ಜಲಾವೃತಗೊಂಡ ಸಿಲಿಕಾನ್ ಸಿಟಿ; ಶಾಲೆಗಳಿಗೆ ನಾಳೆ ರಜೆ ಘೋಷಣೆ
ನ್ಯೂಸ್ ಆ್ಯರೋ: ವಾಯುಭಾರ ಕುಸಿತದಿಂದಾಗಿ ಬೆಂಗಳೂರಿನಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ನಗರದ ಹಲವು ಭಾಗಗಳು ಜಲಾವೃತಗೊಂಡಿವೆ. ಇದೀಗ ಮಳೆಯ ಕಾರಣದಿಂದಾಗಿ ರಾಜ್ಯ ಸರ್ಕಾರವು ನಾಳೆ (ಅಕ್ಟೋಬರ್ 23) ಬೆಂಗಳೂರು ಭಾಗದ ಶಾಲೆಗಳಿಗೆ ರಜೆ ಘೋಷಿಸಿದೆ.
ಈ ಬಗ್ಗೆ ಜಿಲ್ಲಾಧಿಕಾರಿ ಜಗದೀಶ್ ಅವರು ಆದೇಶವನ್ನು ಹೊರಡಿಸಿದ್ದಾರೆ. ವಾಯುಭಾರ ಕುಸಿತದಿಂದಾಗಿ ಮುಂದಿನ ಕೆಲವು ದಿನಗಳ ಕಾಲ ನಗರದಾದ್ಯಂತ ಭಾರೀ ಮಳೆಯಾಗಲಿದ್ದು, ಮುಂಜಾಗ್ರತ ಕ್ರಮವಾಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಸರ್ಕಾರಿ, ಖಾಸಗಿ, ಅನುದಾನಿತ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ನೀಡುವಂತೆ ಆದೇಶಿಸಿದ್ದು, ಶನಿವಾರ ಮಧ್ಯಾಹ್ನ ಅಥವಾ ಭಾನುವಾರ ಹೆಚ್ಚುವರಿ ತರಗತಿ ನಡೆಸಲು ಸೂಚಿಸಿದ್ದಾರೆ.
ಉಳಿದಂತೆ ಎಲ್ಲಾ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮ, ಇಂಜಿನಿಯರಿಂಗ್ , ಐ.ಟಿ.ಐ ಗಳಿಗೆ ರಜೆ ಇರಲ್ಲ. ಬೆಂಗಳೂರು ನಗರದಲ್ಲಿ ಕಳೆದ ಎರಡು ದಿನದಿಂದ ಮಳೆಯಾಗುತ್ತಿದೆ. ಅದರಲ್ಲೂ ಮಂಗಳವಾರ ಜೋರಾಗಿ ಸುರಿದಿದೆ. ನಗರದ ರಸ್ತೆಗಳಲ್ಲಿ ಭಾರೀ ಪ್ರಮಾಣದ ನೀರು ನಿಂತು ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ.
ಇನ್ನು ನಗರ ತಗ್ಗು ಪ್ರದೇಶಗಳು, ಉದ್ಯಾನವನಗಳು, ಅಂಡರ್‌ಪಾಸ್‌ಗಳಲ್ಲಿ ನೀರು ನುಗ್ಗಿ ದೊಡ್ಡ ಅವಾಂತರಗಳಾಗಿವೆ.
Leave a Comment