ಹೆಂಡ್ತಿಗೆ ಚಿನ್ನದ ಚೈನ್‌ ಖರೀದಿಸಿದ ಪತಿ; ಈತ ರಾತ್ರೋರಾತ್ರಿ ಕೋಟ್ಯಧಿಪತಿಯಾಗಿದ್ದು ಹೇಗೆ ಗೊತ್ತಾ ?

Indian Origin
Spread the love

ನ್ಯೂಸ್ ಆ್ಯರೋ: ಭಾರತೀಯ ಮೂಲದ ವ್ಯಕ್ತಿ ಸಿಂಗಾಪುರದಲ್ಲಿ ರಾತ್ರೋರಾತ್ರಿ ಕೋಟ್ಯಧಿಪತಿಯಾಗಿದ್ದಾರೆ. ಲಕ್ಕಿ ಡ್ರಾದಲ್ಲಿ ಅವರು 1 ಮಿಲಿಯನ್‌ ಅಮೆರಿಕನ್‌ ಡಾಲರ್‌ ಅಂದರೆ, 8 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಜಯಿಸಿದ್ದಾರೆ. ಈ ಗೆಲುವು ಆತನಿಗೆ ಮಾತ್ರವಲ್ಲ ಆತನ ಪತ್ನಿಗೂ ಬಹಳ ವಿಶೇಷವಾಗಿದೆ.

ಏಕೆಂದರೆ, ಮೂರು ತಿಂಗಳ ಹಿಂದೆ ಪತ್ನಿಗಾಗಿ ಚಿನ್ನದ ಚೈನ್‌ಅನ್ನು ಅವರು ಖರೀದಿ ಮಾಡಿದ್ದರು. ಅಲ್ಲಿನ ಲಕ್ಕಿ ಡ್ರಾದಲ್ಲಿಯೇ ಈತ ಈಗ ಕೋಟ್ಯಧಿಪತಿಯಾಗಿದ್ದಾನೆ. ಏಷ್ಯಾ ಒನ್ ವರದಿ ಮಾಡಿರುವ ಪ್ರಕಾರ, ಕಳೆದ ಭಾನುವಾರ (ನವೆಂಬರ್ 24) ಮುಸ್ತಫಾ ಜ್ಯುವೆಲ್ಲರಿ ನಡೆಸಿದ ಲಕ್ಕಿ ಡ್ರಾದಲ್ಲಿ 21 ವರ್ಷಗಳ ಕಾಲ ಸಿಂಗಾಪುರದಲ್ಲಿ ಕೆಲಸ ಮಾಡಿದ ಪ್ರಾಜೆಕ್ಟ್ ಎಂಜಿನಿಯರ್ ಬಾಲಸುಬ್ರಮಣಿಯನ್ ಚಿತ್ತಂಬರಂ ಅವರು 1 ಮಿಲಿಯನ್‌ ಯುಎಸ್‌ ಡಾಲರ್‌ ಬಹುಮಾನ ಗೆದ್ದಿದ್ದಾರೆ.

ಸ್ಟೋರ್‌ನ ವಾರ್ಷಿಕ ಕಾರ್ಯಕ್ರಮದ ಭಾಗವಾಗಿರುವ ಡ್ರಾವನ್ನು ಸಿವಿಲ್ ಸರ್ವಿಸ್ ಕ್ಲಬ್ ಟೆಸೆನ್‌ಸೋನ್‌ನಲ್ಲಿ ನಡೆಸಲಾಯಿತು. ಆಭರಣ ಮಳಿಗೆಯಲ್ಲಿ ಕನಿಷ್ಠ 250 ಡಾಲರ್‌ ಖರ್ಚು ಮಾಡಿದ ಗ್ರಾಹಕರು ಡ್ರಾಗೆ ಅರ್ಹರಾಗಿದ್ದರು. ಚಿತ್ತಂಬರಂ ಅವರು ಲಿಟಲ್ ಇಂಡಿಯಾದಲ್ಲಿದ್ದ ಮಳಿಗೆಗೆ ಭೇಟಿ ನೀಡಿದ ಸಂದರ್ಭದಲ್ಲಿ ತಮ್ಮ ಪತ್ನಿಯ ಚಿನ್ನದ ಚೈನ್‌ಗಾಗಿ S$6,000 ಖರ್ಚು ಮಾಡಿದ್ದರು.

8 ಕೋಟಿಗೂ ಅಧಿಕ ಮೊತ್ತ ಗೆದ್ದ ಬಳಿಕ ಚಿತ್ತಂಬರಂ ಅವರಿಗೆ ವಿಡಿಯೋ ಕಾಲ್‌ ಮಾಡಿ ವಿಚಾರ ತಿಳಿಸಲಾಯಿತು. ಮೊದಲಿಗೆ ಈ ಸುದ್ದಿಯನ್ನು ನಂಬಲು ಅವರ ಹಿಂಜರಿದರೂ, ಸತ್ಯವೆಂದು ಗೊತ್ತಾದ ಬಳಿಕ ಆನಂದಭಾಷ್ಪ ಸುರಿಸಿದ್ದಾರೆ. “ಇಂದು ನನ್ನ ತಂದೆಯ ನಾಲ್ಕನೇ ಪುಣ್ಯತಿಥಿ. ಇದೊಂದು ಆಶೀರ್ವಾದ’ ಎಂದು ಅವರು ಹೇಳಿದ್ದಾರೆ. ಈ ಸುದ್ದಿಯನ್ನು ನನ್ನ ಅಮ್ಮನೊಂದಿಗೆ ಹಂಚಿಕೊಳ್ಳಲು ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ. ಅದರೊಂದಿಗೆ ಇಷ್ಟು ವರ್ಷಗಳ ಕಾಲ ನಾನು ಸಿಂಗಾಪುರದಲ್ಲಿ ಕೆಲಸ ಮಾಡಿದ್ದೇನೆ. ಅದಕ್ಕಾಗಿ ತಮ್ಮ ಗೆಲುವಿನ ಒಂದು ಪಾಲನ್ನು ಇಲ್ಲಿನ ಸಮುದಾಯಕ್ಕೆ ದಾನ ಮಾಡುವ ಯೋಚನೆಯಲ್ಲಿದ್ದೇನೆ ಎಂದಿದ್ದಾರೆ. ಇನ್ನೂ ಹಲವು ಗ್ರಾಹಕರು 5 ಸಾವಿರ ಯುಎಸ್‌ ಡಾಲರ್‌ವರೆಗಿನ ಬಹುಮಾನಗಳನ್ನು ಲಕ್ಕಿ ಡ್ರಾದಲ್ಲಿ ಗೆದ್ದಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!