ದಿನಾ ಬೆಳಗ್ಗೆ ಬೆಡ್ ಕಾಫಿ ಕುಡಿಯೋದು ನಿಲ್ಲಿಸಿ; ಆರೋಗ್ಯ ವೃದ್ಧಿಸಲು ಇವುಗಳನ್ನು ತಿನ್ನೋದು ಒಳ್ಳೆಯದು
ನ್ಯೂಸ್ ಆ್ಯರೋ: ನಾವೆಲ್ಲರೂ ದಿನ ಬೆಳಗ್ಗೆ ಎದ್ದು ಬೆಡ್ ಕಾಫಿ ಕುಡಿಯುವ ಒಂದು ಅಭ್ಯಾಸ ಮಾಡಿಕೊಂಡಿದ್ದೇವೆ. ನಾವು ರಾತ್ರಿ ತಿಂದಂತಹ ಆಹಾರ ಜೀರ್ಣವಾಗಿ ಹೋಗಿರುತ್ತದೆ ಮತ್ತು ಬೆಳಗ್ಗೆ ನಮ್ಮ ಹೊಟ್ಟೆ ಖಾಲಿ ಸ್ಥಿತಿಯಲ್ಲಿರುತ್ತದೆ. ಇಂತಹ ಸಂದರ್ಭದಲ್ಲಿ ಖಾಲಿ ಹೊಟ್ಟೆಗೆ ನಾವು ಆರೋಗ್ಯವಾದ ಆಹಾರಗಳನ್ನು ಕೊಡಬೇಕು. ಆದರೆ ಕಾಫಿ ಅಥವಾ ಟೀ ಕುಡಿಯುವುದರಿಂದ ನಾವು ನಮ್ಮ ದೇಹಕ್ಕೆ ಕೆಫೆನ್ ಅಂಶವನ್ನು ಕೊಡುತ್ತಿದ್ದೇವೆ. ಇದು ದೀರ್ಘಕಾಲದಲ್ಲಿ ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತದೆ.
ಹಾಗಾಗಿ ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ತಿನ್ನಿ, ಆರೋಗ್ಯವನ್ನು ಕಾಪಾಡಿಕೊಳ್ಳಿ. ಸರ್ವಕಾಲದಲ್ಲೂ ಸಿಗುವ ಆರೋಗ್ಯಕರವಾದ ಹಣ್ಣು ಎಂದರೆ ಅದು ಬಾಳೆಹಣ್ಣು. ನಮ್ಮ ಮಲಬದ್ಧತೆ ಸಮಸ್ಯೆ, ಅಜೀರ್ಣತೆಗೆ ಇದು ರಾಮಬಾಣ. ಪೊಟ್ಯಾಶಿಯಮ್ ಹೇರಳವಾಗಿರುವ ಬಾಳೆಹಣ್ಣು ತಿನ್ನುವುದರಿಂದ ನಮ್ಮ ರಕ್ತದ ಒತ್ತಡ ಕೂಡ ನಿಯಂತ್ರಣವಾಗುತ್ತದೆ.
ಅದು ಅಲ್ಲದೆ ಇದರಲ್ಲಿ ನಾರಿನ ಪ್ರಮಾಣ, ವಿಟಮಿನ್ ಬಿ6, ಮೆಗ್ನೀಷಿಯಂ, ತಾಮ್ರ, ಮ್ಯಾಂಗನೀಸ್, ಪ್ರೋಟೀನ್, ಇನ್ನಿತರ ಅಂಶಗಳು ಹೇರಳವಾಗಿ ಸಿಗುತ್ತವೆ. ಜೀರ್ಣಾಂಗ ವ್ಯವಸ್ಥೆಯ ಸಮಸ್ಯೆ ಇರುವವರು ಬಾಳೆಹಣ್ಣು ಸೇವಿಸಿ ಜೀರ್ಣಶಕ್ತಿ ಹೆಚ್ಚಿಸಿಕೊಳ್ಳಬಹುದು. ಮನೆಯಲ್ಲಿ ಪ್ಲಾಸ್ಟಿಕ್ ಕವರ್ ನಲ್ಲಿ ಬಾಳೆಹಣ್ಣು ಇರಿಸುವ ಬದಲು ಬಟ್ಟೆಯ ಬ್ಯಾಗ್ ನಲ್ಲಿ ಇರಿಸಿ.
