
ವಾಘ್ ಬಕ್ರಿ ಟೀ ಗ್ರೂಪ್‌ನ ಪರಾಗ್ ದೇಸಾಯಿ ನಿಧನ – ಖ್ಯಾತ ಉದ್ಯಮಿ ಸಾವಿಗೆ ಕಾರಣವಾಯಿತೇ ಬೀದಿ ನಾಯಿಗಳು?
- ರಾಷ್ಟ್ರೀಯ ಸುದ್ದಿ
- October 24, 2023
- No Comment
- 59
ನ್ಯೂಸ್ ಆ್ಯರೋ : ವಾಘ್ ಬಕ್ರಿ ಟೀ ಗ್ರೂಪ್ ಕಂಪನಿಯ ಕಾರ್ಯವಾಹಕ ನಿರ್ದೇಶಕ ಪರಾಗ್ ದೇಸಾಯಿ ಸಾವನ್ನಪ್ಪಿರುವುದಾಗಿ ಕಂಪೆನಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಅಹ್ಮದಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಅ. 22 ಪರಾಗ್ ನಿಧನರಾಗಿದ್ದಾರೆ. ಕಳೆದ ವಾರ ಬಿದ್ದು ಮೆದುಳಿನಲ್ಲಿ ರಕ್ತಸ್ರಾವವಾಗಿ ಗಂಭೀರ ಸ್ಥಿತಿಯಲ್ಲಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಪರಾಗ್ ದೇಸಾಯಿ ನಿಧನಕ್ಕೆ ಬೀದಿ ನಾಯಿಗಳು ಕಾರಣ ಎನ್ನಲಾಗಿದೆ. ಪರಾಗ್ ದೇಸಾಯಿ ಅಕ್ಟೋಬರ್ 15ರಂದು ತಮ್ಮ ಮನೆ ಬಳಿ ನಡೆದು ಹೋಗುವಾಗ ಬೀದಿ ನಾಯಿಗಳು ದಾಳಿ ಮಾಡಿವೆ. ಅವುಗಳಿಂದ ತಪ್ಪಿಸಿಕೊಂಡು ಓಡುವಾಗ ಎಡವಿ ಬಿದ್ದು ಅವರ ತಲೆಗೆ ಗಾಯವಾಗಿತ್ತು.
ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಯೊಂದಕ್ಕೆ ಸೇರಿಸಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಝೈಡಸ್ ಆಸ್ಪತ್ರೆಗೆ ದಾಖಲಿಸಿ ಸರ್ಜರಿ ಮಾಡಲಾಯಿತು. ಏಳು ದಿನಗಳ ಕಾಲ ಅವರನ್ನು ವೆಂಟಿಲೇಟರ್ನಲ್ಲಿ ಇಡಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
49 ವರ್ಷದ ಪರಾಗ್ ದೇಸಾಯಿ ಅವರಿಗೆ ಪತ್ನಿ ವಿದಿಶಾ ಹಾಗೂ ಪುತ್ರಿ ಪರಿಶಾ ಇದ್ದಾರೆ. ಪರಾಗ್ ಅವರ ಅಂತ್ಯಕ್ರಿಯೆ ನಿನ್ನೆ ಅಹ್ಮದಾಬಾದ್ನಲ್ಲಿ ನಡೆಯಿತು.
ವಾಘ್ ಬಕ್ರಿ ಕಂಪೆನಿಯ ಶಕ್ತಿ ಆಗಿದ್ದ ಪರಾಗ್
ವಾಘ್ ಬಕ್ರಿ ಟೀ ಗ್ರೂಪ್‌ನ ಎಂಡಿ ರಸೇಶ್ ದೇಸಾಯಿ ಅವರ ಮಗ ಪರಾಗ್ ದೇಸಾಯಿ ಅವರು ಸಂಸ್ಥೆಯ ಸೇಲ್ಸ್, ಮಾರ್ಕೆಟಿಂಗ್ ಮತ್ತು ರಫ್ತು ವಿಭಾಗದ ನಾಯಕತ್ವ ವಹಿಸಿದ್ದರು.
30ಕ್ಕೂ ಹೆಚ್ಚು ವರ್ಷ ಉದ್ದಿಮೆ ಅನುಭವ ಹೊಂದಿದ್ದ ಅವರ ಶ್ರಮದಿಂದಾಗಿ ವಾಘ್ ಬಕ್ರಿ ದೇಶಾದ್ಯಂತ ಮಾರುಕಟ್ಟೆಯನ್ನು ಹೊಂದಿದೆ. ಅಮೆರಿಕದ ಲಾಂಗ್ ಐಲ್ಯಾಂಡ್ ಯೂನಿವರ್ಸಿಟಿಯಲ್ಲಿ ಎಂಬಿಎ ಮಾಡಿದ್ದ ಪರಾಗ್, ಕೇವಲ ಸೇಲ್ಸ್ ಮಾತ್ರವಲ್ಲ, ಟೀ ಟೇಸ್ಟಿಂಗ್ ವಿದ್ಯೆಯಲ್ಲೂ ಪರಿಣಿತಿ ಹೊಂದಿದ್ದರು.