16ನೇ ಬಜೆಟ್ ಗೆ ಕೌಂಟ್ ಡೌನ್ ಶುರು: ರಾಜ್ಯದ ಇತಿಹಾಸದಲ್ಲೇ ಮೊದಲ ಬಿಗ್ ಬಜೆಟ್
ನ್ಯೂಸ್ ಆ್ಯರೋ: 2025-26 ನೇ ಸಾಲಿನ ಬಜೆಟ್ ಅನ್ನು ಹಣಕಾಸು ಇಲಾಖೆಯ ಜವಾಬ್ದಾರಿಯನ್ನೂ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 14 ರಂದು ಮಂಡಿಸಲಿದ್ದಾರೆ ಎನ್ನಲಾಗ್ತಿದ್ದು, ಇದು ಸಿದ್ದರಾಮಯ್ಯ ಅವರ 16ನೇ ದಾಖಲೆಯ ಬಜೆಟ್ ಮಂಡನೆಯಾಗಿರಲಿದೆ.
ರಾಜ್ಯದಲ್ಲಿ ಜುಲೈ 2023ರಲ್ಲಿ 14ನೇ ಬಜೆಟ್ ಮಂಡಿಸಿದಾಗಲೇ ಅತಿ ಹೆಚ್ಚು ಬಜೆಟ್ ಮಂಡಿಸಿದ ದಾಖಲೆ ಸಿದ್ದರಾಮಯ್ಯ ಅವರ ಹೆಸರಿನಲ್ಲಿದೆ. 2024-25ನೇ ಸಾಲಿನ ಬಜೆಟ್ ಅನ್ನು ಫೆಬ್ರವರಿ ತಿಂಗಳಲ್ಲಿ ಮಂಡಿಸಿದ್ದರು. ಇದು ಅವರ 15ನೇ ಬಜೆಟ್ ಆಗಿತ್ತು.
ಕರ್ನಾಟಕದ ಮಾಜಿ ರಾಜ್ಯಪಾಲರೂ ಆಗಿರುವ ಗುಜರಾತ್ ನ ಮಾಜಿ ಆರ್ಥಿಕ ಸಚಿವ ವಜೂಬಾಯಿ ವಾಲಾ ಅವರು 18 ಬಾರಿ ಬಜೆಟ್ ಮಂಡಿಸುವ ಮೂಲಕ ದೇಶದಲ್ಲೇ ದಾಖಲೆ ನಿರ್ಮಿಸಿದ್ದಾರೆ. ಈ ದಾಖಲೆಯನ್ನು ಮುರಿಯಬೇಕೆಂದರೆ ಸಿದ್ದರಾಮಯ್ಯ ಅವರು ಇನ್ನೂ ಎರಡು ಬಜೆಟ್ ಗಳನ್ನು ಮಂಡಿಸಬೇಕಾಗುತ್ತದೆ.
ಸಿದ್ದರಾಮಯ್ಯ ಅವರ 16ನೇ ಬಜೆಟ್ ಹಲವು ವೈಶಿಷ್ಠ್ಯಗಳನ್ನು ಹೊಂದಿದೆ. ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಜೆಟ್ ಗಾತ್ರ 4 ಲಕ್ಷ ಕೋಟಿ ರೂ.ಗಳನ್ನು ದಾಟಲಿದೆ.
ಇನ್ನು ಸಿಎಂ ಜೊತೆಗಿನ ಬಜೆಟ್ ಪೂರ್ವಬಾವಿ ಸಭೆ ಬಳಿಕ ಪ್ರತಿಕ್ರಿಯೆ ನೀಡಿದ ಸಚಿವ ಸತೀಶ್ ಜಾರಕಿಹೊಳಿ, ತಮ್ಮ ಇಲಾಖೆಗೆ ಹೆಚ್ಚಿನ ಅನುದಾನ ನೀಡುವಂತೆ ಕೇಳಿದ್ದಾರೆ. ಹೊಸ ಕಾರ್ಯಕ್ರಮಕ್ಕೆ ಬೇಡಿಕೆ ಇಟ್ಟಿದ್ದೇವೆ. ಬಾಕಿ ಬಿಲ್ ವಿಚಾರದ ಬಗ್ಗೆಯೂ ಕೂಡ ಚರ್ಚೆ ಮಾಡಿದ್ದೇವೆ. ಬೆಳಗಾವಿಯಲ್ಲಿ ಫ್ಲೈಓವರ್ ಗೆ ದುಡ್ಡು ಕೊಡಬೇಕು ಅಂತ ಕೇಳಿದ್ದೇವೆ. ಸಾಕಷ್ಟು ಯೋಜನಾ ಪ್ರಸ್ತಾವನೆಯನ್ನು ಸಲ್ಲಿಸಿದ್ದೇವೆ. ಕೆಸಿ ಪಂತ್ ಎಂಬ ನಮ್ಮ ಏಜೆನ್ಸಿ ಮೂಲಕ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದೇವೆ ಅಂತ ತಿಳಿಸಿದ್ದಾರೆ.
ಈ ಬಾರಿಯ ಬಜೆಟ್ನಲ್ಲಿ ಸಿದ್ದರಾಮಯ್ಯನವರು ಏನೆಲ್ಲಾ ಹೊಸ ಹೊಸ ಯೋಜನೆಗಳನ್ನು ಘೋಷಣೆ ಮಾಡಲಿದ್ದಾರೆ ಎಂದು ಜನರು ಕಾತರದಿಂದ ಕಾಯುತ್ತಿದ್ದಾರೆ. ಇನ್ನೊಂದೆಡೆ ಗ್ಯಾರಂಟಿ ಯೋಜನೆಗಳ ಸಂಬಂಧ ಸರ್ಕಾರದಲ್ಲಿ ಆರ್ಥಿಕ ಸಮಸ್ಯೆ ಎದುರಾಗಿದ್ದು,ಈ ಬಾರಿ ಬಜೆಟ್ನಲ್ಲಿ ಹೊಸ ಯೋಜನೆಗಳ ನಿರೀಕ್ಷೆಗಳು ಇಲ್ಲ ಎನ್ನುವ ಮಾತುಗಳು ಸಹ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ.
Leave a Comment