PSI ಪರಶುರಾಮ್ ಅಸಹಜ ಸಾವು ಪ್ರಕರಣ – ಸಿಐಡಿ ತನಿಖೆಗೆ ವಹಿಸಿ ರಾಜ್ಯ ಸರ್ಕಾರದ ಆದೇಶ
ನ್ಯೂಸ್ ಆ್ಯರೋ : ವರ್ಗಾವಣೆಗೊಳ್ಳದಂತೆ ತಡೆಯಲು ಶಾಸಕ ಚೆನ್ನಾರೆಡ್ಡಿ ಮತ್ತವರ ಪುತ್ರ 30 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟ ಕಾರಣಕ್ಕಾಗಿಯೇ ಸಬ್ ಇನ್ಸ್‌ಪೆಕ್ಟರ್ ಪರಶುರಾಮ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಮೃತರ ಪತ್ನಿ ದೂರು ನೀಡಿರುವ ಹಿನ್ನೆಲೆಯಲ್ಲಿ ಸರ್ಕಾರವನ್ನು ಪ್ರಕರಣವನ್ನು ಸಿಐಡಿಗೆ ಒಪ್ಪಿಸಿ ಆದೇಶ ನೀಡಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರದಲ್ಲಿ ಪ್ರಾಮಾಣಿಕ ದಲಿತ ಅಧಿಕಾರಿ ಚಂದ್ರಶೇಖರನ್ ಅವರನ್ನು ಬಲಿ ಪಡೆದ ಕಾಂಗ್ರೆಸ್ ಸರ್ಕಾರ, ಈಗ ವರ್ಗಾವಣೆಗಾಗಿ ಲಂಚದ ಬೇಡಿಕೆ ಇಟ್ಟು ಮತ್ತೊಬ್ಬ ದಲಿತ ಅಧಿಕಾರಿ ಯಾದಗಿರಿಯ ಪಿಎಸ್‌ಐ ಪರಶುರಾಮ್ ಅವರನ್ನ ಬಲಿ ಪಡೆದುಕೊಂಡಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ ನೀಡಿದ್ದರು.
ಶಾಸಕ ಹಾಗೂ ಪುತ್ರನ ನಿರಂತರ ಒತ್ತಡದಿಂದ ನನ್ನ ಪತಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಅಲ್ಲದೆ ವರ್ಗಾವಣೆ ಮಾಡಿರುವುದು ಕೂಡ ನಿಯಮಬಾಹಿರ. ನನಗೆ ಅನ್ಯಾಯವಾಗಿದೆ. ಶಾಸಕ ಹಾಗೂ ಅವರ ಪುತ್ರ 30 ಲಕ್ಷ ರೂ ಗಳಿಗೆ ಬೇಡಿಕೆ ಇಟ್ಟಿದ್ದರು. ಕೊಡದೆ ಇದ್ದಾಗ ನನಗೆ ವರ್ಗಾವಣೆ ಮಾಡಿದ್ದಾರೆ ಎಂದು ನನ್ನ ಬಳಿ ಹೇಳಿಕೊಂಡಿದ್ದರು ಎಂದು ದೂರಿನಲ್ಲಿ ಪತ್ನಿ ಶ್ವೇತಾ ಅಪಾದನೆ ಮಾಡಿದ್ದಾರೆ.
ಯಾದಗಿರಿ ಪೋಲಿಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಪರಶುರಾಮ ಅವರು ಸೈಬರ್ ಕ್ರೈಮ್ ಪಿಎಸ್ಐ ಆಗಿ ವರ್ಗಾವಣೆ ಹೊಂದಿದ್ದ ಹಿನ್ನೆಲೆಯಲ್ಲಿ ಯಾದಗಿರಿ ಪೋಲಿಸ್ ಠಾಣೆಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನೆಗೆ ತೆರಳಿದ್ದರು. ಆದರೆ ಮಲಗಿದ್ದಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದರು.
ಶಾಸಕರ ವಿರುದ್ಧ ಪ್ರಕರಣ ದಾಖಲಾಗುತ್ತಲೇ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟ್ವೀಟ್ ಮಾಡಿದ್ದು, “ಒಬ್ಬ ದಲಿತ ಅಧಿಕಾರಿಯ ವರ್ಗಾವಣೆಗೆ ಪ್ರಭಾವ ಬೀರಿದ ಚನ್ನಾ ರೆಡ್ಡಿ ಅವರ ಮೇಲೆ ದಲಿತ ದೌರ್ಜನ್ಯ ಕಾಯ್ದೆಯಡಿ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಜನಪ್ರತಿನಿಧಿಯಾಗಿ ಮಾದರಿಯಾಗಿರಬೇಕಾಗಿದ್ದ ಶಾಸಕರು ಒಬ್ಬ ಅಧಿಕಾರಿಯ ಸಾವಿಗೆ ಪರೋಕ್ಷವಾಗಿ ಕಾರಣರಾಗಿದ್ದಾರೆ. ಚನ್ನಾ ರೆಡ್ಡಿ ಅವರು ಕೂಡಲೇ ಈ ಸಾವಿಗೆ ನೈತಿಕ ಹೊಣೆ ಹೊತ್ತು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಬೇಕು ಎಂದು ಆಕ್ರೋಶ ಹೊರಹಾಕಿದ್ದರು.
ಇದೀಗ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಪರಶುರಾಮ್ ಅವರ ಸಾವಿನ ಪ್ರಕರಣವನ್ನು ರಾಜ್ಯ ಸರ್ಕಾರವು ಸಿಐಡಿ ತನಿಖೆಗೆ ವಹಿಸಿ ಆದೇಶಿಸಿದೆ.
Leave a Comment