ಮಂಗಳೂರು ಮಹಾನಗರ ಪಾಲಿಕೆ ಎಡವಟ್ಟು; ನಂತೂರ್ ಓವರ್ ಪಾಸ್ ಯೋಜನೆಗೆ ಮತ್ತೆ ಸಂಕಷ್ಟ
ನ್ಯೂಸ್ ಆ್ಯರೋ: ಮಂಗಳೂರಿನ ಪ್ರಮುಖ ಟ್ರಾಫಿಕ್ ಪ್ರದೇಶವಾದ ನಂತೂರಿನಲ್ಲಿ ಪ್ಲೈಓವರ್ ಕಾಮಗಾರಿ ಇನ್ನೇನು ಪ್ರಾರಂಭವಾಗಬೇಕು ಎನ್ನುವಷ್ಟರಲ್ಲಿ ಇದೀಗ ಮತ್ತೊಂದು ಸಮಸ್ಯೆ ಎದುರಾಗಿದೆ. ಮಿಯಾವಾಕಿ ಅರಣ್ಯ ತೆರವು ಮಾಡದಂತೆ ಹೈಕೋರ್ಟ್ ನೀಡಿರುವ ತಡೆಯಾಜ್ಞೆಯಿಂದ ಮತ್ತೆ ಕಾಮಗಾರಿ ಕುಂಟುತ್ತಾ ಸಾಗಲಿದೆ. ಈ ಅರಣ್ಯ ನಿರ್ಮಾಣಕ್ಕೆ ಮಹಾನಗರಪಾಲಿಕೆಯೇ ಪರ್ಮಿಶನ್ ಕೊಟ್ಟಿದ್ದು, ಇದೀಗ ಪಾಲಿಕೆಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಮಂಗಳೂರಿನ ಜನರ ದಶಕಗಳ ಸಮಸ್ಯೆ ನಂತೂರು ಸರ್ಕಲ್ , ಇಲ್ಲಿ ಟ್ರಾಫಿಕ್ ಜಾಮ್ ಗೆ ಸಿಲುಕದೆ ಇರುವವರು ತುಂಬಾ ಕಮ್ಮಿ, ಹಲವಾರು ಜನರು ಇಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳು ಇರುವ ಈ ಸರ್ಕಲ್ ನಲ್ಲಿ ಪ್ಲೈಓವರ್ ಅಥವಾ ಓವರ್ ಪಾಸ್ ಗೆ ಹಲವು ದಶಕಗಳ ಬೇಡಿಕೆ ಇತ್ತು,. ಇದೀಗ ಅದರ ಕಾಮಗಾರಿ ಪ್ರಾರಂಭವಾಗಿದೆ. ಆದರೆ ಮಂಗಳೂರು ಮಹಾನಗರ ಪಾಲಿಕೆ ಮಾಡಿರುವ ಒಂದು ಸಣ್ಣ ತಪ್ಪಿನಿಂದಾಗಿ ಇದೀಗ ಮತ್ತೆ ಕಾಮಗಾರಿ ಸ್ಥಗಿತಗೊಳ್ಳುವ ಹಂತಕ್ಕೆ ಬಂದಿದೆ. ನಂತೂರಿನಲ್ಲಿ ಈಗಾಗಲೇ ಕಾಮಗಾರಿ ಆರಂಭವಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಪಕ್ಕದ ಮರಗಳು, ಮೂರು ಕಡೆಯ ಗುಡ್ಡ ತೆರವು ಮಾಡುತ್ತಿರುವಾಗಲೇ, ಮುಂದಿನ ವಿಚಾರಣೆ ತನಕ ಮಿಯಾವಾಕಿ ಅರಣ್ಯ ತೆರವು ಮಾಡದಂತೆ ಪ್ರಾಧಿಕಾರಕ್ಕೆ ಅ.9ರಂದು ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಮಂಗಳೂರಿನ ವನ ಚಾರಿಟೆಬಲ್ ಟ್ರಸ್ಟ್‌ಗೆ ಅರಣ್ಯ ನಿರ್ಮಿಸಲು ಸಿಂಜಿನ್ ಇಂಟರ್‌ನ್ಯಾಷನಲ್ಲಿ. ಮತ್ತು ಬಯೋಕಾನ್ ಫೌಂಡೇಶನ್ ಪ್ರಾಯೋಜಕತ್ವ ನೀಡಿದ್ದು, ಈ ಸಂಸ್ಥೆಗಳೇ ಅರಣ್ಯ ತೆರವು ನೋಟಿಸ್ ವಿರುದ್ಧ ರಿಟ್ ಅರ್ಜಿ ಸಲ್ಲಿಸಿದ್ದವು. 