ಮೈಸೂರು-ದರ್ಭಾಂಗ ಎಕ್ಸ್‌ಪ್ರೆಸ್ ರೈಲು ದುರಂತ: ಅಪಘಾತ ಹೇಗಾಯ್ತು? ದೋಷ ಯಾರದ್ದು?
ನ್ಯೂಸ್ ಆ್ಯರೋ: ಒಡಿಶಾದಲ್ಲಿ ನಡೆದ ಅಪಘಾತದಂತೆ ಮತ್ತೊಂದು ರೈಲು ಅಪಘಾತ ತಮಿಳುನಾಡಿನಲ್ಲಿ ನಡೆದಿದೆ. ಮೈಸೂರಿನಿಂದ ಬಿಹಾರದ ದರ್ಬಾಂಗ್‌ಗೆ ಹೊರಟಿದ್ದ ಬಾಗಮತಿ ಎಕ್ಸ್‌ಪ್ರೆಸ್ ರೈಲು ಲೂಪ್ ಲೈನಿಗೆ ಪ್ರವೇಶ ಪಡೆದಿದ್ದರಿಂದ ಈ ಅಪಘಾತ ಸಂಭವಿಸಿದೆ.
ಮೈಸೂರಿನಿಂದ ದರ್ಬಾಂಗ್‌ಗೆ ತೆರಳುತ್ತಿದ್ದ ಬಾಗಮತಿ ಎಕ್ಸ್‌ಪ್ರೆಸ್ ರಾತ್ರಿ 8.27ಕ್ಕೆ ಪೊನ್ನೇರಿ ರೈಲು ನಿಲ್ದಾಣ ದಾಟಿತ್ತು. ಈ ವೇಳೆ ಮುಂದಿನ ನಿಲ್ದಾಣ ಕವರಪೆಟ್ಟೈಗೆ ತೆರಳಲು ಗ್ರೀನ್ ಸಿಗ್ನಲ್ ಸಿಕ್ಕಿತ್ತು. ನಿಲ್ದಾಣ ಪ್ರವೇಶಿಸುವಾಗ ಗೂಡ್ಸ್ ರೈಲಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ.
ಚೆನ್ನೈನಿಂದ ಕವರಪೆಟ್ಟೈ 40 ಕಿ.ಮೀ ದೂರದಲ್ಲಿದೆ. ಮೈಸೂರಿನಿಂದ ಬೆಳಗ್ಗೆ 10:34ಕ್ಕೆ ಹೊರಟ್ಟಿದ್ದ ರೈಲು ಮಧ್ಯಾಹ್ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ(ಕೆಎಸ್‌ಆರ್) ನಿಲ್ದಾಣಕ್ಕೆ ತಲುಪಿತ್ತು. ಅ.13 ರಂದು ಈ ರೈಲು ಬಿಹಾರ ದರ್ಬಾಂಗಕ್ಕೆ ತಲುಪಬೇಕಿತ್ತು.
ಅಪಘಾತಕ್ಕೆ ಕಾರಣ ಏನು?:
ಈ ರೈಲು ಕವರಪೆಟ್ಟೈ ನಿಲ್ದಾಣದ ನಂತರ ಗುಡೂರಿನ ಕಡೆಗೆ ಹೋಗಬೇಕಿತ್ತು. ಇದು ಎಕ್ಸ್‌ಪ್ರೆಸ್ ರೈಲಾಗಿದ್ದ ಕಾರಣ ಕವರಪೆಟ್ಟೈ ನಿಲ್ದಾಣದಲ್ಲಿ ನಿಲುಗಡೆ ಇರಲಿಲ್ಲ. ಚೆನ್ನೈನಿಂದ ಈ ರೈಲಿಗೆ ಗ್ರೀನ್ ಸಿಗ್ನಲ್ ಸಿಕ್ಕಿತ್ತು. ಚಾಲಕ ಸಿಗ್ನಲ್‌ಗಳನ್ನು ಸರಿಯಾಗಿ ಅನುಸರಿಸಿದ್ದಾನೆ. ಇಲ್ಲಿ ರೈಲು ಮೇನ್ ಲೈನ್‌ನಲ್ಲಿ ಸಾಗಬೇಕಿತ್ತು.ಆದರೆ ಲೂಪ್ ಲೈನ್‌ಗೆ ರೈಲು ಪ್ರವೇಶ ಮಾಡಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಬೋಗಿಗಳು ಪಲ್ಟಿಯಾಗಿ ಅಪಘಾತ ಸಂಭವಿಸಿದೆ. ಗಂಟೆಗೆ 100 ಕಿ.ಮೀ ವೇಗದಲ್ಲಿ ಎಕ್ಸ್‌ಪ್ರೆಸ್ ರೈಲು ಸಂಚರಿಸುತ್ತಿದ್ದ ಕಾರಣ 13 ಬೋಗಿಗಳು ಹಳಿ ತಪ್ಪಿವೆ.
