ರಿಕ್ಷಾ-ಪಿಕಪ್ ನಡುವೆ ಭೀಕರ ಅಪಘಾತ; ದೇರಳಕಟ್ಟೆ ಶಾಲಾ ವಿದ್ಯಾರ್ಥಿನಿ ಸಾವು
ನ್ಯೂಸ್ ಆ್ಯರೋ: ಶಾಲೆ ಮಕ್ಕಳನ್ನು ಕೊಂಡೊಯ್ಯುವ ರಿಕ್ಷಾ ಮತ್ತು ಪಿಕಪ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ರಿಕ್ಷಾದಲ್ಲಿದ್ದ ವಿದ್ಯಾಥಿನಿಯೊಬ್ಬಳು ಸಾವನ್ನಪ್ಪಿರುವ ಘಟನೆ ಬೆಳ್ಮ ಗ್ರಾಮದ ಕಲ್ಪಾದೆ ಎಂಬಲ್ಲಿ ಗುರುವಾರ ಸಂಭವಿಸಿದೆ.
ಮೃತ ವಿದ್ಯಾರ್ಥಿನಿಯನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ವಿಧ್ಯಾರ್ಥಿನಿ ಆಯಿಷಾ ವಹಿಬಾ (11) ಎಂದು ಗುರುತಿಸಲಾಗಿದೆ.
ಮದಕ ಭಾಗದಿಂದ ದೇರಳಕಟ್ಟೆ ನೇತಾಜಿ ಸರಕಾರಿ ಶಾಲೆಗೆ ಮಕ್ಕಳನ್ನು ಕರೆತರುತ್ತಿದ್ದ ಆಟೋ ರಿಕ್ಷಾ ಕಲ್ಲಪಾದೆ ತಲುಪುತ್ತಿದ್ದಂತೆ ಎದುರಿನಿಂದ ಅತಿ ವೇಗ, ಅಜಾಗರೂಕತೆಯಿಂದ ಬಂದ ಪಿಕಪ್ ವಾಹನವು ಢಿಕ್ಕಿ ಹೊಡೆದಿದೆ. ಪರಿಣಾಮ ಆಯಿಷಾ ಗಂಭೀರ ಗಾಯಗೊಂಡು, ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಮೃತಪಟ್ಟಿದ್ದಾಳೆ.
ರಿಕ್ಷಾದಲ್ಲಿದ್ದ ಇತರೆ ನಾಲ್ವರು ವಿದ್ಯಾರ್ಥಿಗಳಿಗೂ ಸಣ್ಣಪುಟ್ಟ ಗಾಯಗಳಾಗಿದೆ. ಘಟನೆಯಿಂದ ರಿಕ್ಷಾ ಚಾಲಕನೂ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ದೇರಳಕಟ್ಟೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Leave a Comment