Mangalore : ಸಮವಸ್ತ್ರ ಧರಿಸಿದ್ದರೂ ರಸ್ತೆಯಲ್ಲಿ ಉಂಟಾಗಿದ್ದ ಹೊಂಡ ಮುಚ್ಚಿದ ಪೋಲಿಸ್ ಸಬ್ ಇನ್ಸ್‌ಪೆಕ್ಟರ್ – ನಿಸ್ವಾರ್ಥ, ಸಾಮಾಜಿಕ ಕಳಕಳಿಯ ಅಧಿಕಾರಿಯ ಕಾರ್ಯಕ್ಕೆ ಶ್ಲಾಘನೆಗಳ ಮಹಾಪೂರ
ನ್ಯೂಸ್ ಆ್ಯರೋ : ಟ್ರಾಫಿಕ್ ಪೋಲಿಸರೆಂದರೆ ನಾವು ರಸ್ತೆಯಲ್ಲಿ ವಾಹನ ಚಲಾಯಿಸುವ ವೇಳೆ ಎಲ್ಲೋ ಮರೆಯಲ್ಲಿ ನಿಂತು ಫೈನ್ ನೆಪದಲ್ಲಿ ವಸೂಲಿ ಮಾಡೋದು, ನೋ ಪಾರ್ಕಿಂಗ್ ಏರಿಯಾದಲ್ಲಿ ಹಾಕಿರೋ ಗಾಡಿಗೆ ಫೈನ್ ಹಾಕೋರು ಅಂತ ಅಷ್ಟೇ ಅಂದುಕೊಂಡಿರ್ತೇವೆ.. ಆದರೆ ಅವರಲ್ಲೂ ಕೆಲವರು ನಿಯತ್ತಲ್ಲಿ ಇರ್ತಾರೆ ಅನ್ನೋದು ನಮಗೂ ಒಮ್ಮೊಮ್ಮೆ ಅನಿಸುತ್ತದೆ. ಯಾಕೆಂದರೆ ಅಲ್ಲೊಬ್ಬ ಇಲ್ಲೊಬ್ಬ ಈಶ್ವರ ಸ್ವಾಮಿ ಅವರಂಥ ಪೋಲಿಸ್ ಅಧಿಕಾರಿಗಳು ಇನ್ನೂ ಪೋಲಿಸ್ ಸೇವೆಯ ಜೊತೆ ಸಾಮಾಜಿಕ ಕಳಕಳಿಯನ್ನೂ ತೋರುತ್ತಾರೆ.
ಯಾರಿದು ಈಶ್ವರ ಸ್ವಾಮಿ?
ಮಂಗಳೂರು ನಗರ ಪೂರ್ವ ಪೋಲಿಸ್ ಠಾಣಾ ಸಬ್ ಇನ್ಸ್‌ಪೆಕ್ಟರ್ ಮೂಲತಃ ಮೈಸೂರಿನವರು. 32 ವರ್ಷಗಳಿಂದ ಮಂಗಳೂರಿನಲ್ಲೇ ಸರ್ಕಾರಿ ಸೇವೆಯಲ್ಲಿದ್ದು, ನಿವೃತ್ತಿಯ ಅಂಚಿನಲ್ಲಿದ್ದಾರೆ. ಕದ್ರಿ, ಬಂದರು, ಪಣಂಬೂರು ಸೇರಿದಂತೆ ಮಂಗಳೂರು ನಗರ ಪಶ್ಚಿಮ ಪೋಲಿಸ್ ಠಾಣೆಯಲ್ಲೂ ಕರ್ತವ್ಯ ನಿರ್ವಹಿಸಿದವರು. ಇಂದು ಅವರು ಮಾಡಿರುವ ಕರ್ತವ್ಯಕ್ಕೂ ಮಿಗಿಲಾದ ಕಾರ್ಯ ಅವರನ್ನು ಗುರುತಿಸುವಂತೆ ಮಾಡಿದೆ.
ಹೆದ್ದಾರಿಯ ಗುಂಡಿ ಮುಚ್ಚಿದ ನಿಸ್ವಾರ್ಥಿ..!!
