Yadgir PSI ಪರಶುರಾಮ್ ಅಸಹಜ ಸಾವಿಗೆ ಶಾಸಕರೇ ಕಾರಣವೆಂದ PSI ಪತ್ನಿ – ಶಾಸಕ ಚನ್ನಾರೆಡ್ಡಿ, ಪುತ್ರ ಸನ್ನಿರೆಡ್ಡಿ ವಿರುದ್ಧ ಎಫ್ಐಆರ್…!!
ನ್ಯೂಸ್ ಆ್ಯರೋ : ಯಾದಗಿರಿ ಪೋಲಿಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿದ್ದ ಪರಶುರಾಮ್ ಅವರ ಸಾವಿನ ಹಿಂದೆ ಶಾಸಕ ಚೆನ್ನಾರೆಡ್ಡಿ ಪಾಟೀಲ ಹಾಗೂ ಅವರ ಪುತ್ರ ಸನ್ನಿರೆಡ್ಡಿ ಪಾಟೀಲ ಕೈವಾಡ ಇರುವುದಾಗಿ ಮೃತ ಪಿಎಸ್ಐ ಪತ್ನಿ ದೂರು ನೀಡಿರುವ ಹಿನ್ನೆಲೆಯಲ್ಲಿ ಶಾಸಕ ಹಾಗೂ ಪುತ್ರ ಸನ್ನಿರೆಡ್ಡಿ ವಿರುದ್ಧ ಯಾದಗಿರಿ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಶಾಸಕ ಹಾಗೂ ಪುತ್ರನ ನಿರಂತರ ಒತ್ತಡದಿಂದ ನನ್ನ ಪತಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಅಲ್ಲದೆ ವರ್ಗಾವಣೆ ಮಾಡಿರುವುದು ಕೂಡ ನಿಯಮಬಾಹಿರ. ನನಗೆ ಅನ್ಯಾಯವಾಗಿದೆ. ಶಾಸಕ ಹಾಗೂ ಅವರ ಪುತ್ರ 30 ಲಕ್ಷ ರೂ ಗಳಿಗೆ ಬೇಡಿಕೆ ಇಟ್ಟಿದ್ದರು. ಕೊಡದೆ ಇದ್ದಾಗ ನನಗೆ ವರ್ಗಾವಣೆ ಮಾಡಿದ್ದಾರೆ ಎಂದು ನನ್ನ ಬಳಿ ಹೇಳಿಕೊಂಡಿದ್ದರು ಎಂದು ದೂರಿನಲ್ಲಿ ಪತ್ನಿ ಶ್ವೇತಾ ಅಪಾದನೆ ಮಾಡಿದ್ದಾರೆ.
ಯಾದಗಿರಿ ಪೋಲಿಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿದ್ದ ಪರಶುರಾಮ ಅವರು ಸೈಬರ್ ಕ್ರೈಮ್ ಪಿಎಸ್ಐ ಆಗಿ ವರ್ಗಾವಣೆ ಹೊಂದಿದ್ದ ಹಿನ್ನೆಲೆಯಲ್ಲಿ ಯಾದಗಿರಿ ಪೋಲಿಸ್ ಠಾಣೆಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನೆಗೆ ತೆರಳಿದ್ದರು. ಆದರೆ ಮಲಗಿದ್ದಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದು ಫಿಟ್ ಆಗಿದ್ದ ಅಧಿಕಾರಿಯ ಸಾವಿಗೆ ಎಲ್ಲರೂ ಮರುಗಿದ್ದರು.
ಶಾಸಕರ ವಿರುದ್ಧ ಪ್ರಕರಣ ದಾಖಲಾಗುತ್ತಲೇ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟ್ವೀಟ್ ಮಾಡಿದ್ದು, “ಒಬ್ಬ ದಲಿತ ಅಧಿಕಾರಿಯ ವರ್ಗಾವಣೆಗೆ ಪ್ರಭಾವ ಬೀರಿದ ಚನ್ನಾ ರೆಡ್ಡಿ ಅವರ ಮೇಲೆ ದಲಿತ ದೌರ್ಜನ್ಯ ಕಾಯ್ದೆಯಡಿ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ಜನಪ್ರತಿನಿಧಿಯಾಗಿ ಮಾದರಿಯಾಗಿರಬೇಕಾಗಿದ್ದ ಶಾಸಕರು ಒಬ್ಬ ಅಧಿಕಾರಿಯ ಸಾವಿಗೆ ಪರೋಕ್ಷವಾಗಿ ಕಾರಣರಾಗಿದ್ದಾರೆ. ಚನ್ನಾ ರೆಡ್ಡಿ ಅವರು ಕೂಡಲೇ ಈ ಸಾವಿಗೆ ನೈತಿಕ ಹೊಣೆ ಹೊತ್ತು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.
Leave a Comment