Paris Olympics 2024 : ಜಾವೆಲಿನ್ ಒಲಿಂಪಿಕ್ಸ್ ದಾಖಲೆಯೊಂದಿಗೆ ಚಿನ್ನ ಗೆದ್ದ ಅರ್ಶದ್ ನದೀಮ್ – ಬೆಳ್ಳಿ ಪದಕಕ್ಕೆ ತೃಪ್ತಿ ಕಂಡ “ಗೋಲ್ಡನ್ ಬಾಯ್” ನೀರಜ್ ಚೋಪ್ರಾ
ನ್ಯೂಸ್ ಆ್ಯರೋ : ಪ್ಯಾರಿಸ್ ಒಲಿಂಪಿಕ್ಸ್ ನ ಜಾವೆಲಿನ್ ಥ್ರೋ ವಿಭಾಗದಲ್ಲಿ ಭಾರತದ ಗೋಲ್ಡನ್ ಬಾಯ್ ಖ್ಯಾತಿಯ ನೀರಜ್ ಚೋಪ್ರಾ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರೆ, ಹೊಸ ಒಲಿಂಪಿಕ್ಸ್ ದಾಖಲೆಯೊಂದಿಗೆ ಪಾಕಿಸ್ತಾನದ ಅರ್ಶದ್ ನದೀಮ್ ಚಿನ್ನದ ಪದಕ ಗೆದ್ದು ಬೀಗಿದ್ದಾರೆ.
ಹೊಸ ಒಲಿಂಪಿಕ್ ದಾಖಲೆಯ ಥ್ರೋನಲ್ಲಿ, ನದೀಮ್ 92.97 ಮೀ ಎಸೆತವನ್ನು ದಾಖಲಿಸಿ ಥಾರ್ಕಿಲ್ಡ್ಸೆನ್ ಆಂಡ್ರಿಯಾಸ್ ಅವರ 90.57 ಮೀಟರ್ ದಾಖಲೆಯನ್ನು ಮುರಿದರು. ಈ ದಾಖಲೆ ಬೀಜಿಂಗ್ ಒಲಿಂಪಿಕ್ಸ್‌ನ ವೇಳೆ ದಾಖಲಾಗಿತ್ತು.
ನೀರಜ್ ಚೋಪ್ರಾ ಅವರು 89.45 ಮೀ ಎಸೆತ ದಾಖಲಿಸಿ ಬೆಳ್ಳಿ ಪದಕ ಗಳಿಸಿದರೆ, ಗ್ರೆನಡಾದ ಎ ಪೀಟರ್ಸ್ 88.54 ಮೀ ದಾಖಲಿಸಿ ಕಂಚಿನ ಪದಕ ಪಡೆದರು.
ಆರು ಬಾರಿ ಜಾವೆಲಿನ್ ಎಸೆದ ನೀರಜ್ ಚೋಪ್ರಾ ಸತತ ಫೌಲ್ ಗಳ ಮೂಲಕ ನಿರಾಸೆ ಅನುಭವಿಸಿದ್ದು, ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಕೋಟ್ಯಾಂತರ ಭಾರತೀಯರ ಚಿನ್ನದ ಪದಕದ ಆಸೆ ಕಮರಿ ಹೋಯಿತು. ಆದರೂ ಸತತ ಎರಡು ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವ ಮೂಲಕ ನೀರಜ್ ಚೋಪ್ರಾ ಇತಿಹಾಸ ರಚಿಸಿದ್ದು, ಭಾರತೀಯರ ಪಾಲಿಗೆ ಕಿಂಚಿತ್ತು ಸಮಾಧಾನ ತರಿಸಿತು.
ನೀರಜ್ ಚೋಪ್ರಾ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸುವುದರೊಂದಿಗೆ ಸ್ವಾತಂತ್ರ್ಯ ಬಳಿಕ ವೈಯುಕ್ತಿಕ ವಿಭಾಗದಲ್ಲಿ ಎರಡು ಒಲಿಂಪಿಕ್ ಪದಕ ಗೆದ್ದ ಭಾರತದ 4ನೇ ಅಥ್ಲೀಟ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಈ ಮೊದಲು ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು, ಕುಸ್ತಿಪಟು ಸುಶೀಲ್ ಕುಮಾರ್ ಹಾಗೂ ಶೂಟರ್ ಮನು ಭಾಕರ್ ಎರಡು ಒಲಿಂಪಿಕ್ ಪದಕ ಜಯಿಸಿದ್ದಾರೆ.
ನೀರಜ್ ಬೆಳ್ಳಿ ಪದಕ ಸಾಧನೆಯೊಂದಿಗೆ ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತವು 5ನೇ ಪದಕ ಗೆದ್ದಂತಾಗಿದೆ. ಮನು ಭಾಕರ್ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿ ಪದಕದ ಖಾತೆ ತೆರೆದರು. ಇದಾದ ಬಳಿಕ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಮನು ಭಾಕರ್ ಹಾಗೂ ಸರಬ್ಜೋತ್ ಸಿಂಗ್ ಜೋಡಿ ಕಂಚಿನ ಪದಕ ಜಯಿಸಿದರು. ಇನ್ನು ಪುರುಷರ 50 ಮೀ. ರೈಫಲ್ 3 ಪೊಸಿಷನ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ಸ್ವಪ್ನಿಲ್ ಕುಶಾಲೆ ಕಂಚಿನ ಪದಕ ಜಯಿಸಿದರು. ಇಂದೇ ನಡೆದ ಕಂಚಿನ ಪದಕದ ಪಂದ್ಯದಲ್ಲಿ ಭಾರತ ಪುರುಷರ ಹಾಕಿ ತಂಡವು ಸ್ಪೇನ್ ದೇಶವನ್ನು ಮಣಿಸಿ ಸತತ ಎರಡನೇ ಬಾರಿಗೆ ಕಂಚಿನ ಪದಕ ಜಯಿಸಿತು.
Leave a Comment