ಬಾದಾಮಿ ಬೀಜಗಳ ಸಿಪ್ಪೆಯಲ್ಲಿ ಟ್ಯಾನಿನ್ ಪ್ರಮಾಣ ಹೇರಳವಾಗಿರುತ್ತದೆ. ಇದನ್ನು ಹಾಗೆ ತಿನ್ನುವುದರಿಂದ ನಾವು ಸೇವಿಸುವ ಆಹಾರಗಳಲ್ಲಿ ಕಂಡುಬರುವ ಪೌಷ್ಟಿಕಾಂಶಗಳು ನಮ್ಮ ದೇಹಕ್ಕೆ ಸರಿಯಾಗಿ ಹೀರಿಕೊಳ್ಳುವುದಿಲ್ಲ. ಹಾಗಾಗಿ ಬಾದಾಮಿ ಬೀಜಗಳನ್ನು ನೀರಿನಲ್ಲಿ ನೆನೆಸಿ ಸಿಪ್ಪೆ ತೆಗೆದು ಸೇವಿಸುವುದು ಒಳ್ಳೆಯದು. ಇದರಿಂದ ಹಲವು ಪ್ರಯೋಜನಗಳು ನಮಗೆ ಸಿಗುತ್ತವೆ. ಇನ್ಸುಲಿನ್ ಪ್ರತಿರೋಧತೆ, ಸಕ್ಕರೆ ಕಾಯಿಲೆ, ಪಿಸಿಓಡಿ, ಅಥವಾ ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದರೆ, ಅತ್ಯುತ್ತಮ ಗುಣಮಟ್ಟದ ಬಾದಾಮಿ ಬೀಜಗಳನ್ನು ಆಯ್ಕೆ ಮಾಡಿ ಸೇವಿಸುವ ಅಭ್ಯಾಸ ಇಟ್ಟುಕೊಳ್ಳಿ.
ಒಣ ದ್ರಾಕ್ಷಿಯಲ್ಲಿ ಕೂಡ ನಾರಿನ ಅಂಶ ಅಪಾರವಾಗಿ ಕಂಡು ಬರುತ್ತದೆ. ನೀರಿನಲ್ಲಿ ನೆನೆಸಿ ಒಣದ್ರಾಕ್ಷಿ ಸೇವಿಸುವುದರಿಂದ ಆರೋಗ್ಯಕ್ಕೆ ಅದ್ಭುತ ಲಾಭಗಳನ್ನು ಪಡೆದುಕೊಳ್ಳಬಹುದು. ನೀರಿನಲ್ಲಿ ನೆನೆ ಹಾಕಿದ ಒಣ ದ್ರಾಕ್ಷಿ ಸೇವನೆ ಮಾಡುವುದರಿಂದ ಕರುಳಿನ ಚಲನೆ ಚೆನ್ನಾಗಿ ನಡೆಯುತ್ತದೆ ಮತ್ತು ಜೀರ್ಣ ಶಕ್ತಿ ವೃದ್ಧಿಸುತ್ತದೆ. ಇದರಿಂದ ಇಡೀ ದಿನ ನಮಗೆ ಶಕ್ತಿ ಹಾಗೂ ಚೈತನ್ಯ ಸಿಗುತ್ತದೆ. ಮಹಿಳೆಯರು ತಮ್ಮ ಪೀರಿಯಡ್ ಗೆ ಮುಂಚೆ ಹತ್ತು ದಿನಗಳ ಕಾಲ ಪ್ರತಿದಿನ ಆರರಿಂದ ಏಳು ಒಣದ್ರಾಕ್ಷಿ ನೀರಿನಲ್ಲಿ ನೆನೆಸಿ ಸೇವಿಸುವುದು ಒಳ್ಳೆಯದು ಎಂದು ರುಜುತಾ ದಿವಾಕರ್ ಹೇಳುತ್ತಾರೆ.
ಮೇಲಿನ ಆಹಾರಗಳನ್ನು ಸೇವಿಸಿದ 10 ರಿಂದ 15 ನಿಮಿಷಗಳ ನಂತರ ಕಾಫಿ ಅಥವಾ ಚಹಾ ಕುಡಿಯಬಹುದು. ಯಾವುದೇ ಆಹಾರಗಳನ್ನು ತಿನ್ನುವ ಮುಂಚೆ ಒಂದು ಗ್ಲಾಸ್ ನೀರು ಕುಡಿಯಿರಿ. ಬೆಳಗ್ಗೆ ಎದ್ದ ತಕ್ಷಣ ಅಥವಾ ಥೈರಾಯ್ಡ್ ಔಷಧಿಗಳನ್ನು ತೆಗೆದುಕೊಂಡು ನಂತರದಲ್ಲಿ ಇವುಗಳನ್ನು ಸೇವಿಸಿ.
Leave a Comment