ಹಿಂದಿಯಲ್ಲಿ ಟ್ವೀಟ್ ಖಾತೆ ತೆರೆದ ಆರ್‌ಸಿಬಿ; ಕನ್ನಡಿಗರು, ಅಭಿಮಾನಿಗಳು ಆಕ್ರೋಶ
ನ್ಯೂಸ್ ಆ್ಯರೋ: ಆರ್‌ಸಿಬಿ ಹಿಂದಿಯಲ್ಲಿ ಎಕ್ಸ್ ಪೇಜ್ ಓಪನ್ ಮಾಡಿ ಒಂದೆರಡು ಪೋಸ್ಟ್ ಶೇರ್ ಮಾಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು ಈ ಸಂಬಂಧ ಟ್ವೀಟ್ ಮಾಡಿದ್ದು, ನಿಮಗೆ ಬೆಂಬಲ ಕೊಡುತ್ತಿರುವುದು ಬೆಂಗಳೂರು ಎನ್ನುವ ಹೆಸರಿಗೆ.
ನಮ್ಮ ತಂಡ ಎಂದು ಪ್ರಾಣ ಕೊಟ್ಟು ಪ್ರೀತಿಸೋ ಕನ್ನಡಿಗರ ಪ್ರೀತಿಯನ್ನು ದುರುಪಯೋಗ ಪಡಿಸಿಕೊಳ್ಳಬೇಡಿ. ನಿಮ್ಮ ಐಪಿಎಲ್ ಕಪ್ ಹಾಗೂ ಆರ್ಸಿಬಿಗಿಂತಲೂ ನಮಗೆ, ನಮ್ಮ ಕನ್ನಡ, ಕನ್ನಡ ನೆಲದ ಸ್ವಾಭಿಮಾನವೇ ಹೆಚ್ಚು. ತಕ್ಷಣ ಅದನ್ನು ತೆಗೆದು ಹಾಕಿ ಎಂದು ಬರೆದುಕೊಂಡಿದ್ದಾರೆ.
ಇನ್ನೊಬ್ಬರು ಈ ಸಂಬಂಧ ಟ್ವೀಟ್ ಮಾಡಿದ್ದು, ಇವರದ್ದು ಆಡಿದ್ದೇ ಆಟ ಆಗೋಯಿತು. ಕನ್ನಡಿಗರೂ ಎಚ್ಚೆತ್ತುಕೊಂಡಿಲ್ಲ ಎಂದರೆ ಏನು ಬೇಕಾದರೂ ಮಾಡುತ್ತಾರೆ. ಒಂದು ಕಡೆ ಅಭಿಮಾನಿಗಳ ಭಾವನೆಗೆ ಬೆಲೆ ಇಲ್ಲ. ಇನ್ನೊಂದು ಕಡೆ ಹಿಂದಿ ಹೇರಿಕೆ. ಪ್ರತಿಯೊಬ್ಬ ಕನ್ನಡಿಗನೂ ಧ್ವನಿಯಾಗಿ. ಆರ್‌ಸಿಬಿ ತಂಡಕ್ಕೆ ತಲುಪುವಂತೆ ಮಾಡಿ ಎಂದು ಬರೆದುಕೊಂಡಿದ್ದಾರೆ.
ಆರ್‌ಸಿಬಿ ಹೊಸದಾಗಿ Royal Challengers Bengaluru Hindi ಹೆಸರಿನ @RCBinHindi ಎಕ್ಸ್ ಖಾತೆ ಆರಂಭಿಸಿದೆ. ಈ ಮೂಲಕ ಆರ್‌ಸಿಬಿ ಮೂರಕ್ಕಿಂತ ಹೆಚ್ಚು ಎಕ್ಸ್ ಖಾತೆಗಳನ್ನು ನಿರ್ವಹಿಸುತ್ತಿದೆ. ಆರ್‌ಸಿಬಿಯ ಮೂಲ ಎಕ್ಸ್(ಟ್ವಿಟರ್) ಪೇಜ್ Royal Challengers Bengaluru ಹೆಸರಿನ @RCBTweets ಮುಖ್ಯ ಖಾತೆಯಾಗಿದೆ. ಇಲ್ಲಿ ಇಂಗ್ಲೀಷ್‌ನಲ್ಲಿ ಟ್ವೀಟ್ ಮಾಡಲಾಗುತ್ತದೆ. ಇನ್ನು ಕನ್ನಡದಲ್ಲಿ ಪೋಸ್ಟ್ ಮಾಡಲು ಆರ್‌ಸಿಬಿ Royal Challengers Bengaluru Kannada ಅನ್ನೋ ಹೆಸರಿನ @RCBinKannada ಖಾತೆ ಆರಂಭಿಸಿದೆ. ಈ ಪೇಜ್‌ನಲ್ಲಿ ಕನ್ನಡದಲ್ಲಿ ಟ್ವೀಟ್ ಮಾಡಲಾಗುತ್ತಿದೆ. ಇದರ ಜೊತೆಗೆ ಹಿಂದಿಯಲ್ಲಿ ಟ್ವೀಟ್ ಮಾಡಲು ಹೊಸ ಹಿಂದಿ ಖಾತೆಯನ್ನೂ ಆರಂಭಿಸಿದೆ.
ಈ ರೀತಿ ಮೂರು ಮೂರು ಖಾತೆಗಳ ಅವಶ್ಯಕತೆ ಏನಿತ್ತು. ಒಂದೇ ಎಕ್ಸ್ ಖಾತೆಯಲ್ಲಿ ಎಲ್ಲಾ ಭಾಷೆಯಲ್ಲೂ ಬೇಕಿದ್ದರೆ ಪೋಸ್ಟ್ ಮಾಡಬಹುದಿತ್ತು. ಚೆನ್ನೈ ಸೂಪರ್ ಕಿಂಗ್ಸ್, ಸನ್‌ರೈಸರ್ಸ್ ಹೈದರಾಬಾದ್ ಸೇರಿದಂತೆ ಇತರ ತಂಡಗಳು ಒಂದೇ ಎಕ್ಸ್ ಖಾತೆಯಲ್ಲಿ ತಮ್ಮ ತಮ್ಮ ಭಾಷೆಯಲ್ಲೂ ಪೋಸ್ಟ್ ಮಾಡುತ್ತಿದೆ. ಆದರೆ ಆರ್‌ಸಿಬಿ ಮೂರು ಬೇರೆ ಬೇರೆ ಖಾತೆಗಳನ್ನು ಆರಂಭಿಸಿದೆ ಎಂದು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಂದೇ ಖಾತೆಯಲ್ಲಿ ಉತ್ತಮವಾಗಿ ಕನ್ನಡ ಹಾಗೂ ಇತರ ಭಾಷೆಯನ್ನು ಬಳಸಿ ಪೋಸ್ಟ್ ಮಾಡುವುದು ಹೇಗೆ ಎಂದು ಆರ್‌ಸಿಬಿ, ಬೆಂಗಳೂರು ಎಫ್‌ಸಿ ಫುಟ್ಬಾಲ್ ತಂಡದ ಎಕ್ಸ್ ಖಾತೆ ಹಾಗೂ ಬೆಂಗಳೂರು ಬುಲ್ಸ್ ಪ್ರೋ ಕಬಡ್ಡಿ ತಂಡದ ಎಕ್ಸ್ ಖಾತೆ ನೋಡಿ ಕಲಿತುಕೊಳ್ಳಲಿ ಎಂದು ಅಭಿಮಾನಿಗಳು ಸಲಹೆ ನೀಡಿದ್ದಾರೆ.
Leave a Comment