ಬಿಗ್ಬಾಸ್ನಿಂದ ಹೊರಬರಲು ಕಾರಣ ನೀಡಿದ ಸುದೀಪ್; ಫ್ಯಾನ್ಸ್ ಪ್ರಶ್ನೆಗೆ ಕೊನೆಗೂ ಸಿಕ್ಕಿತು ಸ್ಪಷ್ಟ ಉತ್ತರ
ನ್ಯೂಸ್ ಆ್ಯರೋ: ಈವರೆಗೂ ಕಿಚ್ಚ ಸುದೀಪ್ ಅವರು ಸತತ 11 ಸೀಸನ್ಗಳಲ್ಲಿ ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ. 12ನೇ ಸೀಸನ್ಗೆ ಅವರು ನಿರೂಪಣೆ ಮಾಡುವುದಿಲ್ಲ. ಆ ಬಗ್ಗೆ ಸುದೀಪ್ ಈಗಾಗಲೇ ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ. ಆದರೆ ಆ ನಿರ್ಧಾರದ ಹಿಂದಿರುವ ಕಾರಣ ಏನು ಎಂಬುದು ಬಹುತೇಕರಿಗೆ ತಿಳಿದಿಲ್ಲ. ಆ ಕುರಿತು ಸುದೀಪ್ ಅವರು ಈಗ ಸ್ಪಷ್ಟನೆ ನೀಡಿದ್ದಾರೆ. ಸಿನಿಮಾಗಳ ಶೂಟಿಂಗ್ ಮಧ್ಯದಲ್ಲಿ ಬಿಗ್ ಬಾಸ್ ನಿರೂಪಣೆಗೆ ಸಮಯ ಹೊಂದಿಸಿಕೊಳ್ಳುವುದು ತುಂಬ ಕಷ್ಟ. ಆ ಕಾರಣದಿಂದಲೇ ತಾವು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಸುದೀಪ್ ಅವರು ತಿಳಿಸಿದ್ದಾರೆ.
ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಡಿಸೆಂಬರ್ 25ರಂದು ಬಿಡುಗಡೆ ಆಗಲಿದೆ. ಈ ಪ್ರಯುಕ್ತ ಅವರು ಸಂದರ್ಶನ ನೀಡಿದ್ದಾರೆ. ಈ ವೇಳೆ ಬಿಗ್ ಬಾಸ್ ನಿರೂಪಣೆಯ ಬಗ್ಗೆಯೂ ಪ್ರಶ್ನೆ ಎದುರಾಗಿದೆ. ತಾವು ಬಿಗ್ ಬಾಸ್ ನಿರೂಪಣೆಗೆ ವಿದಾಯ ಹೇಳಿದ್ದಕ್ಕೆ ನಿಜವಾದ ಕಾರಣ ಏನು ಎಂಬುದನ್ನು ಸುದೀಪ್ ತಿಳಿಸಿದ್ದಾರೆ.
‘ಸಾಕು, ಎಷ್ಟು ಮಾಡುವುದು? ಎಲ್ಲರನ್ನೂ ರಿಪೇರಿ ಮಾಡುತ್ತಾ ಕುಳಿತುಕೊಳ್ಳಲು ಬಂದಿದ್ದೀನಾ ನಾನು? ಬೇರೆ ಕೆಲಸಗಳು ಇರುತ್ತವೆ. ತುಂಬ ಶ್ರಮ ಬೇಕು. ಅದು ಯಾರಿಗೂ ಅರ್ಥ ಆಗಲ್ಲ. ಕಳೆದ ಸೀಸನ್ ನಡೆಯುವಾಗ ನನ್ನ ಸಿನಿಮಾದ ಶೂಟಿಂಗ್ ಮಹಾಬಲಿಪುರಂನಲ್ಲಿ ನಡೆಯುತ್ತಿತ್ತು. ಚೆನ್ನೈನಿಂದ ಅಲ್ಲಿಗೆ ಹೋಗಲು ಒಂದೂವರೆ ಗಂಟೆ ಬೇಕು. ಬೆಂಗಳೂರಿನಿಂದ ನಾನು ಅಲ್ಲಿಗೆ ಹೋಗಿ, ಅಲ್ಲಿ ಶೂಟಿಂಗ್ ಮಾಡಿ, ಮಧ್ಯರಾತ್ರಿ ಶೂಟಿಂಗ್ ಮುಗಿಸಿ, ಖಾಸಗಿ ವಿಮಾನದಲ್ಲಿ ವಾಪಸ್ ಬೆಂಗಳೂರಿಗೆ ಬಂದು ಬಿಗ್ ಬಾಸ್ ಎಪಿಸೋಡ್ ನೋಡಿ, ವೀಕೆಂಡ್ ಸಂಚಿಕೆ ಶೂಟ್ ಮಾಡಬೇಕು. ಇದರಿಂದ ನನಗೆ ತುಂಬ ಸುಸ್ತಾಗುತ್ತದೆ’ ಎಂದು ಸುದೀಪ್ ಹೇಳಿದ್ದಾರೆ.
