ʼಮನುಷ್ಯತ್ವ ಇಲ್ಲದೆ ವಿಡಿಯೋ ಮಾಡುತ್ತಾ ಇದ್ದರುʼ; ಅಜ್ಜಿ ಅಂತ್ಯಕ್ರಿಯೆ ವೇಳೆ ನಡೆದ ಘಟನೆ ಬಗ್ಗೆ ಸಾನ್ವಿ ಸುದೀಪ್ ಗರಂ

sanvi-sudeep-upset
Spread the love

ನ್ಯೂಸ್ ಆ್ಯರೋ: ನಟ ಕಿಚ್ಚ ಸುದೀಪ್ ತಾಯಿ ಸರೋಜಾ ಅವರು ಅಕ್ಟೋಬರ್ 20ರಂದು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸುದೀಪ್ ಅವರ ಜೆಪಿ ನಗರದ ನಿವಾಸದ ಬಳಿ ಚಿತ್ರರಂಗ, ರಾಜಕೀಯ ಗಣ್ಯರು ಮತ್ತು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಹಾಗೆಯೇ ಈ ಬಗ್ಗೆ ವರದಿ ಮಾಡಲು ಮಾಧ್ಯಮದ ಸಿಬ್ಬಂದಿಯೂ ನೆರೆದಿದ್ದರು.

ತಮ್ಮ ನಿವಾಸದ ಬಳಿ ನೆರೆದಿದ್ದ ಜನರು ಜೋರಾಗಿ ಕಿರುಚುತ್ತಾ ಮೊಬೈಲ್ ಹಿಡಿದು ವಿಡಿಯೋ ಮಾಡುತ್ತಾ ಗಲಾಟೆ ಮಾಡಿದ್ದವರ ಬಗ್ಗೆ ಸುದೀಪ್ ಪುತ್ರಿ ಸಾನ್ವಿ ಬೇಸರ ಹೊರ ಹಾಕಿದ್ದಾರೆ. ಈ ಕುರಿತು ಇನ್‌ಸ್ಟಾಗ್ರಾಂ ಸ್ಟೇಟಸ್‌ನಲ್ಲಿ ಬೇಸರ ತೋಡಿಕೊಂಡಿದ್ದಾರೆ.

ಇದು ನಮ್ಮ ಕುಟುಂಬಕ್ಕೆ ಅತ್ಯಂತ ಕಷ್ಟಕರವಾದ ದಿನವಾಗಿದೆ. ನನ್ನ ಅಜ್ಜಿಯನ್ನು ಕಳೆದುಕೊಂಡ ದುಃಖಕ್ಕಿಂತ ನಮ್ಮ ಮನೆ ಮುಂದೆ ಸೇರಿದ ಜನರು ಜೋರಾಗಿ ಚೀರುವುದು ಹೆಚ್ಚು ನೋವುಂಟು ಮಾಡಿದೆ. ನಾನು ಅಳುತ್ತಿರುವಾಗ ನನ್ನ ಸುತ್ತಲೇ ಕ್ಯಾಮೆರಾಗಳು ಸುತ್ತುವರೆದಿದ್ದವು, ಇಷ್ಟೊಂದು ಅಮಾನುಷವಾಗಿ ನಡೆದುಕೊಳ್ಳುತ್ತಾರೆ ಎಂದು ನಾನು ತಿಳಿದುಕೊಂಡಿರಲಿಲ್ಲ. ತಾಯಿಯನ್ನು ಕಳೆದುಕೊಂಡಿದ್ದ ನನ್ನ ತಂದೆ ಅಳುತ್ತಿದ್ದಾಗ ಜನರು ನಮ್ಮನ್ನು ತಳ್ಳಾಡುತ್ತಿದ್ದರು. ಕಳೆದುಕೊಂಡ ಪ್ರೀತಿ ಪಾತ್ರರನ್ನು ಗೌರವದಿಂದ ಕಳುಹಿಸಿಕೊಡುವುದು ನಮ್ಮ ಜವಾಬ್ದಾರಿ ಮತ್ತು ಅದಕ್ಕೆ ಅವರು ಅರ್ಹರಾಗಿರುತ್ತಾರೆ ಎಂದು ಸಾನ್ವಿ ಬರೆದುಕೊಂಡಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸುದೀಪ್ ಅವರ ತಾಯಿ ಸರೋಜಾ ಅವರನ್ನು ಜಯನಗರ ಅಪೊಲೊ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಲ್ಲಿಯೇ ನಿಧನರಾಗಿದ್ದಾರೆ. ಬಳಿಕ ಜೆಪಿ ನಗರದ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಂತರ ಅಂತಿಮ ಯಾತ್ರೆ ನಡೆಸಿ ಪಾರ್ಥೀವ ಶರೀರವನ್ನು ವಿಲ್ಸನ್ ಗಾರ್ಡನ್ ಚಿತಾಗಾರಕ್ಕೆ ಕೊಂಡೊಯ್ಯಲಾಯಿತು.

ಸುದೀಪ್ ಅವರನ್ನು ನೋಡಲು ಸಾಕಷ್ಟು ಅಭಿಮಾನಿಗಳು ಚಿತಾಗಾರದ ಬಳಿ ನೆರೆದಿದ್ದರು. ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಅಂತ್ಯಕ್ರಿಯೆ ವೇಳೆ ತಳ್ಳಾಟ ನೂಕಾಟ ನಡೆಯಿತು. ಇನ್ನು ಚಿತಾಗಾರದಿಂದ ಹೊರಗೆ ಬಂದ ಬಳಿಕ ಸುದೀಪ್ ಅಭಿಮಾನಿಗಳು ಕೈಮುಗಿದು ನಮಸ್ಕರಿಸಿದ್ದರು. ಅಳುತ್ತಲೇ ಕಾರು ಏರಿ ಹೊರಟರು.

Leave a Comment

Leave a Reply

Your email address will not be published. Required fields are marked *

error: Content is protected !!