ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಆರ್ಭಟ; ಬಿಜೆಪಿ-ಜೆಡಿಎಸ್ ಮೈತ್ರಿಗೆ ಆಘಾತ!
ನ್ಯೂಸ್ ಆ್ಯರೋ: ದೇಶದ 14 ರಾಜ್ಯಗಳಲ್ಲಿನ 48 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಕರ್ನಾಟಕದ ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರು ಕ್ಷೇತ್ರಗಳು ಇದರಲ್ಲಿ ಸೇರಿದ್ದು, ಕರ್ನಾಟಕದಲ್ಲಿ ಫಲಿತಾಂಶ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಇನ್ನುಳಿದಂತೆ ಉತ್ತರಪ್ರದೇಶ 9, ರಾಜಸ್ಥಾನ 7, ಪಶ್ಚಿಮ ಬಂಗಾಳ 6, ಅಸ್ಸಾಂ 5, ಬಿಹಾರ 4, ಪಂಜಾಂಬ್ 4, ಕರ್ನಾಟಕ 3, ಕೇರಳ 2, ಮಧ್ಯಪ್ರದೇಶ 2, ಸಿಕ್ಕಿಂ 2 ಹಾಗೂ ಛತ್ತೀಸ್‌ಗಢ, ಗುಜರಾತ್, ಮೇಘಾಲಯ, ಉತ್ತರಾಖಂಡ್ ರಾಜ್ಯಗಳ ತಲಾ ಒಂದು ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಡೆಯುತ್ತಿದೆ.
ಚನ್ನಪಟ್ಟಣದಲ್ಲಿ 14ನೇ ಸುತ್ತಿನ ಮತ ಎಣಿಕಾ ಕಾರ್ಯ ಮುಕ್ತಾಯವಾಗಿದ್ದು, ನಿರಂತರ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಗೆಲುವಿನ ಸನಿಹದತ್ತ ಬಂದಿದ್ದಾರೆ. ಸದ್ಯ ಕಾಂಗ್ರೆಸ್ 84413 ಮತಗಳನ್ನು ಪಡೆದಿದ್ದು, ಜೆಡಿಎಸ್ 60103 ಮತಗಳನ್ನು ಪಡೆದುಕೊಂಡಿದೆ. ಸಿಪಿವೈ 24310 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇನ್ನು ಕೇವಲ 6 ಸುತ್ತುಗಳ ಮಾತ್ರ ಎಣಿಕಾ ಕಾರ್ಯ ಮಾತ್ರ ಬಾಕಿ ಉಳಿದಿದ್ದು, ಈಗಾಗಲೇ 1 ಲಕ್ಷದ 50 ಸಾವಿರ ಮತಗಳ ಎಣಿಕಾ ಕಾರ್ಯ ಪೂರ್ಣಗೊಂಡಿದೆ. 50600 ಮತಗಳ ಎಣಿಕೆ ಬಾಕಿ ಉಳಿದಿದೆ.
ಶಿಗ್ಗಾಂವಿ ಮತ್ತು ಸಂಡೂರಿನಲ್ಲೂ ಕೂಡ ಕಾಂಗ್ರೆಸ್ ಅಭ್ಯರ್ಥಿಗಳೇ ಮುನ್ನಡೆ ಕಾಯ್ದುಕೊಂಡಿದ್ದಾರೆ. ಶಿಗ್ಗಾಂವಿಯಲ್ಲಿ 14ನೇ ಸುತ್ತಿನ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ 83,400 ಮತಗಳನ್ನು ಪಡೆದಿದ್ದು, ಬಿಜೆಪಿ 69,972 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ 13,428 ಮತಗಳ ಅಂತರದಲ್ಲಿ ಮುನ್ನಡೆಯಲ್ಲಿದೆ.
ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲು ಮುಟ್ಟಿದ್ದು, ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಗೆಲುವುನ್ನು ಅಧಿಕೃತವಾಗಿ ಘೋಷಿಸುವ ಮುನ್ನವೇ ಅಭಿಮಾನಿಗಳು ಮತ್ತು ಬೆಂಬಲಿಗರು ಕುಣಿದು ಕುಪ್ಪಳಿಸಿ ಸಂಭ್ರಮ ಮಾಡಿದ್ದಾರೆ. ಸಂಡೂರಿನ ಹಲವು ಬೀದಿಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ ಮಾಡಲಾಗಿದ್ದು, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಸಂತೋಷ್ ಲಾಡ್ ಸಹೋದರ ವಿಶ್ವಾಸ ಲಾಡ್ ಕೂಡ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದಾರೆ.
Leave a Comment