ಮಂಗಳೂರಿನ ಕೆಪಿಟಿ ಬಳಿಯ ರಸ್ತೆಯಲ್ಲಿ ಹಲವು ದಿನಗಳಿಂದ ಡಾಂಬಾರು ಕಿತ್ತು ಬಂದಿದ್ದರಿಂದ ವಾಹನ ಸವಾರರು, ಪಾದಚಾರಿಗಳು ಸಮಸ್ಯೆ ಅನುಭವಿಸುತ್ತಿದ್ದರು. ವೇಗವಾಗಿ ಬಂದ ಬೈಕ್ ಸವಾರರಂತೂ ಗುಂಡಿಗಳನ್ನು ಕಂಡೊಡನೇ ಬ್ರೇಕ್ ಹಾಕುವ ಧಾವಂತದಲ್ಲಿ ಬ್ಯಾಲೆನ್ಸ್ ಗಾಗಿ ಪರದಾಡುವುದು ನಿತ್ಯ ನಿರಂತರವಾಗಿತ್ತು. ಇದನ್ನೆಲ್ಲ ನೋಡುತ್ತಿದ್ದ ಈಶ್ವರ ಸ್ವಾಮಿಯವರಿಗೆ ಏನನಿಸಿತೋ ಏನೋ… ಕೆಲವೊಬ್ಬರ ನೆರವಿನ ಜೊತೆಗೆ ತಾನೂ ದುಡ್ಡು ಒಟ್ಟುಗೂಡಿಸಿ ಗುಂಡಿ ಮುಚ್ಚಲು ಬೇಕಾದ ಸಾಮಾಗ್ರಿಗಳನ್ನು ಸಂಗ್ರಹಿಸಿದ್ದಲ್ಲದೇ ತಾವೇ ಸಲಾಕೆ ಹಿಡಿದು ಗುಂಡಿ ಮುಚ್ಚಲು ನಿಂತೇ ಬಿಟ್ಟರು.
ಕೆಪಿಟಿ ಬಳಿ ಉಂಟಾಗಿರುವ ರಸ್ತೆಯ ಅಸ್ತವ್ಯಸ್ತತೆ ಬಗ್ಗೆ ಚಿತ್ರಿಸಲು ಮಾಧ್ಯಮ ಸಂಸ್ಥೆಯೊಂದರ ವರದಿಗಾರ ಸಂದೇಶ್ ಅವರು ಅಲ್ಲಿಗೆ ಬಂದಿದ್ದ ವೇಳೆ ಬೆಳಿಗ್ಗೆ ಕಂಡ ಹೊಂಡ ಮುಚ್ಚಿಹೋಗಿತ್ತು. ಅಚ್ಚರಿಗೊಂಡ ಅವರು ಈ ಬಗ್ಗೆ ವಿಚಾರಿಸಿದಾಗ ಈಶ್ವರ ಸ್ವಾಮಿ ಅವರೇ ಖುದ್ದು ಮುಂದೆ ನಿಂತು ಹೊಂಡ ಮುಚ್ಚಿದ್ದರ ಮಾಹಿತಿ ಹೊರಬಿದ್ದಿದೆ. ಟ್ರಾಫಿಕ್ ಪೋಲಿಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಆದರೂ ಯಾವುದೇ ಹಮ್ಮಿಲ್ಲದೇ ತಾವೇ ಮುಂದೆ ನಿಂತು ತಾತ್ಕಾಲಿಕ ರಸ್ತೆ ರಿಪೇರಿಗೊಳಿಸಿದ ಈಶ್ವರ್ ಸ್ವಾಮಿ ಅವರಂಥ ದಕ್ಷ ಅಧಿಕಾರಿಗಳು ಮಂಗಳೂರಿಗೆ ಬೇಕಿದೆ.
