ಬಾಹ್ಯಾಕಾಶದಲ್ಲೇ ಲಾಕ್ ಆದ ಸುನೀತಾ ವಿಲಿಯಮ್ಸ್, ವಿಲ್ಮೋರ್ ಬಗ್ಗೆ ಹೊಸ ಅಪ್ಡೇಟ್ ಕೊಟ್ಟ ನಾಸಾ – ಸ್ಪೇಸ್ ಎಕ್ಸ್ ಗೆ ಶರಣಾಗುತ್ತಾ ಬೋಯಿಂಗ್ ಕಂಪನಿ..!?
ನ್ಯೂಸ್ ಆ್ಯರೋ : ಕೇವಲ ಎಂಟು ದಿನಗಳಿಗಾಗಿ ಬೋಯಿಂಗ್ ಸ್ಟಾರ್‌ಲೈನರ್‌ನಲ್ಲಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಿದ ನಾಸಾ ಗಗನಯಾತ್ರಿಗಳಾದ ಬ್ಯಾರಿ ವಿಲ್ಮೋರ್ ಹಾಗೂ ಸುನೀತಾ ವಿಲಿಯಮ್ಸ್ ಸದ್ಯ ಅಲ್ಲೇ ಲಾಕ್ ಆಗಿದ್ದು, ಇನ್ನೂ ಏಳು ತಿಂಗಳ ಬಳಿಕ ಭೂಮಿಗೆ ವಾಪಾಸಾಗಲಿದ್ದಾರೆ ಎಂದು ನಾಸಾ ತಿಳಿಸಿದೆ.
ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅವರನ್ನು ಭೂಮಿಗೆ ಕರೆತರುವ ಕುರಿತು ಸ್ಪೇಸ್‌ಎಕ್ಸ್ ಜೊತೆ ನಾಸಾ ಚರ್ಚೆ ನಡೆಸುತ್ತಿದ್ದು,ಒಂದು ವೇಳೆ, ಬೋಯಿಂಗ್‌ನ ಸ್ಟಾರ್‌ಲೈನರ್ ಗಗನನೌಕೆ ಸುರಕ್ಷಿತವಲ್ಲ ಎಂದಾದಲ್ಲಿ, ಸ್ಪೇಸ್‌ಎಕ್ಸ್‌ನ ‘ಡ್ರ್ಯಾಗನ್’ ಗಗನನೌಕೆಯಲ್ಲಿ ಈ ಇಬ್ಬರು ಗಗನಯಾತ್ರಿಗಳನ್ನು ಮುಂದಿನ ವರ್ಷ ಫೆಬ್ರುವರಿ ವೇಳೆಗೆ ಮರಳಿ ಭೂಮಿಗೆ ಕರೆತರುವ ಯೋಜನೆ ರೂಪಿಸಲಾಗುತ್ತಿದೆ ಎಂದು ನಾಸಾ ತಿಳಿಸಿದೆ.
ನಿಗದಿತ ಯೋಜನೆಯಂತೆ, ಎಂಟು ದಿನಗಳ ಕಾಲ ಇವರು ಬಾಹ್ಯಾಕಾಶ ನಿಲ್ದಾಣದಲ್ಲಿ ಉಳಿದುಕೊಳ್ಳುವ ಯೋಜನೆ ಹಾಕಲಾಗಿತ್ತು. ಆದರೆ, ಸ್ಟಾರ್‌ಲೈನರ್‌ನ ಪ್ರೊಪೆಲ್ಷನ್ ಸಿಸ್ಟಮ್‌ನಲ್ಲಿ ಕಾಣಿಸಿಕೊಂಡ ತೊಂದರೆ ಕಾರಣ ಅವರು ಭೂಮಿಗೆ ಮರಳುವುದನ್ನು ಮುಂದೂಡಲಾಗಿದೆ.
ಇನ್ನೊಂದೆಡೆ, ಸ್ಟಾರ್‌ಲೈನರ್ ಈ ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಭೂಮಿಗೆ ಕರೆದುಕೊಂಡು ಬರುವ ಸಾಮರ್ಥ್ಯ ಹೊಂದಿದೆಯೇ ಎಂಬ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ. ಈ ಕಾರಣಕ್ಕಾಗಿಯೇ ಸ್ಪೇಸ್‌ಎಕ್ಸ್ ಸಂಸ್ಥೆಯ ‘ಡ್ರ್ಯಾಗನ್’ ಗಗನನೌಕೆ ಮೂಲಕ ಇವರನ್ನು ಭೂಮಿಗೆ ಕರೆತರುವ ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ.
ಸ್ಪೇಸ್ ಎಕ್ಸ್ ಗೆ ಹೆಚ್ಚಾಗಲಿದ್ಯಾ ವ್ಯಾಲ್ಯೂ?
ಬೋಯಿಂಗ್ ತನ್ನ ನೌಕೆಯ ಮೂಲಕ ಬಾಹ್ಯಾಕಾಶಕ್ಕೆ ಕಳಿಸಿದ್ದ ಇಬ್ಬರು ಗಗನಯಾತ್ರಿಗಳನ್ನು ಪ್ರತಿಸ್ಪರ್ಧಿಯಾಗಿರುವ ಸ್ಪೇಸ್ ಎಕ್ಸ್‌ನ ಕ್ರ್ಯೂ ಡ್ರ್ಯಾಗನ್ ನೌಕೆ ಬಳಸಿಕೊಂಡು ಭೂಮಿಗೆ ವಾಪಾಸ್ ಕರೆತಂದಲ್ಲಿ ಇದು ಏರೋಸ್ಪೇಸ್ ದೈತ್ಯ ಎಂದು ಹೇಳಿಕೊಳ್ಳುವ ಬೋಯಿಂಗ್ ಕಂಪನಿಯ ಘನತೆಗೆ ದೊಡ್ಡ ಪೆಟ್ಟು ಬೀಳಲಿದೆ. ಆ ನಿಟ್ಟಿನಲ್ಲಿಯೂ ಕೂಡ ನಾಸಾ ಹಾಗೂ ಬೋಯಿಂಗ್ ಯೋಚನೆ ಮಾಡುತ್ತಿದೆ.
ಹಲವಾರು ವರ್ಷಗಳಿಂದ ಬೋಯಿಂಗ್ ಹಾಗೂ ಸ್ಪೇಸ್ ಎಕ್ಸ್ ನಡುವೆ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ ಈ ವಿಚಾರದ ಮೂಲಕ ಸ್ಪೇಸ್ ಎಕ್ಸ್ ದೊಡ್ಡ ಮೇಲುಗೈ ಸಾಧಿಸಿದಂತಾಗುತ್ತದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
Leave a Comment