ಮಹಾ ಕುಂಭ ಏಕತೆಯ ಮಹಾ ಯಜ್ಞ; ಪ್ರಯಾಗರಾಜ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ
ನ್ಯೂಸ್ ಆ್ಯರೋ: ಮುಂದಿನ ವರ್ಷ ಉತ್ತರಪ್ರದೇಶದಲ್ಲಿ ನಡೆಯಲಿರುವ ಮಹಾಕುಂಭ ಮೇಳವನ್ನು ಪ್ರಧಾನಿ ಮೋದಿ ಅವರು ದೇಶದ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯನ್ನು ಹೊಸ ಔನತ್ಯಕ್ಕೇರಿಸುವ ”ಏಕತೆಯ ಮಹಾಯಜ್ಞ” ಎಂದು ಬಣ್ಣಿಸಿದ್ದಾರೆ.
ಪ್ರಯಾಗ್‌ರಾಜ್‌ನಲ್ಲಿ ಶುಕ್ರವಾರ ಕುಂಭಮೇಳ ನಿಮಿತ್ತ 5500 ಕೋಟಿ ರು. ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮಹಾಕುಂಭ ಮೇಳದಲ್ಲಿ ಜಾತಿ ಮತ್ತು ಜನಾಂಗವೆಂಬ ಭೇದಭಾವ ಮಾಯವಾಗುತ್ತದೆ. ಹೊಸ ನಗರ ಮತ್ತು ಹೊಸ ಇತಿಹಾಸ”ವನ್ನು ಪ್ರಯಾಗ್‌ರಾಜ್‌ನ ಪವಿತ್ರ ಭೂಮಿಯಲ್ಲಿ ರೂಪಿಸುತ್ತಿದೆ. ಈ ಕುಂಭಮೇಳವು ಏಕತೆಯ ಮಹಾಯಜ್ಞ.ಈ ಮಹಾ ಕುಂಭ ಸಾವಿರಾರು ವರ್ಷಗಳಿಂದ ನಡೆಯುತ್ತಿರುವ ಭಾರತದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪ್ರಯಾಣವನ್ನು ಪ್ರತಿನಿಧಿಸುತ್ತದೆ. ಇದು ಕೇವಲ ಬಾಹ್ಯ ಆಚರಣೆಗಳ ಬಗ್ಗೆ ಅಲ್ಲ ಆಂತರಿಕ ಪ್ರಜ್ಞೆಯನ್ನು ಕೂಡ ಜಾಗೃತಗೊಳಿಸುತ್ತದೆ ಎಂದು ಬಣ್ಣಿಸಿದರು.
ಮುಂದಿನ ವರ್ಷ ಜ.13ರಿಂದ ಫೆ.26ರ ವರೆಗೆ ಮಹಾ ಕುಂಭಮೇಳ ನಡೆಯಲಿದೆ. 12 ವರ್ಷಗಳಿಗೊಮ್ಮೆ ನಡೆಯುವ ಈ ಕುಂಭ ಮೇಳ ವಿಶ್ವದ ಅತಿದೊಡ್ಡ ಧಾರ್ಮಿಕ ಜಾತ್ರೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಇದೇ ವೇಳೆ ಮಹಾಕುಂಭವನ್ನು ಯಶಸ್ವಿಗೊಳಿಸುವಲ್ಲಿ ಸ್ವಚ್ಛತೆಯ ಪ್ರಮುಖ ಪಾತ್ರವನ್ನು ಗುರುತಿಸಿದ ಪ್ರಧಾನಮಂತ್ರಿ ಮೋದಿ, ನೈರ್ಮಲ್ಯ ಕಾರ್ಯಕರ್ತರ ಶ್ರಮವನ್ನು ಶ್ಲಾಘಿಸಿದರು. ಪ್ರಯಾಗ್‌ರಾಜ್‌ನಲ್ಲಿ ನೈರ್ಮಲ್ಯ ಮತ್ತು ತ್ಯಾಜ್ಯ ನಿರ್ವಹಣೆಯನ್ನು ನಿರ್ವಹಿಸುವ 15,000ಕ್ಕೂ ಹೆಚ್ಚು ನೈರ್ಮಲ್ಯ ಕಾರ್ಯಕರ್ತರನ್ನು “ಗಂಗಾದೂತರು”, “ಗಂಗಾ ಪ್ರಹಾರಿಗಳು” ಮತ್ತು “ಗಂಗಾ ಮಿತ್ರರು” ಎಂದು ಕರೆಯಲಾಗುತ್ತದೆ.
ಮಹಾಕುಂಭದ ಪಾವಿತ್ರ್ಯತೆಯನ್ನು ಮತ್ತಷ್ಟು ಹೆಚ್ಚಿಸುವ ಮೂಲಕ ಶುದ್ಧ ಮತ್ತು ಮಾಲಿನ್ಯ ಮುಕ್ತ ನದಿಗಳನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಗಳನ್ನು ವೇಗಗೊಳಿಸಿರುವ ನಮಾಮಿ ಗಂಗೆ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಿದರು. ಅವರ ಸಮರ್ಪಣೆಗಾಗಿ ನೈರ್ಮಲ್ಯ ಕಾರ್ಯಕರ್ತರಿಗೆ ಮೋದಿ ಕೃತಜ್ಞತೆ ಸಲ್ಲಿಸಿದರು.
Leave a Comment