ಲೋಕೋಪಯೋಗಿ ಇಲಾಖೆಯ ಕಾರ್ಯವನ್ನು ಇನ್ಯಾರೋ ಮಾಡೋದು ಅಷ್ಟು ಸಮಂಜಸವೂ ಅಲ್ಲ, ಅದರಲ್ಲೂ ಪೋಲಿಸ್ ಅಧಿಕಾರಿಯೇ ರಸ್ತೆಯ ಹೊಂಡ ಮುಚ್ಚುವುದನ್ನು ನೋಡಲೂ ಸರಿಯೂ ಅನಿಸಲಿಕ್ಕಿಲ್ಲ. ಅದರಲ್ಲೂ ಈ ಮಳೆಗಾಲದಲ್ಲಂತೂ ರಸ್ತೆಯ ಹೊಂಡಗಳಲ್ಲಿ ತುಂಬುವ ಕೆಸರು ನೀರು ಮೈಮೇಲೆ ಹಾರಿದರಂತೂ ನಾವು ಎಂತಹ ಕೆಲಸಕ್ಕೆ ಹೊರಟಿದ್ದರೂ ಮರಳಿ ಮನೆಗೆ ಸೇರಬೇಕಾದುದು ಅನಿವಾರ್ಯವೇ ಆಗುತ್ತದೆ. ಅಂತಹ ವಿಚಾರಗಳು ಅಲ್ಲದೇ ಹೊಂಡಗಳಿಂದ ಉಂಟಾಗುವ ಸಂಭಾವ್ಯ ಅಪಾಯಗಳನ್ನು ತಪ್ಪಿಸಲು ಈಶ್ವರ ಸ್ವಾಮಿಯವರು ಮಾಡಿದ ಕಾರ್ಯ ಶ್ಲಾಘನೀಯ ಎಂದು ಸ್ಥಳೀಯರೇ ಹೇಳಿಕೊಂಡಿದ್ದಾರೆ.
ಇದಕ್ಕೂ ಮೊದಲು ಈಶ್ವರ ಸ್ವಾಮಿಯವರು ನಂತೂರಿನಲ್ಲೂ ಇದೇ ರೀತಿಯ ಕಾರ್ಯ ನಿರ್ವಹಿಸಿದ್ದರು ಎಂಬ ಮಾಹಿತಿ ಇದೀಗ ಬೆಳಕಿಗೆ ಬಂದಿದೆ. ಆದರೆ ಇದರ ಬಗ್ಗೆ ಪ್ರಚಾರ ಬಿಡಿ, ಕನಿಷ್ಕ ಪಕ್ಷ ಗುರುತಿಸುವ ಕಾರ್ಯವೂ ಆಗಿಲ್ಲ. ಆದರೂ ಈಶ್ವರ ಸ್ವಾಮಿಯವರ ಸಾಮಾಜಿಕ ಕಾಳಜಿಯ ಕಾರ್ಯ ನಿಂತಿಲ್ಲ. ಇಂತಹ ವಿನಯಂತ ಅಧಿಕಾರಿಯನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ನಾವೆಲ್ಲರೂ ಸೇರಿ ಮಾಡಬೇಕಿದೆ.. ಕಮೀಷನರ್ ಸಾಹೇಬರು ಈ ಕಾರ್ಯವನ್ನು ಗುರುತಿಸುತ್ತಾರೋ ಕಾದು ನೋಡಬೇಕಿದೆ.
ಈಶ್ವರ ಸ್ವಾಮಿಯವರ ಬಗ್ಗೆ…
ಸಬ್ ಇನ್ಸ್‌ಪೆಕ್ಟರ್ ಈಶ್ವರ ಸ್ವಾಮಿಯವರದು ತುಂಬಿದ ಸಂಸಾರ. ಪತ್ನಿ ರೋಹಿಣಿ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರೆ ಅವರ ಪುತ್ರಿ ವಿನುತಾ ಎಂಎಸ್ಸಿ ಮುಗಿಸಿದ್ದು ಪಿಹೆಚ್‌ಡಿ ಮಾಡುತ್ತಿದ್ದಾರೆ. ಇನ್ನೊಬ್ಬ ಪುತ್ರಿ MBA ಮುಗಿಸಿದ್ದು, ಕೊನೆಯ ಪುತ್ರ ವಿಶಾಲ್ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವರ ತುಂಬು ಸಂಸಾರದ ಭವಿಷ್ಯಕ್ಕೆ ನಾವೊಂದು ಶುಭ ಹಾರೈಸೋಣ… ಅಲ್ಲವೇ…?
Leave a Comment