48 ವರ್ಷಗಳ ಬಳಿಕ ಸ್ಪೀಕರ್ ಸ್ಥಾನಕ್ಕೆ ನಡೆದ ಚುನಾವಣೆ – 18ನೇ ಲೋಕಸಭಾ ಸ್ಪೀಕರ್ ಆಗಿ ಓಂ ಬಿರ್ಲಾ ಆಯ್ಕೆ
ನ್ಯೂಸ್ ಆ್ಯರೋ : 48 ವರ್ಷಗಳ ಬಳಿಕ ಲೋಕಸಭಾ ಸ್ಪೀಕರ್ ಗಾದಿಗೆ ಚುನಾವಣೆ ನಡೆದಿದ್ದು, 18ನೇ ಲೋಕಸಭೆಯ ಸ್ಪೀಕರ್ ಆಗಿ ಓಂ ಬಿರ್ಲಾ ಆಯ್ಕೆಯಾಗಿದ್ದಾರೆ. ಆ ಮೂಲಕ ಸತತ ಎರಡನೇ ಬಾರಿ ಸ್ಪೀಕರ್ ಹುದ್ದೆಗೆ ಏರಿದ್ದಾರೆ.
ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಉಪಸಭಾಪತಿ ಸ್ಥಾನವನ್ನು ನೀಡಲು ನಿರಾಕರಿಸುವ ಮೂಲಕ ವಿರೋಧ ಪಕ್ಷಗಳ ಹಕ್ಕನ್ನು ಕಸಿದುಕೊಂಡಿದೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ 48 ವರ್ಷಗಳ ನಂತರ ಲೋಕಸಭಾಧ್ಯಕ್ಷ ಸ್ಥಾನಕ್ಕೆ ಇಂದು ಸ್ಪರ್ಧೆ ನಡೆಯಿತು.
ಓಂ ಬಿರ್ಲಾ ಅವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡುವ ಪ್ರಸ್ತಾಪವನ್ನು ಪ್ರಧಾನಿ ನರೇಂದ್ರ ಮೋದಿ ಮಂಡಿಸಿದರೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅನುಮೋದಿಸಿದರು. ಬಳಿಕ ಎನ್‌ಡಿಎ ಮೈತ್ರಿಕೂಟದ ಹಲವು ಸದಸ್ಯರು ಓಂ ಬಿರ್ಲಾ ಅವರ ಹೆಸರನ್ನು ಅನುಮೋದಿಸಿದರು.
ವಿರೋಧ ಪಕ್ಷದ ಸದಸ್ಯರು ಕೋಡಿಕುನ್ನಿಲ್ ಸುರೇಶ್ ಅವರ ಹೆಸರನ್ನು ಪ್ರಸ್ತಾಪಿಸಿ, ಅನುಮೋದಿಸಿದರು.
ಪೀಠದಲ್ಲಿ ಕುಳಿತಿದ್ದ ಹಂಗಾಮಿ ಸ್ಪೀಕರ್ ಭರ್ತೃಹರಿ ಮೆಹತಾಬ್ ಅವರು ಪ್ರಸ್ತಾಪವನ್ನು ಮತಕ್ಕೆ ಹಾಕಿದರು. ಧ್ವನಿ ಮತ ಮೂಲಕ ಪ್ರಸ್ತಾವನೆಗೆ ಅನುಮೋದನೆ ಲಭಿಸಿತು.
ಬಿರ್ಲಾ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ ಎಂದು ಹಂಗಾಮಿ ಸ್ಪೀಕರ್ ಘೋಷಿಸಿದರು. ಪ್ರಧಾನಿ ನರೇಂದ್ರ ಮೋದಿ, ಸಚಿವ ಕಿರಣ್ ರಿಜಿಜು ಹಾಗೂ ರಾಹುಲ್ ಗಾಂಧಿ ಅವರು ನೂತನ ಸ್ಪೀಕರ್ ಅವರನ್ನು ಪೀಠಕ್ಕೆ ಕರೆತಂದರು.
ಎರಡನೇ ಅವಧಿಗೆ ನೀವು ಲೋಕಸಭಾಧ್ಯಕ್ಷರಾಗಿ ಆಯ್ಕೆಯಾಗುತ್ತಿರುವುದು ಸದನಕ್ಕೆ ಗೌರವವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. 17ನೇ ಲೋಕಸಭೆಯ ಸ್ಪೀಕರ್ ಆಗಿ ಓಂ ಬಿರ್ಲಾ ಅವರ ಐದು ವರ್ಷಗಳ ಅನುಭವವು ಸದನವನ್ನು ಸರಿಯಾದ ದಿಕ್ಕಿನಲ್ಲಿ ನಡೆಸಲು ಮತ್ತು ಅದನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಸಹಾಯ ಮಾಡುತ್ತದೆ ಎಂಬ ಭರವಸೆಯನ್ನು ಪ್ರಧಾನಿ ವ್ಯಕ್ತಪಡಿಸಿದರು.
Leave a Comment