ದೀಪಾವಳಿಯಲ್ಲಿ ಗೋಪೂಜೆಯ ಮಹತ್ವವೇನು?; ಗೋಪೂಜೆಯ ಶುಭ ಮುಹೂರ್ತ, ಪೂಜೆ ವಿಧಾನ ಬಗ್ಗೆ ತಿಳಿಯಿರಿ

Govardhan Pooja
Spread the love

ನ್ಯೂಸ್ ಆ್ಯರೋ: ಭಾರತದಲ್ಲಿ ಪ್ರತಿವರ್ಷ ದೀಪಾವಳಿ ಹಬ್ಬವನ್ನು ಮೂರು ಅಥವಾ ಐದು ದಿನಗಳ ಕಾಲ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಕಾರ್ತಿಕ ಮಾಸದ ಶುಕ್ಷ ಪಕ್ಷದ ಪ್ರತಿಪಾದ ದಿನದಂದು ಗೋಪೂಜೆ ಅಥವಾ ಗೋವರ್ಧನ ಪೂಜೆಯನ್ನು ಆಚರಿಸಲಾಗುತ್ತದೆ.

ಗೋಪೂಜೆಯ ದಿನಾಂಕ ಮತ್ತು ಶುಭ ಮುಹೂರ್ತ:

ಗೋಪೂಜೆಯ ಪ್ರತಿಪಾದ ತಿಥಿಯು ನವೆಂಬರ್‌ 1 ರಂದು ಅಂದರೆ ಇಂದು ಸಂಜೆ 6:16 ಕ್ಕೆ ಪ್ರಾರಂಭವಾಗಿ ನವೆಂಬರ್‌ 2 ರಂದು ಅಂದರೆ ನಾಳೆ ರಾತ್ರಿ 8:21 ಕ್ಕೆ ಮುಕ್ತಾಯಗೊಳ್ಳಲಿದೆ. ಉದಯ ತಿಥಿಯ ಪ್ರಕಾರ ಈ ಬಾರಿ ಗೋ ಪೂಜೆಯನ್ನು ನವೆಂಬರ್‌ 2 ಅಂದರೆ ನಾಳೆ ಆಚರಿಸಲಾಗುತ್ತದೆ. ಗೋಪೂಜೆ ಶುಭ ಮುಹೂರ್ತ: ಗೋ ಪೂಜೆಯ ಪ್ರಾತಃಕಾಲ ಮುಹೂರ್ತವು ನವೆಂಬರ್‌ 2 ರಂದು ಬೆಳಗ್ಗೆ 6:14 ರಿಂದ 8:46 ರವರೆಗೆ ಇರುತ್ತದೆ. ಗೋ ಪೂಜೆಗೆ ಪ್ರಶಸ್ತವಾದ ಎರಡನೇ ಮುಹೂರ್ತವು ಮಧ್ಯಾಹ್ನ 3:23 ರಿಂದ 5:35 ರ ವರೆಗೆ ಇರುತ್ತದೆ. ಮೂರನೇ ಮುಹೂರ್ತವು ಸಂಜೆ 5:35 ರಿಂದ 6:01 ರ ವರೆಗೆ ಇರುತ್ತದೆ.

Govardhan Puja 1

ಗೋಪೂಜೆಯ ಪೂಜೆ ವಿಧಾನ:

ಗೋಪೂಜೆಯ ದಿನದಂದು ಮುಂಜಾನೆ ಬೇಗ ಎದ್ದು ಶುದ್ಧರಾಗಿ ದೇವರ ಕೋಣೆ ಮತ್ತು ಮನೆಯ ಅಂಗಳವನ್ನು ಸ್ವಚ್ಛಗೊಳಿಸಬೇಕು. ನಂತರ ಮನೆಯ ಅಂಗಳದಲ್ಲಿ ರಂಗೋಲಿಯನ್ನು ಹಾಕಬೇಕು. ನಂತರ ಗೋವುಗಳಿಗೆ ತಿನ್ನಲು ಮನೆಯಲ್ಲಿಯೇ ಸಿಹಿ ಖಾದ್ಯ ಹಾಗೂ ರೊಟ್ಟಿ ಅಥವಾ ದೋಸೆಯನ್ನು ತಯಾರಿಸಬೇಕು. ಬಳಿಕ ದನದ ಕೊಟ್ಟಿಗೆ ಅಥವಾ ಗೋವನ್ನು ಕಟ್ಟುವ ಸ್ಥಳವನ್ನು ಶುದ್ಧಗೊಳಿಸಿ, ಗೋ ಮಾತೆಗೂ ಸ್ನಾನ ಮಾಡಿಸಬೇಕು. ನಂತರ ಗೋ ಮಾತೆಯ ಮೈ ಮೇಲೆ ಅರಶಿನ ಕುಂಕುಮ, ವಿಭೂತಿಯನ್ನು ಹಚ್ಚಿ, ಹೂವಿನ ಹಾರವನ್ನು ಹಾಕಬೇಕು. ಜೊತೆಗೆ ನಿಮಗೆ ಇಷ್ಟವಾಗುವಂತೆ ಗೋಮಾತೆಯನ್ನು ಅಲಂಕರಿಸಬಹುದು. ಇದಾದ ಬಳಿಕ ಶುಭ ಮುಹೂರ್ತದಲ್ಲಿ ಗೋವುಗಳ ಹಣೆಗೆ ಕಾಲಿಗೆ ಅರಶಿನ ಕುಂಕುಮವನ್ನು ಹಚ್ಚಿ, ಆರತಿ ಬೆಳಗಿ ಮೊದಲೇ ತಯಾರಿಸಿಟ್ಟ ಸಿಹಿ ಖಾದ್ಯ ಮತ್ತು ರೊಟ್ಟಿಯನ್ನು ತಿನ್ನಿಸಿ ಗೋ ಮಾತೆಯ ಆಶಿರ್ವಾದವನ್ನು ಪಡೆಯಬೇಕು.

