ರಾಜ್ಯದ ಹಿರಿಯರಿಗೂ ಬಸ್ ದರದಲ್ಲಿ ಶೇ.25ರಷ್ಟು ರಿಯಾಯಿತಿ; ವಯಸ್ಸಿನ ಪುರಾವೆಯಾಗಿ ಆಧಾರ್ ಕಾರ್ಡ್ ಕಡ್ಡಾಯ
ನ್ಯೂಸ್ ಆ್ಯರೋ: ದೇಶದ ಯಾವುದೇ ರಾಜ್ಯದ ಹಿರಿಯ ನಾಗರಿಕರಿಗೆ, ಆಂಧ್ರ ಬಸ್ಗಳಲ್ಲಿ ಪ್ರಯಾಣಿಸಿದರೆ ಅವರಿಗೆ ಶೇ 25 ರಷ್ಟು ರಿಯಾಯಿತಿ ನೀಡುವುದಾಗಿ ರಾಜ್ಯ ರಸ್ತೆ ಸಾರಿಗೆ ನಿಗಮ ಘೋಷಿಸಿದೆ. 60 ವರ್ಷ ಪೂರೈಸಿದ ನಾಗರಿಕರು ಸರ್ಕಾರಿ ಸ್ವಾಮ್ಯದ ಸಾರಿಗೆಯ ಎಲ್ಲಾ ರೀತಿಯ ಬಸ್ಗಳಲ್ಲಿ ಈ ರಿಯಾಯಿತಿ ಪಡೆಯಲಿದ್ದಾರೆ.
ಟಿಕೆಟ್ ನೀಡುವ ಸಮಯದಲ್ಲಿ ಅಥವಾ ಪ್ರಯಾಣದ ಸಮಯದಲ್ಲಿ ಹಿರಿಯ ನಾಗರಿಕರಿಂದ ಅವರ ವಯಸ್ಸಿನ ಪುರಾವೆಯಾಗಿ ಆಧಾರ್ ಕಾರ್ಡ್, ಹಿರಿಯ ನಾಗರಿಕರ ಗುರುತಿನ ಚೀಟಿ, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್ ಪೋರ್ಟ್ ಅಥವಾ ಪಡಿತರ ಚೀಟಿಯನ್ನು ಪರಿಶೀಲಿಸುವಂತೆ ಬಸ್ ಚಾಲಕರು ಮತ್ತು ನಿರ್ವಾಹಕರಿಗೆ ನಿರ್ದೇಶಿಸಲಾಗಿದೆ. ಪ್ರಯಾಣಿಕರು ಈ ಯಾವುದೇ ದಾಖಲೆಗಳನ್ನು ಭೌತಿಕ ರೂಪದಲ್ಲಿ ಅಥವಾ ಡಿಜಿಟಲ್ ರೂಪದಲ್ಲಿ ಸಂಬಂಧಪಟ್ಟ ಸಿಬ್ಬಂದಿಗೆ ತೋರಿಸಿದರೆ ಸಾಕು.
“60 ವರ್ಷ ಪೂರೈಸಿದ ಹಿರಿಯ ನಾಗರಿಕರು ಯಾವುದೇ ರಾಜ್ಯ ಸರ್ಕಾರ ಅಥವಾ ಭಾರತ ಸರ್ಕಾರ ನೀಡಿದ, ಭೌತಿಕ ಅಥವಾ ಡಿಜಿಟಲ್ ರೂಪದಲ್ಲಿರುವ ವಯಸ್ಸಿನ ಯಾವುದೇ ಪುರಾವೆಗಳನ್ನು ಹಾಜರುಪಡಿಸಿ ಶೇಕಡಾ 25 ರಷ್ಟು ರಿಯಾಯಿತಿಯನ್ನು ಪಡೆಯಬಹುದು” ಎಂದು ಎಪಿಎಸ್ಆರ್ಟಿಸಿ ಆದೇಶದಲ್ಲಿ ತಿಳಿಸಿದೆ. ಆದೇಶದ ಅನುಷ್ಠಾನ ಖಚಿತಪಡಿಸಿಕೊಳ್ಳಲು ಸಂಸ್ಥೆಯು ಎಲ್ಲಾ ಕ್ಷೇತ್ರ ಅಧಿಕಾರಿಗಳು ಮತ್ತು ಮೇಲ್ವಿಚಾರಕರಿಗೆ ನಿರ್ದೇಶನ ನೀಡಿದೆ.
ಈ ಮೊದಲು ಆಂಧ್ರಪ್ರದೇಶದ ಹಿರಿಯ ನಾಗರಿಕರಿಗೆ ಮಾತ್ರ ಬಸ್ಗಳಲ್ಲಿ ಶೇಕಡಾ 25 ರಷ್ಟು ರಿಯಾಯಿತಿ ಲಭ್ಯವಿತ್ತು. ಆದರೆ ಕೋವಿಡ್ -19 ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈ ರಿಯಾಯಿತಿಯನ್ನು 2020 ರಲ್ಲಿ ನಿಲ್ಲಿಸಲಾಗಿತ್ತು. ಸದ್ಯ ಈ ರಿಯಾಯಿತಿಯನ್ನು ಪುನರಾರಂಭಿಸಲಾಗಿದೆ.
Leave a Comment