PKL 2024 AUCTION : ದುಬಾರಿ ಮೊತ್ತಕ್ಕೆ ಸೇಲ್ ಆದ ಸಚಿನ್ ತನ್ವಾರ್, ಶಾದ್ಲೂ – ಬೆಂಗಳೂರು ಬುಲ್ಸ್ ತಂಡಕ್ಕೆ ಮರಳಿದ ಪರ್ದಿಪ್ ನರ್ವಾಲ್..!!
ನ್ಯೂಸ್ ಆ್ಯರೋ : ಪ್ರೋ ಕಬಡ್ಡಿ ಲೀಗ್ ನ ಮೊದಲ ದಿನದ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ತಮಿಳ್ ತಲೈವಾಸ್ ತಂಡಕ್ಕೆ ರೈಡರ್ ಸಚಿನ್ ತನ್ವಾರ್ 2.15 ಕೋಟಿಗೆ ಸೇಲ್ ಆಗುವ ಮೂಲಕ ದಿನದ ದುಬಾರಿ ಆಟಗಾರನಾಗಿ ಹೊರಹೊಮ್ಮಿದ್ದಾರೆ.
ದಿನದ ಎರಡನೇ ದುಬಾರಿ ಆಟಗಾರನಾಗಿ 2.07 ಕೋಟಿಗೆ ಮಹ್ಮದ್ರೆಜಾ ಚಿಯಾನೆ ಹರ್ಯಾಣ ಸ್ಟೀಲರ್ಸ್ ತಂಡ ಸೇರಿದರೆ, ಅದೃಷ್ಟದ ಬೆನ್ನೇರಿ ಹೊರಟ ರೈಡರ್ ಗುಮಾನ್ ಸಿಂಗ್ 1.97 ಕೋಟಿ ಮೊತ್ತಕ್ಕೆ ಗುಜರಾತ್ ಜೈಂಟ್ಸ್ ಪಾಲಾದರು.
ಹೈಫ್ಲೈಯರ್ ಪವನ್ ಸೆಹ್ರಾವತ್ 1.725 ಕೋಟಿ ಮೊತ್ತಕ್ಕೆ FBM ಮೂಲಕ ತೆಲುಗು ಟೈಟಾನ್ಸ್ ತಂಡಕ್ಕೆ ಮತ್ತೆ ಸೇರಿದರೆ, ಭರತ್ ಹೂಡಾ 1.30 ಕೋಟಿ ಬೆಲೆಗೆ ಯುಪಿ ಯೋಧ ಪಾಲಾದರು.
ಮೈಠಿ ಮಣಿಂದರ್ ಸಿಂಗ್ FBM ಮೂಲಕ ಮತ್ತೆ ಬೆಂಗಾಲ್ ವಾರಿಯರ್ಸ್ ತಂಡಕ್ಕೆ 1.15 ಕೋಟಿಗೆ ಬಿಕರಿಯಾದರೆ, ಕಳೆದ ಬಾರಿ ಮಿಂಚಿದ್ದ ಅಚಿಂತ್ಯ ಅಶೋಕ್ ಪವಾರ್ 1.07 ಕೋಟಿ ಮೊತ್ತಕ್ಕೆ ಬೆಂಗಳೂರು ಬುಲ್ಸ್ ತಂಡ ಸೇರಿದರು.
ಅಚ್ಚರಿಯೆಂಬಂತೆ ರೆಕಾರ್ಡ್ ಬ್ರೇಕರ್ ಪರ್ದಿಪ್ ನರ್ವಾಲ್ ಅಲ್ಪ ಮೊತ್ತಕ್ಕೆ ಬೆಂಗಳೂರು ಬುಲ್ಸ್ ತಂಡಕ್ಕೆ ಮರಳಿದ್ದು, ಭಾರೀ ಬೆಲೆಗೆ ಸೇಲ್ ಆಗುವ ನಿರೀಕ್ಷೆಯನ್ನು ಹುಸಿಗೊಳಿಸಿ ಕೇವಲ 70 ಲಕ್ಷ ಪಡೆಯಲಷ್ಟೇ ಶಕ್ತರಾದರು.
ಇನ್ನುಳಿದಂತೆ ರೈಡರ್ ಮಂಜೀತ್ 80 ಲಕ್ಷ ಮೊತ್ತಕ್ಕೆ, ಡಿಫೆಂಡರ್ ಸುನೀಲ್ ಕುಮಾರ್ 1.015 ಕೋಟಿಗೆ ಯು ಮುಂಬಾ ತಂಡ ಸೇರಿದರೆ, ಕೃಷನ್ ಧುಳ್ 70 ಲಕ್ಷಕ್ಕೆ ತೆಲುಗು ಟೈಟಾನ್ ಸೇರಿದರು.
ಹಿರಿಯ ಅನುಭವಿ ಸುರ್ಜಿತ್ ಸಿಂಗ್ 60 ಲಕ್ಷ ಬೆಲೆಗೆ ಜೈಪುರ್ ಪಿಂಕ್ ಪ್ಯಾಂಥರ್ಸ್ ಪಾಲಾದರೆ, ಡಿಫೆಂಡರ್ ಶುಭಂ ಶಿಂಧೆ 70 ಲಕ್ಷಗಳ ಅಚ್ಚರಿ ಮೊತ್ತಕ್ಕೆ ಪಾಟ್ನಾ ಪೈರೆಟ್ಸ್ ತಂಡ ಸೇರಿದ್ದಾರೆ.
ಆದರೆ ಸುಲ್ತಾನ್ ಫಜಲ್ ಅತ್ರಾಚಾಲಿ ಬೆಂಗಾಲ್ ವಾರಿಯರ್ಸ್ ಗೆ ಕೇವಲ 50 ಲಕ್ಷಕ್ಕೆ ಸೇಲಾಗುವ ಮೂಲಕ ನಿರಾಸೆ ಅನುಭವಿಸಿದರೆ, ಆಲ್ ರೌಂಡರ್ ವಿಜಯ್ ಮಲಿಕ್ ಕೇವಲ 20 ಲಕ್ಷ ಮೊತ್ತಕ್ಕೆ ತೆಲುಗು ಟೈಟಾನ್ಸ್ ತಂಡ ಸೇರಿದರು.
ಇನ್ನು ಅನುಭವಿ ಡಿಫೆಂಡರ್ ಭಾರಧ್ವಾಜ್ ಅನ್ ಸೋಲ್ಡ್ ಆಗಿ ನಿರಾಸೆ ಅನುಭವಿಸಿದರು. ನಾಳೆಯೂ ಹರಾಜು ನಡೆಯಲಿದ್ದು ಸಿ ಮತ್ತು ಡಿ ಗ್ರೂಪ್ ನ ಆಟಗಾರರು ಮತ್ತು ಹರಾಜಾಗದ ಆಟಗಾರರು ಯಾವ ತಂಡ ಸೇರಲಿದ್ದಾರೆ ಎಂಬ ಕುತೂಹಲ ಹೆಚ್ಚಿಸಿದೆ.
Leave a Comment