ಸದನದಲ್ಲಿ ಮೊದಲ ದಿನವೇ ಹಿಂದೂಗಳನ್ನು ಅವಹೇಳನಗೈದ ರಾಹುಲ್ ಗಾಂಧಿ – ನರೇಂದ್ರ ಮೋದಿ ಟೀಕೆ, ನಾವು ಹಿಂದೂಗಳು ಅನ್ನೋದೆ ಹೆಮ್ಮೆ ಎಂದ ಅಮಿತ್ ಶಾ
ನ್ಯೂಸ್ ಆ್ಯರೋ : ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರೂ ಆದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಹಿಂದೂಗಳ ಕುರಿತು ನೀಡಿದ ಹೇಳಿಕೆಯು ಭಾರೀ ಕೋಲಾಹಲವನ್ನು ಉಂಟುಮಾಡಿತು. ರಾಹುಲ್ ಗಾಂಧಿ ಅವರು ತಮ್ಮನ್ನು ತಾವು ಹಿಂದೂ ಎಂದು ಕರೆದುಕೊಳ್ಳುವವರು ಹಿಂಸಾಚಾರದಲ್ಲಿ ತೊಡಗುತ್ತಾರೆ ಎಂದು ಹೇಳಿದರು.
ಲೋಕಸಭೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, “ಹಿಂದೂ ಧರ್ಮವು ಭಯ, ದ್ವೇಷ ಮತ್ತು ಸುಳ್ಳು ಹಬ್ಬಿಸುವುದಲ್ಲ” ಎಂದು ಹೇಳಿದರು. ರಾಹುಲ್ ಗಾಂಧಿ ಇದೇ ವೇಳೆ ಇಸ್ಲಾಂ ಸಿಖ್ ಧರ್ಮವನ್ನು ಉಲ್ಲೇಖಿಸಿ ಒಬ್ಬರು ನಿರ್ಭೀತರಾಗಿರಬೇಕೆಂದು ಒತ್ತಿ ಹೇಳಿದರು. “ನೀವು ಶಿವನ ಚಿತ್ರವನ್ನು ನೋಡಿದರೆ, ಹಿಂದೂಗಳು ಎಂದಿಗೂ ಭಯ, ದ್ವೇಷವನ್ನು ಹರಡಲು ಸಾಧ್ಯವಿಲ್ಲ. ಆದರೆ ಬಿಜೆಪಿ ಭಯ, ದ್ವೇಷವನ್ನು 24X7 ಕಾಲ ಹರಡುತ್ತದೆ” ಎಂದು ಗಾಂಧಿಯವರು ಶಿವನ ಚಿತ್ರವನ್ನು ಕೈಯಲ್ಲಿ ಹಿಡಿದು ಹೇಳಿದರು.
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಎದ್ದು ನಿಂತು ರಾಹುಲ್ ಗಾಂಧಿ ಅವರ ಭಾಷಣವನ್ನು ಅಡ್ಡಿಪಡಿಸಿ ಹೇಳಿಕೆಯನ್ನು ಖಂಡಿಸಿದರು.
ಸದನದಲ್ಲಿ ಬಿಜೆಪಿಯನ್ನು ಗುರಿಯಾಗಿಟ್ಟುಕೊಂಡ ರಾಹುಲ್ಗಾಂಧಿ, ತಮ್ಮನ್ನು ತಾವು ಹಿಂದೂ ಎಂದು ಕರೆದುಕೊಳ್ಳುವವರು ದಿನದ 24 ಗಂಟೆ ಹಿಂಸೆ ಮತ್ತು ದ್ವೇಷದಲ್ಲಿ ತೊಡಗುತ್ತಾರೆ. ಅವರು ಹಿಂದೂಗಳೇ ಅಲ್ಲ. ಹಿಂದೂ ಧರ್ಮವು ಭಯ, ದ್ವೇಷ ಮತ್ತು ಸುಳ್ಳುಗಳನ್ನು ಹರಡುವುದಿಲ್ಲ ಎಂದು ಹೇಳಿದರು. ಈ ವೇಳೆ ರಾಹುಲ್ಗಾಂಧಿ ಅವರ ಭಾಷಣವನ್ನು ತಡೆದ ಪ್ರಧಾನಿ ಮೋದಿ, ಈ ವಿಚಾರ ತುಂಬಾ ಗಂಭೀರವಾಗಿದೆ. ಇಡೀ ಹಿಂದೂ ಸಮುದಾಯವನ್ನು ಹಿಂಸಾಚಾರದೊಂದಿಗೆ ಜೋಡಿಸುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ತಕ್ಷಣವೇ ಪ್ರಧಾನಿ ಮೋದಿ ಅವರಿಗೆ ರಾಹುಲ್ ಗಾಂಧಿ ತಿರುಗೇಟು ನೀಡಿದರು. ನಾನು ಬಿಜೆಪಿಯನ್ನು ಹಿಂಸಾತ್ಮಕ ಎಂದು ಕರೆದಿದ್ದೇನೆ, ನರೇಂದ್ರ ಮೋದಿ ಇಡೀ ಹಿಂದೂ ಸಮಾಜವಲ್ಲ. ಬಿಜೆಪಿ ಎಂದರೆ ಇಡೀ ಹಿಂದೂ ಸಮಾಜವಲ್ಲ. ಆರ್‌ಎಸ್‌ಎಸ್ ಇಡೀ ಹಿಂದೂ ಸಮಾಜವಲ್ಲ ಎಂದು ಹೇಳಿದರು.
