Mangalore : ಸೊಳ್ಳೆ ಲಾರ್ವಾ ಉತ್ಪಾದನೆ ಕಂಡು ಬಂದರೆ ಕಟ್ಟಡ ಮಾಲಿಕರಿಗೆ 15 ಸಾವಿರ ದಂಡ – ಲಸಿಕೆಯಿಂದ ಮಾತ್ರ ದಢರಾ, ರುಬೆಲ್ಲಾ ರೋಗದ ನಿರ್ಮೂಲನೆ ಸಾಧ್ಯ – : ಮ.ನ.ಪಾ ಆಯಕ್ತ ಆನಂದ್ ಸಿ.ಎಲ್
ನ್ಯೂಸ್ ಆ್ಯರೋ : ದಢರಾ ಮತ್ತು ರುಬೆಲ್ಲಾ ರೋಗದ ನಿಯಂತ್ರಣವೂ ಸಮರ್ಪಕವಾದ ಲಸಿಕಾಕರಣದಿಂದ ಮಾತ್ರ ಸಾಧ್ಯ ಎಂದು ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಸಿ.ಎಲ್. ಆನಂದ್ ಹೇಳಿದರು.
ಅವರು ಸೋಮವಾರ ನಗರದ ಮಂಗಳೂರು ಮಹಾನಗರಪಾಲಿಕೆ ಆಯುಕ್ತರ ಕಚೇರಿ ಸಭಾಂಗಣದಲ್ಲಿ ನಡೆದ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಪೂರ್ವ ತಯಾರಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಮಕ್ಕಳಿಗೆ ನೀಡುವ ಲಸಿಕಾಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.97 ಮಂಗಳೂರು ನಗರ ವ್ಯಾಪ್ತಿಯಲ್ಲಿ ಶೇ. 69 ರಷ್ಟು ಕುಂಠಿತ ಪ್ರಗತಿಯನ್ನು ಸೂಚಿಸುತ್ತಿದ್ದು, ಎಂಆರ್ 1 ಮತ್ತು ಎಂಆರ್ 2 ಲಸಿಕೆಯಿಂದ ವಂಚಿತರಾಗಿರುವ ಎಲ್ಲಾ ಮಕ್ಕಳಿಗೂ ಸಮರ್ಪಕವಾಗಿ ಲಸಿಕೆ ನೀಡುವಂತೆ ಕ್ರಮ ಕೈಗೊಳ್ಳಬೇಕೆಂದು ಆಯುಕ್ತರು ಸೂಚಿಸಿದರು.
ಐದರಿಂದ ಆರು ವರ್ಷದ ಮಕ್ಕಳು ಶಾಲೆಗೆ ದಾಖಲಾಗುವ ಸಮಯದಲ್ಲಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ವೇಳಾಪಟ್ಟಿಯ ಪ್ರಕಾರ ಮಕ್ಕಳು ಲಸಿಕೆ ಪಡೆದಿರುವ ಕುರಿತು ಹಾಗೂ ಮುಖ್ಯವಾಗಿ ದಢರಾ ರುಬೆಲ್ಲ ಲಸಿಕೆಯ ಎರಡು ಡೋಸ್ ಮತ್ತು ಡಿ.ಪಿ.ಟಿ ಬೂಸ್ಟರ್-2 ಲಸಿಕೆಯನ್ನು ಪಡೆದಿರುವ ಕುರಿತು ದಾಖಲೆಯನ್ನು ಪರಿಶೀಲಿಸಿ ಅದರ ಪ್ರತಿಯೊಂದು ಪಡೆಯುವಂತೆ ಹಾಗೂ ಲಸಿಕೆ ಪಡೆದಿರುವ ಮಕ್ಕಳನ್ನು ಗುರುತಿಸಿ ಹತ್ತಿರದ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡುವಂತೆ ಹಾಗೂ ಮಕ್ಕಳು ಸಂಪೂರ್ಣ ಲಸಿಕೆ ಪಡೆದಿರುವ ಕುರಿತು ಮಾಹಿತಿಯನ್ನು ಪಡೆಯಲು ಶಾಲಾ ದಾಖಲಾತಿ ನಮೂನೆಯಲ್ಲಿ ಪ್ರತ್ಯೇಕ ಕಾಲಂ ಅನ್ನು ಸೇರ್ಪಡಿಸುವಂತೆ ಅವರು ಸೂಚಿಸಿದರು.
ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಐದು ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲು ಕ್ರಮ ವಹಿಸುವಂತೆ ತಿಳಿಸಿದರು. ತಾಯಂದಿರ ಸಭೆ ಹಾಗೂ ಬಾಲ ವಿಕಾಸ ಸಮಿತಿ ಸಭೆಯಲ್ಲಿ, ದಢರಾ ರುಬೆಲ್ಲಾ ಲಸಿಕೆಯ ಬಗ್ಗೆ ಮಾಹಿತಿ ನೀಡಬೇಕು. ಸಿಡಿಪಿಓಗಳು ತಾಲೂಕು ಮಟ್ಟದ ಅನುಷ್ಠಾನ ಸಮಿತಿ ಸದಸ್ಯರಾಗಿ ಮೇಲ್ವಿಚಾರಣೆ ನಡೆಸಬೇಕು ಹಾಗೂ ಜಿಲ್ಲಾಮಟ್ಟದ ಮತ್ತು ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಮೇಲ್ವಿಚಾರಣ ವರದಿಯನ್ನು ಪ್ರಸ್ತುತಪಡಿಸಿ ಚರ್ಚಿಸಬೇಕು ಎಂದು ಹೇಳಿದರು.
ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯು ನೇಮಕಗೊಂಡ ವ್ಯಾಕ್ಸಿನೇಟರ್ ಗಳನ್ನು ಒದಗಿಸಬೇಕು, ಮಹಿಳಾ ಆರೋಗ್ಯ ಸಮಿತಿಯ ಸದಸ್ಯರನ್ನು ಅಧಿವೇಶನ ಸ್ಥಳಕ್ಕೆ ಮಕ್ಕಳನ್ನು ಸಜ್ಜುಗೊಳಿಸಲು ತೊಡಗಿಸಿಕೊಳ್ಳಬೇಕು, ಹೊಸ ವಲಸೆ ಸೈಟ್‍ಗಳು ಮತ್ತು ಕೈಗಾರಿಕಾ ವಸತಿ ಸಂಕೀರ್ಣಗಳ ಪಟ್ಟಿಯನ್ನು ಹಂಚಿಕೊಳ್ಳಬೇಕು ಮತ್ತು ಆರ್.ಐ ಶಿಬಿರಗಳನ್ನು ನಡೆಸುವ ಪ್ರದೇಶಗಳಿಗೆ ಲಸಿಕೆಯನ್ನು ಪಡೆಯದ ಮಕ್ಕಳನ್ನು ಗುರುತಿಸಿ ಕರೆತರಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಮಂಗಳೂರು ನಗರ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಆಯುಷ್ಮತಿ ಆರೋಗ್ಯ ಕೇಂದ್ರಗಳಿಗೆ ಖಾಸಗಿ ಕ್ಲಿನಿಕ್‍ಗಳ ನುರಿತ ವೈದ್ಯರನ್ನು ವಾರದಲ್ಲಿ ಒಂದು ದಿನದ ಮಟ್ಟಿಗೆ ಉಚಿತ ಸೇವೆಯನ್ನು ನೀಡಲು ಮನವಿ ಮಾಡಿಕೊಳ್ಳುವಂತೆ ಆಯುಕ್ತರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ರಾಜೇಶ್ ಬಿ.ವಿ, ವಿಶ್ವ ಆರೋಗ್ಯ ಸಂಸ್ಥೆಯ ಸರ್ವಲೆನ್ಸ್ ಮೆಡಿಕಲ್ ಆಫೀಸರ್ ಡಾ. ಹರ್ಷಿತ್, ತಾಲೂಕು ಆರೋಗ್ಯ ಅಧಿಕಾರಿ ಡಾ. ಸುಜಯ್, ಮಂಗಳೂರು ಮಹಾನಗರ ಆರೋಗ್ಯ ಅಧಿಕಾರಿ ಡಾ. ಮಂಜಯ್ಯ ಶೆಟ್ಟಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಲಾರ್ವ ಉತ್ಪತ್ತಿ ಹೊಂದಿರುವ ಪ್ರದೇಶ – ಕಟ್ಟಡ ಮಾಲೀಕರಿಗೆ ದಂಡ:
ಜಿಲ್ಲೆಯಲ್ಲಿ ಡೆಂಗ್ಯೂ ರೋಗದ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಡೆಂಗ್ಯೂ ರೋಗಕ್ಕೆ ಕಾರಣವಾಗುವ ಲಾರ್ವಗಳನ್ನು ನಾಶಗೊಳಿಸಬೇಕು ಎಂದು ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಸಿ.ಎಲ್. ಆನಂದ್ ಅವರು ಹೇಳಿದರು.
ಅವರು ಸೋಮವಾರ ನಗರದ ಮಹಾನಗರಪಾಲಿಕೆ ಆಯುಕ್ತರ ಕಚೇರಿ ಸಭಾಂಗಣದಲ್ಲಿ ನಡೆದ ಡೆಂಗ್ಯೂ ರೋಗ ನಿರ್ಮೂಲನೆ ಹಾಗೂ ಕೈಗೊಂಡ ಕ್ರಮಗಳ ಕುರಿತ ಸಭೆಯಲ್ಲಿ ಮಾತನಾಡಿದರು.
