ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ಇನ್ನಿಲ್ಲ; ಹಸಿರಿನಲ್ಲಿ ಕೊನೆಯುಸಿರೆಳೆದ ವೃಕ್ಷಮಾತೆ

Tulsi Gowda
Spread the love

ನ್ಯೂಸ್ ಆ್ಯರೋ: ಚಪ್ಪಲಿ ಇಲ್ಲದೇ ಬರಿಗಾಲು, ಬುಡಕಟ್ಟು ವೇಷ ಭೂಷಣದಲ್ಲಿ ರಾಷ್ಟ್ರಪತಿ, ಪ್ರಧಾನ ಮಂತ್ರಿ ಸೇರಿದಂತೆ ಗಣ್ಯಾತಿ ಗಣ್ಯರ ಎದುರು ನಡೆದುಕೊಂಡು ಹೋಗಿ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದ ವೃಕ್ಷ ಮಾತೆ ತುಳಸಿ ಗೌಡ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಾಲಕ್ಕಿ ಸಮುದಾಯದ ತುಳಸಿಗೌಡ (86) ಇಂದು (ಡಿಸೆಂಬರ್ 16) ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಅಂಕೋಲ ತಾಲ್ಲೂಕಿನ ಹೊನ್ನಳ್ಳಿ ಗ್ರಾಮದ ತುಳಸಿ ಗೌಡ ಅವರು ವೃಕ್ಷ ಮಾತೆ ಎಂದೇ ಜನಜನಿತ. ಹಾಲಕ್ಕಿ ಸಮುದಾಯದ ಈ ಮಹಿಳೆ, ಲಕ್ಷಾಂತರ ಮರಗಳನ್ನು ಸಾಕಿ ಬೆಳೆಸಿದ ಮಹಾ ತಾಯಿ. ಪರಿಸರವಾದಿ ತುಳಸಿ ಗೌಡ ಅವರು ಈವರೆಗೂ ಒಂದು ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು, ಬೃಹತ್ ಕಾಡನ್ನೇ ಬೆಳೆಸಿದ್ದಾರೆ. ಕಳೆದ 60 ವರ್ಷಗಳಿಂದ ಅವರು ಪರಿಸರ ಸಂರಕ್ಷಣೆಯ ಕಾರ್ಯ ಹಾಗೂ ಪರಿಸರ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಹೀಗಾಗಿ ಇವರ ಪರಿಸರ ಪ್ರೇಮವನ್ನು ಮೆಚ್ಚಿ 2021ರಲ್ಲಿ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

1944ರಲ್ಲಿ ಹೊನ್ನಳ್ಳಿ ಗ್ರಾಮದಲ್ಲಿ ನಾರಾಯಣ ಹಾಗೂ ನೀಲಿ ದಂಪತಿಗೆ ಜನಸಿದ ಕೂಸಿಗೆ ತುಳಸಿ ಎಂಬ ಸಸ್ಯದ ಹೆಸರಿಟ್ಟರು. ಬಳಿಕ ಬಾಲಕಿಯಾಗಿದ್ದ ಕಾಲದಿಂದ ಹಿಡಿದು ಇಂದಿನವರೆಗೂ ತುಳಸಿ ಗೌಡ ಅವರು ಮರ ಹಾಗೂ ಕಾಡಿನಲ್ಲೇ ಬೆಳೆದು ಬಂದವರು. 12ನೇ ವಯಸ್ಸಿನಲ್ಲಿ ತುಳಸಿ ಗೌಡ ಅವರಿಗೆ ಮರಗಳ ಜೊತೆಗಿನ ಬಾಂಧವ್ಯ ಆರಂಭವಾಯ್ತು. ಬಳಿಕ ಮರಗಳ ಜೊತೆಯಲ್ಲೇ ನಿತ್ಯ ಒಡನಾಟ.. ಹೀಗಾಗಿ. ಇವರನ್ನು ‘ಅರಣ್ಯದ ಎನ್‌ಸೈಕ್ಲೋಪೀಡಿಯಾ’ ಎನ್ನುತ್ತಾರೆ.

2021ರಲ್ಲಿ ತುಳಸಿ ಗೌಡ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಬಳಿಕ ಕಳೆದ ವರ್ಷ ಅಂದರೆ 2023ರಲ್ಲಿ ತುಳಸಿ ಗೌಡ ಅವರಿಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು.

Leave a Comment

Leave a Reply

Your email address will not be published. Required fields are marked *

error: Content is protected !!