ಅದೇ ಸಮಯದಲ್ಲಿ ರಾಹುಲ್ ಗಾಂಧಿ ಅವರು ಶಿವನ ಫೋಟೋ ಹಿಡಿದು, ನೀವು ಪದೇಪದೆ ಶಿವನನ್ನು ತೋರಿಸಿ ಜನರನ್ನು ಹೆದರಿಸಬೇಡಿ. ಹಿಂದೂಗಳು ಎಂದಿಗೂ ಶಿವನನ್ನು ನೋಡಿ ಹೆದರುವುದಿಲ್ಲ ಮತ್ತು ದ್ವೇಷ ಹರಡುವುದಿಲ್ಲ ಎಂದು ಹೇಳಿದರು. ಬಿಜೆಪಿ ಅಲ್ಪಸಂಖ್ಯಾತರಿಗೆ ಬೆದರಿಕೆ ಹಾಕಿ, ದ್ವೇಷ ಹರಡುತ್ತಿದೆ, ಮುಸ್ಲಿಮರು, ಸಿಖ್ಖರು, ಕ್ರಿಶ್ಚಿಯನ್ನರ ವಿರುದ್ಧ ಹಿಂಸಾಚಾರ ನಡೆಸುತ್ತಿದೆ ಎಂದು ಆರೋಪಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಷಾ ಸದನದಲ್ಲಿ ಎದ್ದು ನಿಂತು ಇಂತಹ ದೊಡ್ಡ ವಿಚಾರವನ್ನು ಗಲಾಟೆ ಮಾಡಿ ಹತ್ತಿಕ್ಕಲು ಸಾಧ್ಯವಿಲ್ಲ. ಹಿಂದೂ ಎಂದು ಕರೆದುಕೊಳ್ಳುವವರು ಹಿಂಸಾಚಾರ ಮಾಡುತ್ತಾರೆ ಎಂದು ವಿರೋಧ ಪಕ್ಷದ ನಾಯಕ ಹೇಳಿದ್ದಾರೆ. ಈ ದೇಶದ ಕೋಟಿಗಟ್ಟಲೆ ಜನರು ತಮ್ಮನ್ನು ತಾವು ಹಿಂದೂ ಎಂದು ಹೆಮ್ಮೆಯಿಂದ ಕರೆದುಕೊಳ್ಳುತ್ತಾರೆ, ಅವರೆಲ್ಲರೂ ಹಿಂಸೆ ಮಾಡುತ್ತಾರೆಯೇ? ಈ ಸದನದಲ್ಲಿ ಹಿಂಸಾಚಾರದ ಮನೋಭಾವವನ್ನು ಯಾವುದೇ ಧರ್ಮದೊಂದಿಗೆ ಸಂಯೋಜಿಸುವುದು ತಪ್ಪು ಎಂದು ಹೇಳಿದರು. ಅದರಲ್ಲೂ ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವ ವ್ಯಕ್ತಿ ಈ ರೀತಿ ಹೇಳುವುದು ಸರಿಯಲ್ಲಿ. ರಾಹುಲ್ಗಾಂಧಿ ಅವರು ಕ್ಷಮೆಯಾಚಿಸಬೇಕು ಎಂದು ಅಮಿತ್ ಷಾ ಒತ್ತಾಯಿಸಿದರು.
Leave a Comment