ಪಾಲಿಕೆ ವ್ಯಾಪ್ತಿಯಲ್ಲಿ ರೋಗ ಪತ್ತೆಯಾದ ಪ್ರದೇಶದಲ್ಲಿ ಇರುವ ಪ್ರತಿ ಮನೆಗಳಿಗೆ ಹಾಗೂ ಕಟ್ಟಡಗಳಲ್ಲಿ ಲಾರ್ವ ಉತ್ಪತ್ತಿಯಾಗುವ ಪ್ರದೇಶವನ್ನು ಗುರುತಿಸಿ ಪ್ರತಿನಿತ್ಯವೂ ರಾಸಾಯನಿಕ ಸಿಂಪಡನೆ ಮಾಡಬೇಕು ಹಾಗೂ ಸುತ್ತಮುತ್ತಲು ಫಾಗಿಂಗ್ ಅನ್ನು ಪಾಲಿಕೆಯ ಎಲೆಕ್ಟ್ರಾನಿಕ್ ಆಟೋ ಮೂಲಕ ಸಿಂಪಡಿಸಬೇಕು ಎಂದು ಸೂಚಿಸಿದರು.ಡೆಂಗ್ಯೂ ರೋಗವು ಪತ್ತೆಯಾದ ದಿನವೇ ರೋಗಿಯ ಮನೆಯ ಸುತ್ತಮುತ್ತ ಲಾರ್ವ ಉತ್ಪತ್ತಿಯನ್ನು ಗುರುತಿಸಿ ಸಿಂಪಡನೆ ನಡೆಸಬೇಕು. ಪಾಲಿಕೆಯ ವ್ಯಾಪ್ತಿಯಲ್ಲಿ ಸಿಂಪಡನೆಯನ್ನು ಕೈಗೊಳ್ಳುವ ದಿನದ ಬಗ್ಗೆ ವೇಳಾಪಟ್ಟಿಯನ್ನು ತಯಾರಿಸಿ ಆಯಾ ಪ್ರದೇಶದ ಜನರಿಗೆ ಮಾಹಿತಿ ಒದಗಿಸಬೇಕು ಎಂದರು.
ಜನರು ಡೆಂಗೀ ರೋಗದ ಬಗ್ಗೆ ತಾತ್ಸಾರ ಮನೋಭಾವದಿಂದ, ರೋಗ ನಿರ್ಮೂಲನೆಯ ಬಗ್ಗೆ ಯೋಚಿಸುತ್ತಿಲ್ಲ. ಜನರಿಗೆ ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸಬೇಕು. ಡೆಂಗ್ಯೂ ರೋಗದಿಂದ ಉಂಟಾಗುವ ಗಂಭೀರ ಪರಿಣಾಮಗಳ ಬಗ್ಗೆ ಜನರು ತಿಳಿದುಕೊಳ್ಳಬೇಕು ಎಂದರು.
ಇನ್ನು ಮುಂದೆ ಲಾರ್ವಗಳು ಕಂಡು ಬರುವ ವಾಸ್ತವ್ಯದ ಕಟ್ಟಡ ರೂ. 500, ವಾಣಿಜ್ಯ ಕಟ್ಟಡ ರೂ. 500, ನಿರ್ಮಾಣ ಹಂತದಲ್ಲಿರುವ ಕಟ್ಟಡ ರೂ. 15,000, ಬಹುಮಹಡಿ ವಾಸ್ತವ್ಯದ ಕಟ್ಟಡ ರೂ. 5,000 ಗಳಂತೆ ಕಟ್ಟಡಗಳ ಮಾಲೀಕರ ಮೇಲೆ ಕ್ರಮ ತೆಗೆದುಕೊಂಡು ದಂಡ ವಿಧಿಸಲಾಗುತ್ತದೆ ಎಂದು ಹೇಳಿದರು.
ಜಿಲ್ಲಾ ರೋಗವಾಹಕ ಮತ್ತು ಅಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ನವೀನ್‍ಚಂದ್ರ ಕುಲಾಲ್ ಅವರು ಡೆಂಗ್ಯೂ ರೋಗದ ನಿರ್ಮೂಲನೆಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ರಾಜೇಶ್ ಬಿ.ವಿ, ವಿಶ್ವ ಆರೋಗ್ಯ ಸಂಸ್ಥೆಯ ಸರ್ವಲೆನ್ಸ್ ಮೆಡಿಕಲ್ ಆಫೀಸರ್ ಡಾ. ಹರ್ಷಿತ್, ತಾಲೂಕು ಆರೋಗ್ಯ ಅಧಿಕಾರಿ ಡಾ. ಸುಜಯ್, ಮಂಗಳೂರು ಮಹಾನಗರ ಆರೋಗ್ಯ ಅಧಿಕಾರಿ ಡಾ. ಮಂಜಯ್ಯ ಶೆಟ್ಟಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
Leave a Comment