ಏನಿದು ಲೂಪ್‌ಲೈನ್?:
ಸುಗಮ ಸಂಚಾರಕ್ಕಾಗಿ ರೈಲು ನಿಲ್ದಾಣಗಳಲ್ಲಿ ನಿರ್ಮಿಸಲಾಗುವ ಹೆಚ್ಚುವರಿ ಹಳಿಗಳನ್ನು ಲೂಪ್ ಲೈನ್ ಎಂದು ಕರೆಯಲಾಗುತ್ತದೆ. ಅದು ನಿಲ್ದಾಣದ ವ್ಯಾಪ್ತಿ ಮುಗಿದ ಬಳಿಕ ಮತ್ತೆ ಮೇನ್ ಲೈನ್‌ಗೆ ಸೇರ್ಪಡೆಯಾಗುತ್ತದೆ. ಎಕ್ಸ್‌ಪ್ರೆಸ್ ರೈಲುಗಳ ಸಂಚಾರಕ್ಕೆ ಯಾವುದೇ ಸಮಸ್ಯೆ ಆಗದೇ ಇರಲು ಸಾಧಾರಣವಾಗಿ ಪ್ಯಾಸೆಂಜರ್ ರೈಲು, ಗೂಡ್ಸ್ ರೈಲುಗಳನ್ನು ನಿಲ್ದಾಣದಲ್ಲಿರುವ ಲೂಪ್ ಲೈನಿನಲ್ಲಿ ನಿಲ್ಲಿಸಲಾಗುತ್ತದೆ. ಸಾಮಾನ್ಯವಾಗಿ ಲೂಪ್ ಲೈನ್ ಉದ್ದ 750 ಮೀಟರ್ ಇರುತ್ತದೆ.
ರೈಲು ದುರಂತದಲ್ಲಿ ದೋಷ ಯಾರದ್ದು?:
ಕತ್ತರಿಸಿದ ಹಳಿಯಲ್ಲಿ ಸಂಚಾರ, ಸಿಗ್ನಲ್ ಉಲ್ಲಂಘಿಸುವುದು, ನಿಗದಿ ಪಡಿಸಿದ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಸಂಚಾರ, ಹಳಿ ಮೇಲೆ ಇಡಲಗಿರುವ ಭಾರೀ ಗಾತ್ರದ ವಸ್ತುಗಳಿಗೆ ಡಿಕ್ಕಿ, ಎಂಜಿನ್ ಸಮಸ್ಯೆ, ಸಿಗ್ನಲಿಂಗ್ ಸಮಸ್ಯೆಯಿಂದ ರೈಲು ಅಪಘಾತಗಳು ಸಂಭವಿಸುತ್ತಿರುತ್ತದೆ. ಆದರೆ ಈ ಪ್ರಕರಣದಲ್ಲಿ ಸಿಗ್ನಲಿಂಗ್‌ನಲ್ಲಿ ದೋಷ ಇರುವುದು ಕಾಣುತ್ತದೆ. ಗ್ರೀನ್ ಸಿಗ್ನಲ್ ಸಿಕ್ಕಿದ ನಂತರ ಲೋಕೋಪೈಲಟ್ ರೈಲನ್ನು ಚಲಾಯಿಸಿದ್ದಾನೆ. ಈ ಪ್ರಕರಣದಲ್ಲಿ ಪೈಲಟ್ ಸರಿಯಾಗಿಯೇ ಚಾಲನೆ ಮಾಡಿದ್ದಾನೆ. ಆದರೆ ಮೇನ್ ಲೈನಿನಿಂದ ಲೂಪ್ ಲೈನಿಗೆ ಹಳಿ ಬದಲಾಯಿಸಿದ್ದೇ ಕಾರಣ ಎನ್ನುವುದು ಮೆಲ್ನೋಟಕ್ಕೆ ಕಾಣುತ್ತದೆ. ಈಗ ಇಲಾಖೆ ಈ ಅಪಘಾತದ ಕಾರಣ ಹುಡುಕಲು ತನಿಖೆಗೆ ಆದೇಶಿಸಿದೆ.
Leave a Comment