ಕೂಳೂರು ಹಳೆ ಸೇತುವೆ ದುರಸ್ತಿ, ಆ.19 ರಿಂದ ಘನ ವಾಹನ ಸಂಚಾರ ನಿರ್ಬಂಧ – ದ.ಕ‌. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್

20240816 103243
Spread the love

ನ್ಯೂಸ್ ಆ್ಯರೋ : ಮಂಗಳೂರಿನ ಕೂಳೂರು ಹಳೆ ಸೇತುವೆ ದುರಸ್ತಿ ಕಾಮಗಾರಿಗೆ ಅನುಕೂಲ ಕಲ್ಪಿಸಲು ಘನ ವಾಹನಗಳು ಕೆಲ ದಿನ ನಿಗದಿತ ಸಮಯದಲ್ಲಿ ಮಾತ್ರ ಸಂಚರಿಸುವಂತೆ ಜಿಲ್ಲಾ ಆಡಳಿತ ನಿರ್ಬಂಧ ಹೇರಿದೆ.

ಇದೇ 19, 20, 21ರಂದು ಮೂರು ದಿನ ಘನ ವಾಹನಗಳು (ಪ್ರಯಾಣಿಕರ ಬಸ್ಸು ಹೊರತುಪಡಿಸಿ) ರಾತ್ರಿ 10ರಿಂದ ಬೆಳಿಗ್ಗೆ 6ರ ವರೆಗೆ ಹಾಗೂ ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರ ವರೆಗಿನ ಅವಧಿಯಲ್ಲಿ ಮಾತ್ರ ಈ ಸೇತುವೆಯಲ್ಲಿ ಸಂಚರಿಸಲು ಅನುಮತಿಸಲಾಗುವುದು.

ಈ ದಿನಗಳಂದು ಬೆಳಿಗ್ಗೆ 6ರಿಂದ 11ರ ವರೆಗೆ ಹಾಗೂ ಮಧ್ಯಾಹ್ನ 3ರಿಂದ ರಾತ್ರಿ 10ರ ಅವಧಿಯಲ್ಲಿ ಉಡುಪಿ ಕಡೆಯಿಂದ ಕೇರಳಕ್ಕೆ ಸಂಚರಿಸುವ ಘನ ವಾಹನಗಳು ಮೂಲ್ಕಿ-ಸುರತ್ಕಲ್‌-ಎಂಆರ್‌ಪಿಎಲ್‌-ಬಜಪೆ-ಕೆಪಿಟಿ-ನಂತೂರು ಮಾರ್ಗವಾಗಿ ಹಾಗೂ ಉಡುಪಿ ಕಡೆಯಿಂದ ಬೆಂಗಳೂರು ಸಂಚರಿಸುವ ವಾಹನಗಳು ಉಡುಪಿ-ಮೂಲ್ಕಿ-ಮೂಡುಬಿದಿರೆ-ಬಂಟ್ವಾಳ ಮಾರ್ಗವಾಗಿ ಸಂಚರಿಸಬೇಕು.

ಈ ಮಾರ್ಪಾಡು ಅಗತ್ಯವಿದ್ದರೆ ಆಗಸ್ಟ್‌ 25ರಿಂದ ಸೆಪ್ಟೆಂಬರ್‌ 25ರ ವರೆಗೆ ವಿಸ್ತರಿಸಲಾಗುವುದು. ಸೆಪ್ಟೆಂಬರ್‌ 25ರ ಒಳಗಾಗಿ ಸೇತುವೆಯ ಕೆಲಸವನ್ನು ಪೂರ್ಣಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ತಿಳಿಸಿದ್ದಾರೆ.

ಕೂಳೂರು ಸೇತುವೆಯ ಸಾಮರ್ಥ್ಯ ಹಾಗೂ ಸ್ಥಿರತೆ ಬಗ್ಗೆ ಆ. 20ರ ಒಳಗೆ ವಿವರವಾದ ವರದಿ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನಿರ್ದೇಶಿಸಲಾಗಿದೆ. ಇದಲ್ಲದೆ ಹೊಸ ಸೇತುವೆಯ ಕಾಮಗಾರಿಯನ್ನು ತ್ವರಿತಗೊಳಿಸಿ ನಿರ್ದಿಷ್ಟ ಅವಧಿಯಲ್ಲಿ ಪೂರ್ಣಗೊಳಿಸಲು ನಿರ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Comment

Leave a Reply

Your email address will not be published. Required fields are marked *