‘ನಾವು ಬೆಂಗಳೂರಿನಲ್ಲೇ ಇದ್ದರೆ ಓಕೆ. ಎಲ್ಲೆಲ್ಲೋ ಇದ್ದರೆ ಸಿನಿಮಾ ಶೂಟಿಂಗ್ ಸರಿಯಾಗಿ ಮಾಡೋಕೆ ಆಗಲ್ಲ. ನಾನು ಎಲ್ಲಿಯೇ ಇದ್ದರೂ ಗುರುವಾರ ಶೂಟಿಂಗ್ ಮುಗಿಸಿಕೊಂಡು ಶುಕ್ರವಾರ ಓಡಿಬರಬೇಕು. ಸಾವಿರ ಜನರು ಶೂಟಿಂಗ್ ಮಾಡುತ್ತಾ ಇರುತ್ತೇವೆ. ಆದರೆ ಬಿಗ್ ಬಾಸ್ ಸಲುವಾಗಿ ಶುಕ್ರವಾರ, ಶನಿವಾರ ಬ್ರೇಕ್ ಆಗುತ್ತದೆ. ಸಿನಿಮಾಗಳು ಇಲ್ಲದಿದ್ದಾಗ ಓಕೆ. ಸಿನಿಮಾ ಶೂಟಿಂಗ್ ಇದ್ದರೆ ತಡ ಆಗುತ್ತದೆ. ಇಷ್ಟು ವರ್ಷ ಖುಷಿಯಿಂದಲೇ ಮಾಡಿದ್ದೇನೆ. ಈಗ ಬೇರೆ ಯಾರಾದರೂ ಮಾಡಲಿ’ ಎಂದು ಸುದೀಪ್ ಅವರು ಹೇಳಿದ್ದಾರೆ.
ಸುದೀಪ್ ಬಳಿಕ ಬೇರೆ ಯಾರು ಈ ಶೋ ನಡೆಸಿಕೊಡುತ್ತಾರೆ ಎಂಬ ಪ್ರಶ್ನೆ ಪ್ರೇಕ್ಷಕರಿಗೆ ಇದೆ. ‘ಯಾರು ಬೇಕಾದರೂ ನಡೆಸಿಕೊಡಬಹುದು. ಆದರೆ ನನ್ನ ರೀತಿ ಮಾಡೋಕೆ ಆಗತ್ತೋ ಇಲ್ಲವೋ ಎಂಬುದು ಬೇರೆ ಪ್ರಶ್ನೆ. ಆ ಹೋಲಿಕೆ ಬೇಡ. ಪ್ರತಿಯೊಬ್ಬರಿಗೂ ಅವರದ್ದೇ ಆದ ವ್ಯಕ್ತಿತ್ವ ಇರುತ್ತದೆ. ಅದರಂತೆ ಅವರು ನಡೆಸಿಕೊಡುತ್ತಾರೆ’ ಎಂದು ಸುದೀಪ್ ಹೇಳಿದ್ದಾರೆ.
Leave a Comment