2001ರಲ್ಲಿ ಸುರತ್ಕಲ್-ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ವೇಳೆಯೇ ನಂತೂರಿನಲ್ಲಿಮೇಲ್ಸೇತುವೆ ನಿರ್ಮಾಣ ಯೋಜನೆ ಇದ್ದರೂ, ಪರಿಶಿಷ್ಟರ ಮನೆ ತೆರವು, ಭೂಗತ ವಿದ್ಯುತ್ ಕೇಬಲ್ ತೆರವು ಮಾಡದ ಹಿನ್ನೆಲೆಯಲ್ಲಿ ಯೋಜನೆ ರದ್ದಾಗಿತ್ತು. ಮೇಲ್ಸೇತುವೆ ಪ್ರಸ್ತಾಪವಿದ್ದರೂ, 2021 ರಲ್ಲಿ ಮಿಯಾವಾಕಿ ಅರಣ್ಯ ನಿರ್ಮಾಣಕ್ಕೆ ಮಹಾನಗರ ಪಾಲಿಕೆ ಅನುಮತಿ ನೀಡಿದ್ದು, 2022ರ ಜೂ.5ರ ಪರಿಸರ ದಿನದಂದು ಉದ್ಘಾಟಿಸಲಾಗಿತ್ತು. ಸಾವಿರಕ್ಕೂ ಹೆಚ್ಚು ಗಿಡ ನೆಡಲಾಗಿದೆ.
ಹೆದ್ದಾರಿ ಪ್ರಾಧಿಕಾರ ಮೊದಲು ಮಿಯಾವಾಕಿ ಅರಣ್ಯ ತೆರವಿಗೆ ಆಲೋಚನೆ ಮಾಡಿದ್ದರೂ, ಜಂಕ್ಷನ್ ಸಮೀಪ ಭೂಸ್ವಾಧೀನ ಮಾಡುವ ನಿಟ್ಟಿನಲ್ಲಿ ಜು.20ರಂದು ಸಂಸದರು, ಶಾಸಕರು, ಮೇಯರ್ ಹಾಗೂ ಅಧಿಕಾರಿಗಳ ಸಭೆ ನಡೆಸಿ, ಭೂಸ್ವಾಧೀನ ಮಾಡಿಕೊಡಲು ಸ್ಥಳೀಯ ಕಾರ್ಪೊರೇಟರ್‌ಗಳಿಗೆ ಜವಾಬ್ದಾರಿ ನೀಡಲಾಗಿತ್ತು. ಜಂಕ್ಷನ್ ಸಮೀಪವಿದ್ದ 99 ಮರಗಳನ್ನು ಅರಣ್ಯ ಇಲಾಖೆ ಅನುಮತಿ ಪಡೆದು, ತೆರವು ಮಾಡಲಾಗಿದೆ.
ನಂತೂರು ಜಂಕ್ಷನ್‌ನಲ್ಲಿ ಶೇ.90 ಭೂಸ್ವಾಧೀನಪಡಿಸಿ, ಅಕ್ಟೋಬರ್‌ನಲ್ಲಿಓವರ್‌ಪಾಸ್ ಕಾಮಗಾರಿ ಆರಂಭಿಸಬೇಕಿತ್ತು. ಶೇ.83 ಜಮೀನು ಲಭ್ಯವಿದೆ. ಪಾಲಿಕೆ ಅನುಮತಿ ಪಡೆದು ಮಾಡಿರುವ ಮಿಯಾವಾಕಿ ಅರಣ್ಯ ತೆರವಿಗೆ ಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದ ಕಾಮಗಾರಿ ನಿಧಾನವಾಗಿದೆ. ನ್ಯಾಯಾಲಯಕ್ಕೆ ಮನವರಿಕೆ ಮಾಡಿ, ಆದೇಶ ಬಂದ ನಂತರ ಕಾಮಗಾರಿ ದಿನಾಂಕಕ್ಕೆ ಸಹಿ ಹಾಕಿದ 24 ತಿಂಗಳಲ್ಲಿ ಮುಗಿಸುವ ಯೋಜನೆ ಇದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
Leave a Comment