ್ಜೆ ಹಾಕಿದರು. ಈ ಮೂಲಕ ಡಿಕೆ ಶಿವಕುಮಾರ್- ಡಿಕೆ ಸುರೇಶ್ ತಮ್ಮ ರಾಜಕೀಯ ಗುರುವಿಗೆ ಅಂತಿಮ ವಿದಾಯ ಹೇಳಿದರು.​ಈ ಮೂಲಕ ರಾಜಕೀಯ ಮುತ್ಸದಿ ಎಸ್​ಎಂಕೆ ಪಂಚಭೂತಗಳಲ್ಲಿ ಲೀನರಾದರು.

ಅಗ್ನಿ ಸ್ಪರ್ಶಕ್ಕೂ ಮುನ್ನ ಎಸ್​ಎಂ ಕೃಷ್ಣ ಅವರ ಚಿತೆಗೆ ಪತ್ನಿ ಪ್ರೇಮಾ, ಪುತ್ರಿಯರು, ಸಂಬಂಧಿಕರು ಗಂಧದ ಕಟ್ಟಿಗೆ ಇಟ್ಟು ವಿದಾಯ ಹೇಳಿದರು. ಬಳಿಕ ಮಂಡ್ಯ ಜಿಲ್ಲಾ ಪೊಲೀಸ್‌ ಇಲಾಖೆಯಿಂದ ಮೃತರ ಗೌರವಾರ್ಥವಾಗಿ ಮೂರು ಸುತ್ತು ಕುಶಾಲತೋಪು ಸಿಡಿಸಿ ಗೌರವ ಸಲ್ಲಿಸಲಾಯಿತು. ಪಾರ್ಥಿವ ಶರೀರದ ಮೇಲೆ ಹೊದಿಸಲಾಗಿದ್ದ ತ್ರಿವರ್ಣ ಧ್ವಜವನ್ನು ಗೌರವ ಪೂರ್ವಕವಾಗಿ ಎಸ್.ಎಂ.ಕೃಷ್ಣ ಅವರ ಪತ್ನಿ ಪ್ರೇಮಾ ಅವರಿಗೆ ಹಸ್ತಾಂತರಿಸಲಾಯ್ತು. ನಂತರ ಅಂತಿಮವಾಗಿ ಮೊಮ್ಮಗ ಅಮರ್ತ್ಯ ಹೆಗ್ಡೆ ಎಸ್.ಎಂ.ಕೃಷ್ಣ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

ಅಗ್ನಿ ಸಂಸ್ಕಾರದ ಮೂಲಕ ಪಂಚಗವ್ಯಾದಿಂದ ಶುದ್ಧೀಕರಣ ಮಾಡಲಾಯಿತು. ಹಾಗೇ ದೋಷ ನಿವಾರಣೆಗೆ ಗರುಡ ಪೂಜಾ ಕಾರ್ಯ, ದೋಷಗಳ ಪ್ರಾಯಶ್ಚಿತ್ತ ಮಾಡಲಾಯಿತು. ಇನ್ನು ಚಿತೆಗೆ 1 ಟನ್ ಶ್ರೀಗಂಧದ ಕಟ್ಟಿಗೆ ಜತೆ ಇತರೆ ಕಟ್ಟಿಗೆ ಹಾಗೂ 50 ಕೆಜಿ ತುಪ್ಪದಿಂದ ಅಭಿಷೇಕ ಕ್ರಿಯೆ ಕಾರ್ಯ ಮಾಡಲಾಯ್ತು.

ಇದಕ್ಕೂ ಮೊದಲು ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸ್ಪೀಕರ್‌ ಯು.ಟಿ ಖಾದರ್‌, ನಿರ್ಮಲಾನಂದನಾಥ ಸ್ವಾಮೀಜಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಎಚ್​ಡಿ ಕುಮಾರಸ್ವಾಮಿ, ಶಾಸಕರು, ಸಚಿವರು ಸೇರಿದಂತೆ ಹಲವು ರಾಜಕಾರಣಿಗಳು, ಮಠಾಧೀಶರು, ಸ್ವಾಮೀಜಿಗಳು ಸರ್ಕಾರಿ ಉನ್ನತ ಅಧಿಕಾರಿಗಳು ಎಸ್​ಎಂ ಕೃಷ್ಣ ಅವರಿಗೆ ಪುಷ್ಪ ನಮನ ಸಲ್ಲಿಸಿ ಅಗಲಿದ ನಾಯಕನಿಗೆ ವಿದಾಯ ಹೇಳಿದರು.

Leave a Comment

Leave a Reply

Your email address will not be published. Required fields are marked *

error: Content is protected !!