ಮಸೀದಿಯೊಳಗೆ ‘ಜೈ ಶ್ರೀರಾಮ್’ ಘೋಷಣೆ ಕೂಗಬಾರದಾ?; ಕೇಸ್ ರದ್ದು, ಸುಪ್ರೀಂಕೋರ್ಟ್ ಪ್ರಶ್ನೆ
ನ್ಯೂಸ್ ಆ್ಯರೋ: “ಮಸೀದಿಯೊಳಗೆ ಜೈ ಶ್ರೀರಾಮ್ ಘೋಷಣೆ ಕೂಗುವುದು ಅಪರಾಧ ಹೇಗೆ ಆಗುತ್ತದೆ” ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ. ಮಸೀದಿಯೊಳಗೆ ಜೈ ಶ್ರೀರಾಮ್ ಘೋಷಣೆ ಕೂಗಿದ ಇಬ್ಬರು ವ್ಯಕ್ತಿಗಳ ಪ್ರಕರಣ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಘೋಷಣೆ ಕೂಗುವುದು ಹೇಗೆ ಅಪರಾಧವಾಗುತ್ತದೆ ಎಂದು ಪ್ರಶ್ನಿಸಿದ ಘಟನೆ ನಡೆಯಿತು. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಮಸೀದಿಯೊಂದರ ಆವರಣದೊಳಗೆ ನುಗ್ಗಿ ಘೋಷಣೆ ಕೂಗಿದ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಂಕಜ್ ಮಿತ್ತಲ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ವಿಭಾಗೀಯ ಪೀಠ ಘೋಷಣೆ ಕುರಿತು ಪ್ರಶ್ನಿಸಿದರು.
ಏನಿದು ಪ್ರಕರಣ?:
ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲ್ಲೂಕು ಐತ್ತೂರು ಗ್ರಾಮದ ಮರ್ಧಾಳದ ಬದ್ರಿಯಾ ಜುಮ್ಮಾ ಮಸೀದಿ ಆವರಣವನ್ನು ಸೆಪ್ಟೆಂಬರ್ 24ರಂದು ರಾತ್ರಿ 10.50ರಲ್ಲಿ ಅಕ್ರಮವಾಗಿ ಪ್ರವೇಶಿಸಿ ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆ. ಬ್ಯಾರಿಗಳನ್ನು ಬದುಕಲು ಬಿಡುವುದಿಲ್ಲ ಎಂದು ಬೊಬ್ಬೆ ಹಾಕಿದ್ದಾರೆ ಎಂದು ಆರೋಪಿಸಿ ಕೀರ್ತನ್ ಕುಮಾರ್ ಮತ್ತು ಎನ್.ಎಂ.ಸಚಿನ್ ಕುಮಾರ್ ವಿರುದ್ಧ ಮಸೀದಿ ಸಿಬ್ಬಂದಿ ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ದೂರಿನನ್ವಯ ಆರೋಪಿಗಳಿಬ್ಬರ ವಿರುದ್ಧ ಐಪಿಸಿಯ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿತ್ತು. ಬಳಿಕ ಆರೋಪಿಗಳು ತಮ್ಮ ವಿರುದ್ಧದ ಮೊಕದ್ದಮೆ ರದ್ದುಗೊಳಿಸುವಂತೆ ಕೋರಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ‘ಹಿಂದೂ, ಮುಸಲ್ಮಾನರು ಸೌಹಾರ್ದತೆಯಿಂದ ಜೀವಿಸುತ್ತಿದ್ದೇವೆ ಎಂದು ಸ್ವತಃ ದೂರುದಾರರೇ ಹೇಳಿದ್ದಾರೆ. ಆದರೆ, ಅರ್ಜಿದಾರರ ವಿರುದ್ಧ ಭಾರತೀಯ ದಂಡ ಸಂಹಿತೆ-1860ರ (ಐಪಿಸಿ) ಕಲಂ 295ಎ (ಧಾರ್ಮಿಕ ಭಾವನೆ, ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವುದು) ಅಡಿಯಲ್ಲಿ ದೂರು ದಾಖಲಿಸಲಾಗಿದೆ’ ‘ಜೈ ಶ್ರೀರಾಮ್ ಎಂದು ಘೋಷಣೆ ಕೂಗುವುದು ಧಾರ್ಮಿಕ ಭಾವನೆಗೆ ಹೇಗೆ ಧಕ್ಕೆಯಾಗುತ್ತದೆ ಎಂಬುದು ಅರ್ಥವಾಗುತ್ತಿಲ್ಲ.
ಈ ಪ್ರಕರಣದಲ್ಲಿ ಯಾವುದೇ ಅಪರಾಧ ಕಂಡು ಬರುತ್ತಿಲ್ಲ. ಹಾಗಾಗಿ, ಅರ್ಜಿದಾರರ ವಿರುದ್ಧ ವಿಚಾರಣೆಗೆ ಅನುಮತಿ ನೀಡುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದ ನ್ಯಾಯಪೀಠ ಇಬ್ಬರು ವ್ಯಕ್ತಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಿತ್ತು. ಇದೇ ವೇಳೆ ಮುಂದಿನ ವಿಚಾರಣೆಯನ್ನು ಜನವರಿಗೆ ನಿಗದಿಪಡಿಸಿದೆ.
Leave a Comment