Mangalore : ಕಾರಣಿಕ ಶಕ್ತಿ ಕೊರಗಜ್ಜನ ಮೊರೆ ಹೋದ ಶಾಸಕ ವಿನಯ್ ಕುಲಕರ್ಣಿ – ಇಂದು ಸಂಜೆ ಕೊರಗಜ್ಜನ ಮೂಲಕ್ಷೇತ್ರದಲ್ಲಿ ಹರಕೆ ಕೋಲ
ನ್ಯೂಸ್ ಆ್ಯರೋ : ಮಾಜಿ ಸಚಿವ, ಧಾರವಾಡ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಹಾಲಿ ಶಾಸಕ ವಿನಯ್ ಕುಲಕರ್ಣಿ ಅವರು ತಮ್ಮ ಇಷ್ಟಾರ್ಥ ಈಡೇರಿಕೆಗಾಗಿ ತುಳುನಾಡಿನ ಕಾರಣಿಕ ಶಕ್ತಿ ಕೊರಗಜ್ಜನ ಮೊರೆ ಹೋಗಿದ್ದಾರೆ. ಇಂದು ಸಂಜೆ ಉಳ್ಳಾಲ ತಾಲೂಕಿನ ತೊಕ್ಕೊಟ್ಟು ಜಂಕ್ಷನ್ ನ ಕೊರಗಜ್ಜನ ಕಟ್ಟೆಯಲ್ಲಿ ಕೋಲ ಸೇವೆ ನಡೆಸಲಿದ್ದಾರೆ.
ತೊಕ್ಕೊಟ್ಟು ಹಳೇ ಚೆಕ್ ಪೋಸ್ಟ್ ಬಳಿಯ ಗ್ರ್ಯಾಂಡ್ ಸಿಟಿ ವಾಣಿಜ್ಯ ಸಂಕೀರ್ಣದ ಮುಂಭಾಗದ ಸಾರ್ವಜನಿಕ ಕೊರಗಜ್ಜನ ಕಟ್ಟೆಯಲ್ಲಿ ಕೋಲ ಸೇವೆ ನಡೆಯಲಿದ್ದು ಮಳೆಯಿಂದಾಗಿ ಪೆಂಡಾಲ್ ಹಾಕಿ ಸಕಲ ಸಿದ್ಧತೆ ನಡೆಸಲಾಗಿದೆ.
ಬಿಜೆಪಿ ಜಿ.ಪಂ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನ್ಯಾಯಾಲಯವು ವಿನಯ್ ಕುಲಕರ್ಣಿ ಅವರನ್ನ ಧಾರವಾಡ ಕ್ಷೇತ್ರ ಪ್ರವೇಶಿಸದಂತೆ ನಿರ್ಬಂಧ ಹೇರಿತ್ತು. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ವಿನಯ್ ಕುಲಕರ್ಣಿ ತನ್ನ ಕ್ಷೇತ್ರಕ್ಕೆ ಭೇಟಿ ನೀಡದೆಯೇ ಬಿಜೆಪಿ ಅಭ್ಯರ್ಥಿ ವಿರುದ್ಧ ಗೆದ್ದು ಬೀಗಿದ್ದರು.
ಧಾರವಾಡ ಗ್ರಾಮಾಂತರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ತನ್ನ ಕ್ಷೇತ್ರಕ್ಕೆ ಪ್ರವೇಶಿಸದೆ ಚುನಾವಣೆ ಗೆದ್ದ ರಾಜ್ಯದ ಮೊದಲ ಅಭ್ಯರ್ಥಿ ಎಂಬ ಹೆಗ್ಗಳಿಕೆ ಗಳಿಸಿದ್ದರು. ವಿನಯ್ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಮತ್ತು ಮಕ್ಕಳೇ ಪ್ರಚಾರದ ನೇತೃತ್ವ ವಹಿಸಿದ್ದರು. 89,333 ಮತಗಳನ್ನು ಪಡೆದಿದ್ದ ವಿನಯ್, ಬಿಜೆಪಿಯ ಹಾಲಿ ಶಾಸಕರಾಗಿದ್ದ ಅಮೃತ್ ದೇಸಾಯಿ ಅವರನ್ನು 18,037 ಮತಗಳ ಅಂತರದಿಂದ ಸೋಲಿಸಿದ್ದರು.
ಶಾಸಕ ವಿನಯ್ ಕುಲಕರ್ಣಿ ಅವರ ವಿರುದ್ಧದ ಕೊಲೆ ಆರೋಪದ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದು ಶಾಸಕನಾದರೂ ಕ್ಷೇತ್ರ ಪ್ರವೇಶಕ್ಕೆ ನಿರ್ಬಂಧ ಮುಂದುವರಿದಿದೆ. ಮುಂದಿನ ತಿಂಗಳು ಇದೇ ವಿಚಾರದಲ್ಲಿ ಕೋರ್ಟ್ ವಿಚಾರಣೆ ಇದೆ ಎನ್ನಲಾಗುತ್ತಿದೆ. ಇದರ ನಡುವೆ, ವಿನಯ ಕುಲಕರ್ಣಿ ಅವರು ತುಳುನಾಡಿನ ಕಾರಣಿಕ ಶಕ್ತಿ ಕೊರಗಜ್ಜನ ಮೊರೆ ಹೋಗಿದ್ದು ಕೋಲ ಸೇವೆ ನಡೆಸುವುದಕ್ಕೆ ಮುಂದಾಗಿದ್ದಾರೆ. ಇಂದು ಸಂಜೆ 6.30 ಗಂಟೆಗೆ ತೊಕ್ಕೊಟ್ಟಿನಲ್ಲಿ ಕೋಲ ಸೇವೆ ಆರಂಭಗೊಳ್ಳಲಿದೆ. ಕೋಲ ಸೇವೆಯಲ್ಲಿ ಖುದ್ದು ವಿನಯ್ ಕುಲಕರ್ಣಿ ಮತ್ತು ಕುಟುಂಬಸ್ಥರು ಭಾಗವಹಿಸಲಿದ್ದಾರೆಂದು ತಿಳಿದುಬಂದಿದೆ
Leave a Comment