ಉಡುಪಿಯಲ್ಲಿ ನಕ್ಸಲ್ ಎನ್​ಕೌಂಟರ್; ಕಾರ್ಯಾಚರಣೆ ಬಗ್ಗೆ ಗೃಹ ಸಚಿವರು ಹೇಳಿದ್ದಿಷ್ಟು

home-minister
Spread the love

ನ್ಯೂಸ್ ಆ್ಯರೋ: ಉಡುಪಿ ಜಿಲ್ಲೆಯ ಹೆಬ್ರಿ ಸಮೀಪದ ಕಬ್ಬಿನಾಲೆಯಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡನನ್ನು ಎನ್​ಕೌಂಟರ್​​ನಲ್ಲಿ ಹತ್ಯೆ ಮಾಡಿರುವ ಬಗ್ಗೆ ಕರ್ನಾಟಕ ಗೃಹ ಸಚಿವ ಡಾ. ಜಿ ಪರಮೇಶ್ವರ ಮಾಹಿತಿ ನೀಡಿದರು. ಬೆಂಗಳೂರಿನ ಸದಾಶಿವನಗರದಲ್ಲಿ ಮಾತನಾಡಿದ ಅವರು, ವಿಕ್ರಮ್ ಗೌಡ ಎಂಬ ಗ್ರೇಡೆಡ್ ನಕ್ಸಲ್‌ನನ್ನು ನಕ್ಸಲ್ ನಿಗ್ರಹ ಪಡೆ ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ. ಕಳೆದ 20 ವರ್ಷಗಳಿಂದ ಆತನನ್ನು ಪೊಲೀಸರು ಹುಡುಕುತ್ತಿದ್ದರು. ಆತ ತಪ್ಪಿಸಿಕೊಂಡು ಓಡಾಡುತ್ತಿದ್ದ. ಈ ಹಿಂದೆ ನಡೆದ ಅನೇಕ ಎನ್‌ಕೌಂಟರ್​ಗಳಲ್ಲಿ ವಿಕ್ರಂ ಗೌಡ ತಪ್ಪಿಸಿಕೊಂಡಿದ್ದ ಎಂದರು.

ನಿನ್ನೆ ಸಂಜೆ ವಿಕ್ರಂ ಗೌಡ ಎನ್‌ಕೌಂಟರ್ ಆಗಿದೆ. ಆತನ ಚಲನವಲನಗಳನ್ನು ಪೊಲೀಸರು ಗಮನಿಸುತ್ತಿದ್ದರು. ಆತನ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದರು. ಸೋಮವಾರ ರಾತ್ರಿ ಖಚಿತ ಮಾಹಿತಿ‌ ಮೇರೆಗೆ ಕಾರ್ಯಾಚರಣೆ ಮಾಡಿದ್ದಾರೆ. ಆತ ಆತ ಪೊಲೀಸರ ಮೇಲೆ ಗುಂಡಿನ ದಾಳಿ ಮಾಡಿದ್ದ. ಪೊಲೀಸರು ಪ್ರತಿ ದಾಳಿ ನಡೆಸಿದ್ದಾರೆ. ಆತನ ಜತೆಯಲ್ಲಿದ್ದ ಇಬ್ಬರು ಮೂವರು ಓಡಿ ಹೋಗಿದ್ದಾರೆ. ಆ ಭಾಗದಲ್ಲಿ ಕೂಂಬಿಂಗ್ ಮುಂದುವರೆದಿದೆ ಎಂದು ಪರಮೇಶ್ವರ್ ಮಾಹಿತಿ ನೀಡಿದರು.

ನಾವು ರಾಜ್ಯದಲ್ಲಿ ನಕ್ಸಲ್ ಕಾಲ ಮುಗಿಯಿತು ಅಂದುಕೊಂಡಿದ್ದೆವು. ಆದರೆ, ಕಳೆದ ವಾರ ರಾಜು ಮತ್ತು ಲತಾ ಎಂಬ ನಕ್ಸಲರು ಪತ್ತೆ ಆದರು. ನಂತರ ಅವರಿಬ್ಬರೂ ತಪ್ಪಿಸಿಕೊಂಡು ಹೋದರೆಂದು ಕೂಂಬಿಂಗ್ ಆಪರೇಷನ್ ನಡೆಸಲಾಯ್ತು. ಕಳೆದ ಒಂದು ವಾರದಿಂದ ಕೂಂಬಿಂಗ್ ನಡೆಯುತ್ತಿತ್ತು. ಆಗ ಇದ್ದಕಿದ್ದ ಹಾಗೆ ವಿಕ್ರಂ ಗೌಡ ಬರುವ ಮಾಹಿತಿ ಸಿಕ್ಕಿತ್ತು. ಆತನ ಎನ್‌ಕೌಂಟರ್ ಮಾಡುವುದು ಆ ಸಂದರ್ಭದಲ್ಲಿ ಪೊಲೀಸರಿಗೆ ಅನಿವಾರ್ಯವಾಯಿತು ಎಂದು ಅವರು ತಿಳಿಸಿದರು.

ನಕ್ಸಲರನ್ನು ಮುಖ್ಯ ವೇದಿಕೆಗೆ ಕರೆತರುವ ಪ್ರಯತ್ನಗಳು ನಡೆಯುತ್ತಿವೆ. ಹಿಂದೆ ಪಾವಗಡ ಭಾಗದಲ್ಲಿ ನಕ್ಸಲರನ್ನು ಮಾತನಾಡಿ ಮುಖ್ಯವೇದಿಕೆಗೆ ಕರೆತರಲಾಗಿತ್ತು. ಈಗಲೂ ಈ ಪ್ರಯತ್ನ ನಡೆಯುತ್ತಿದೆ. ಶರಣಾಗಲು ಬಯಸುವ ನಕ್ಸಲರಿಗೆ ಸಾಮಾನ್ಯ ಬದುಕು ನಡೆಸಲು ಸರ್ಕಾರ ಅವಕಾಶ ಮಾಡಿಕೊಡಲಿದೆ, ಅದು ಇದ್ದಿದ್ದೇ. ಆದರೆ ಅರಣ್ಯ ಭಾಗದಲ್ಲಿದ್ದು, ಪೊಲೀಸರ ಮೇಲೆ ತಪ್ಪಿಸಿಕೊಂಡು ಹೋಗಲು ಪ್ರಯತ್ನ ಮಾಡಿದರೆ ಈ ಥರ ಘಟನೆ ಸಹಜ ಎಂದು ಪರಮೇಶ್ವರ್ ಹೇಳಿದರು.

Leave a Comment

Leave a Reply

Your email address will not be published. Required fields are marked *

error: Content is protected !!