ರಣಜಿ ಕಮ್ಬ್ಯಾಕ್ ಪಂದ್ಯದಲ್ಲಿ ಕೊಹ್ಲಿಗೆ ಮುಖಭಂಗ; ಏನಾಯ್ತು ಗೊತ್ತಾ ? ವಿಡಿಯೋ ನೋಡಿ
ನ್ಯೂಸ್ ಆ್ಯರೋ: ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿಯವರ ದೊಡ್ಡ ಇನ್ನಿಂಗ್ಸ್ ಕಣ್ತುಂಬಿಕೊಳ್ಳಬೇಕು ಎಂದು ಅರುಣ್ ಜೇಟ್ಲಿ ಮೈದಾನಕ್ಕೆ ಬಂದಿದ್ದ ಅವರ ಅಭಿಮಾನಿಗಳಿಗೆ ಮತ್ತೆ ನಿರಾಸೆ ಎದುರಾಗಿದೆ.
ಬರೋಬ್ಬರಿ 12 ವರ್ಷಗಳ ಬಳಿಕ ರಣಜಿ ಟ್ರೋಫಿಗೆ ಕಮ್ಬ್ಯಾಕ್ ಮಾಡಿದ್ದ ವಿರಾಟ್ ಕೊಹ್ಲಿ, ರೈಲ್ವೇಸ್ ಎದುರು ತಮ್ಮ ತವರಿನ ಮೈದಾನದಲ್ಲಿ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದ್ದಾರೆ. ಇದರೊಂದಿಗೆ ಕಿಂಗ್ ಕೊಹ್ಲಿಯ ದಯನೀಯ ಬ್ಯಾಟಿಂಗ್ ವೈಫಲ್ಯ ದೇಶಿ ಕ್ರಿಕೆಟ್ನಲ್ಲೂ ಮುಂದುವರೆದಿದೆ.
ತವರಿನಲ್ಲಿ ನಡೆದಿದ್ದ ನ್ಯೂಜಿಲೆಂಡ್ ಎದುರಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನೀರಸ ಪ್ರದರ್ಶನ ತೋರಿದ್ದ ವಿರಾಟ್ ಕೊಹ್ಲಿ, ಇದಾದ ಬಳಿಕ ಆಸ್ಟ್ರೇಲಿಯಾ ಎದುರಿನ ಬಾರ್ಡರ್-ಗವಾಸ್ಕರ್ ಟೆಸ್ಟ್ನಲ್ಲಿಯೂ ಮೊದಲ ಟೆಸ್ಟ್ ಹೊರತುಪಡಿಸಿ ಕೊಹ್ಲಿಯಿಂದ ದೊಡ್ಡ ಇನ್ನಿಂಗ್ಸ್ ಮೂಡಿ ಬಂದಿರಲಿಲ್ಲ.
ಇನ್ನು ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಸಜ್ಜಾಗುತ್ತಿರುವ ವಿರಾಟ್ ಕೊಹ್ಲಿ, 2012ರ ಬಳಿಕ ಮೊದಲ ಬಾರಿಗೆ ರಣಜಿ ಟ್ರೋಫಿ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ. ರೈಲ್ವೇಸ್ ಎದುರಿನ ಪಂದ್ಯದಲ್ಲಿ ಎಂದಿನಂತೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿದ ವಿರಾಟ್ ಕೊಹ್ಲಿ ಆಟವನ್ನು ಕಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಅರುಣ್ ಜೇಟ್ಲಿ ಮೈದಾನಕ್ಕೆ ಧಾವಿಸಿದ್ದರು.
ಡೆಲ್ಲಿ ಹಾಗೂ ರೈಲ್ವೇಸ್ ನಡುವಿನ ರಣಜಿ ಟ್ರೋಫಿ ಪಂದ್ಯದ ಎರಡನೇ ದಿನದಾಟದಲ್ಲಿ ರೈಲ್ವೇಸ್ ವೇಗಿ ಹಿಮಾಂನ್ಶು ಸಂಗ್ವಾನ್ ಎಸೆದ ಇನ್ಸ್ವಿಂಗ್ ದಾಳಿಯನ್ನು ಕೊಹ್ಲಿ ಸರಿಯಾಗಿ ಗ್ರಹಿಸದ ಪರಿಣಾಮ ವಿಕೆಟ್ ಚೆಲ್ಲಾಪಿಲ್ಲಿಯಾಯಿತು. ರಣಜಿ ಟ್ರೋಫಿ ಕಮ್ಬ್ಯಾಕ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ, 15 ಎಸೆತಗಳನ್ನು ಎದುರಿಸಿ ಕೇವಲ 6 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಇನ್ನು ದಶಕದ ಬಳಿಕ ರಣಜಿ ಪಂದ್ಯವನ್ನಾಡಲು ಮೈದಾನಕ್ಕಿಳಿದಿರುವ ವಿರಾಟ್ ಕೊಹ್ಲಿ ಆಟವನ್ನು ಕಣ್ತುಂಬಿಕೊಳ್ಳಲು ಮೊದಲ ದಿನವೇ ಸುಮಾರು 15 ಸಾವಿರಕ್ಕೂ ಅಧಿಕ ಮಂದಿ ಮೈದಾನಕ್ಕೆ ಆಗಮಿಸಿದ್ದರು ಎಂದು ವರದಿಯಾಗಿದೆ.
Leave a Comment