ಎಲ್ಲ ಪಕ್ಷದ ಶಾಸಕರ ಕ್ಷೇತ್ರಗಳಿಗೂ ₹2000 ಕೋಟಿ ವಿತರಣೆ; ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ
ನ್ಯೂಸ್ ಆ್ಯರೋ: ʼಅಪೆಂಡಿಕ್ಸ್ ಇ ನಲ್ಲಿ 4,000 ಕೋಟಿ ರೂ., ಗ್ರಾಮೀಣ ರಸ್ತೆಗೆ 2,000 ಕೋಟಿ ರೂ. ಹಾಗೆಯೇ ಸಿಟಿ, ಟೌನ್ ರಸ್ತೆಗಳಿಗೂ ಹೆಚ್ಚುವರಿ ಹಣ ಕೊಡುತ್ತಿದ್ದೇವೆ. ಎಲ್ಲಾ ಪಕ್ಷದ ಶಾಸಕರ ಕ್ಷೇತ್ರಗಳಿಗೂ 2000 ಕೋಟಿ ರೂ. ವಿತರಣೆ ಮಾಡುತ್ತೇವೆ. ರಾಜ್ಯದ ಜನತೆ ಈಗಲೂ ನಮ್ಮ ಪರವಾಗಿದ್ದಾರೆ. ನಾಳೆಯೂ ನಮ್ಮ ಪರವಾಗಿರಲಿದ್ದಾರೆ. ಮುಂದಿನ ಚುನಾವಣೆಯಲ್ಲೂ ನಮ್ಮ ಪರವಾಗಿರುತ್ತಾರೆ. ಇದು ಖಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ”ಅಭಿವೃದ್ಧಿ ಪರ್ವ ರಾಜ್ಯದಲ್ಲಿ ನಿರಂತರತೆ ಕಾಯ್ದುಕೊಂಡಿದೆ. ವಿಧಾನಸಭೆ, ಪರಿಷತ್ನಲ್ಲಿ ಮತ್ತು ಸದನದ ಹೊರಗೆ ನಮ್ಮ ಅಭಿವೃದ್ಧಿಯ ದಾಖಲೆಗಳು, ಅಂಕಿ ಅಂಶಗಳನ್ನು ಮನೆ ಮನೆ ತಲುಪಿಸಿ. ಎದೆ ಎತ್ತಿ ಮಾತನಾಡಿ” ಎಂದು ಕಾಂಗ್ರೆಸ್ ಶಾಸಕರಿಗೆ ಕರೆ ನೀಡಿದರು.
ಮಳೆ ಹಾನಿ ಸರಿಪಡಿಸಲು ಅಪೆಂಡಿಕ್ಸ್ ಇ ನಲ್ಲಿ ₹4,000 ಕೋಟಿ, ಗ್ರಾಮೀಣ ರಸ್ತೆ ಹಾಳಾಗಿರುವುದಕ್ಕೆ ₹2000 ಕೋಟಿ ಹಾಗೆಯೇ ಸಿಟಿ, ಟೌನ್ ರಸ್ತೆಗಳಿಗೂ ಹೆಚ್ಚುವರಿ ಹಣ ಕೊಡುತ್ತಿದ್ದೇವೆ. ಮುಂದಿನ ವರ್ಷದಿಂದ ರಾಜ್ಯದ ಆರ್ಥಿಕ ಸಾಮರ್ಥ್ಯ ಇನ್ನಷ್ಟು ಹೆಚ್ಚುತ್ತದೆ. ಆಗ ಇನ್ನಷ್ಟು ಅಭಿವೃದ್ಧಿಯ ವೇಗ ಹೆಚ್ಚುತ್ತದೆ. ಎಲ್ಲಾ ಕ್ಷೇತ್ರಗಳಿಗೂ ಎಲ್ಲಾ ಪಕ್ಷದ ಶಾಸಕರ ಕ್ಷೇತ್ರಗಳಿಗೂ ₹2000 ಕೋಟಿ ವಿತರಣೆ ಮಾಡುತ್ತೇವೆ. ಆದ್ದರಿಂದ ನಮ್ಮ ಶಾಸಕರು ಎದೆ ಎತ್ತಿ ಮಾತನಾಡಿ. ಅವರ ಬಾಯಿ ಮುಚ್ಚಿಸಿ ಎಂದರು.
ʼಸತ್ಯದ ದಾಖಲೆಗಳನ್ನು, ಅಂಕಿ – ಅಂಶಗಳನ್ನು ಜನರ ಮುಂದಿಟ್ಟು ಎದೆ ಎತ್ತಿ ಸತ್ಯ ಹೇಳಿ. ವಕ್ಫ್ ವಿಚಾರ ಬಿಜೆಪಿಗೆ ತಿರುಗುಬಾಣವಾಗಿದೆ. ಅತಿ ಹೆಚ್ಚು ನೋಟಿಸ್ ಕೊಟ್ಟಿರುವುದು, ವಕ್ಫ್ ಆಸ್ತಿ ಒತ್ತುವರಿ ತೆರವುಗೊಳಿಸುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲೇ ಹೇಳಿದೆ. ಯಡಿಯೂರಪ್ಪ, ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ವಕ್ಫ್ ಆಸ್ತಿ ತೆರವುಗೊಳಿಸಲು ನೋಟಿಸ್ ಕೊಡಲಾಗಿದೆ. ಹೀಗಾಗಿ, ಬಿಜೆಪಿಗೆ ಈ ಬಗ್ಗೆ ಮಾತನಾಡುವ ನೈತಿಕತೆ ಇಲ್ಲʼ ಎಂದು ಕಿಡಿಕಾರಿದರು.
ʼonce a waqf property… Always a waqf property ಅಂತ ಸುಪ್ರೀಂಕೋರ್ಟ್ ತೀರ್ಪು ಬಂದಿವೆ. ಸಚಿವ ಜಮೀರ್ ಅವರು ಸಮರ್ಥವಾಗಿ ಉತ್ತರ ನೀಡುತ್ತಾರೆ. ಪರಿಷತ್ನಲ್ಲಿ ಈಗಾಗಲೇ ಕೊಟ್ಟಿದ್ದಾರೆ. ಬಿಜೆಪಿ 9 ವರ್ಷಗಳ ಕಾಲ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ, ಸಮ್ಮಿಶ್ರ ಸರ್ಕಾರದಲ್ಲಿದ್ದಾಗಲೂ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಬಿಜೆಪಿ ಕೆಲಸ ಮಾಡಲಿಲ್ಲ. ಪ್ರಾದೇಶಿಕ ತಾರತಮ್ಯ ಹೋಗಲಾಡಿಸಲು ಬಿಜೆಪಿ ಪ್ರಯತ್ನವನ್ನೇ ಮಾಡಲಿಲ್ಲ” ಎಂದು ಆರೋಪಿಸಿದರು.
Leave a Comment