ನಾವು ಆಚರಿಸುವ ಪ್ರತಿಯೊಂದು ಸಂಪ್ರದಾಯಕ್ಕೂ ಒಂದೊಂದು ಹಿನ್ನೆಲೆ ಇರುವಂತೆ ದೀಪಾವಳಿಯ ಸಮಯದಲ್ಲಿನ ಗೋ ಆರಾಧನೆಗೂ ಒಂದು ಪೌರಾಣಿಕ ಹಿನ್ನೆಲೆ ಇದೆ.

ಗೋಪೂಜೆಯ ಅಥವಾ ಗೋವರ್ಧನ ಪೂಜೆಯ ಹಿಂದಿನ ಕಥೆ:

ದೀಪಾವಳಿಯ ವೇಳೆ ಒಂದು ದಿನವನ್ನು ಬಲಿಪಾಡ್ಯಮಿ ಎಂದು ಬಲಿ ಚಕ್ರವರ್ತಿಯ ನೆನಪಿಗಾಗಿ ಆಚರಿಸಲಾಗುತ್ತದೆ. ಈ ದಿನ ಲಕ್ಷ್ಮೀ ಪೂಜೆ, ಗೋ ಪೂಜೆ ಇವುಗಳನ್ನು ಮಾಡಲಾಗುವುದು. ಯಾಕೆಂದರೆ ಬಲಿಚಕ್ರವರ್ತಿಯ ಸಾಮ್ರಾಜ್ಯದಲ್ಲಿ ಗೋವುಗಳಿಗೆ ಅತಿಯಾದ ಮಹತ್ವ ನೀಡಲಾಗುತ್ತಿತ್ತು. ಅದಕ್ಕೆ ಪೂಜೆಗಳನ್ನು, ಆರಾಧನೆಯನ್ನು ಮಾಡಲಾಗುತ್ತಿತ್ತು. ಅದರ ಸವಿನೆನಪಿಗಾಗಿ ಬಲಿಪಾಡ್ಯಮಿ ದಿವಸ ಗೋವುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ.

ಕೃಷ್ಣ ನಂದಗೋಕುಲದಲ್ಲಿದ್ದಾಗ ಅಲ್ಲಿದ್ದ ಗೋಪ, ಗೋಪಿಯರು ಪ್ರತಿವರ್ಷ ಮಳೆ ಬರಲಿ ಎಂದು ಎಲ್ಲರು ಇಂದ್ರದೇವನ ಪೂಜೆಯನ್ನು ಮಾಡುತ್ತಿದ್ದರು. ಇದರಿಂದಾಗಿ ಇಂದ್ರನಿಗೆ ನಾನು ಮಳೆ ಬರಿಸುವುದರಿಂದಲೇ ಪ್ರಪಂಚದಲ್ಲಿ ಎಲ್ಲವೂ ನಡೆಯುತ್ತಿದೆ ಎಂದು ಗರ್ವದಿಂದ ಬೀಗಿದ. ಇಂದ್ರ ತಾನು, ತನ್ನಿಂದ ಎಂದು ಗರ್ವದಲ್ಲಿ ಬೀಗುತ್ತಿರುವ ವಿಚಾರ ಕೃಷ್ಣನಿಗೆ ತಿಳಿಯುತ್ತದೆ. ಈ ಕಾರಣಕ್ಕೆ ಈತನ ಗರ್ವ ಇಳಿಸಲು ಇಂದ್ರನಿಗೆ ಪೂಜೆ ಮಾಡದೇ ಗೋವರ್ಧನ ಪರ್ವತಕ್ಕೆ ಪೂಜೆ ಮಾಡಬೇಕೆಂದು ಗೋಪಾಲಕರಿಗೆ ಸೂಚಿಸಿದ. ನಮಗೆ ಮಳೆ ಗೋವರ್ಧನ ಪರ್ವತದಿಂದ ಬರುತ್ತಿದೆ, ಅದಕ್ಕಾಗಿ ನಾವು ಇನ್ನು ಮುಂದೆ ಗೋವರ್ಧನ ಪರ್ವತವನ್ನು ಪೂಜೆ ಮಾಡಬೇಕೇ ವಿನಾಃ ಇಂದ್ರದೇವನ ಪೂಜೆ ಮಾಡುವುದು ಬೇಡ ಎಂದು ಸೂಚಿಸಿದ.

ಕೃಷ್ಣನ ಸೂಚನೆಯ ಹಿನ್ನೆಲೆಯಲ್ಲಿ ಗೋವರ್ಧನ ಪರ್ವತದ ಪೂಜೆ ಮಾಡಲು ಶುರು ಮಾಡಿದರು. ನನಗೆ ಪೂಜೆ ಮಾಡುವುದನ್ನು ಬಿಟ್ಟು ಗೋವರ್ಧನ ಪರ್ವತಕ್ಕೆ ಪೂಜೆ ಮಾಡುವುದನ್ನು ನೋಡಿ ಇಂದ್ರನಿಗೆ ಕೋಪ ಬಂತು. ಗೋಪಾಲರಿಗೆ ಪಾಠ ಕಲಿಸಲು ಇಂದ್ರನು ತುಂಬಾ ರಭಸವಾಗಿ ಮಳೆಯನ್ನು ಸುರಿಸಲು ಪ್ರಾರಂಭಿಸಿದನು. ಇದರಿಂದಾಗಿ ನದಿಯು ತುಂಬಿ ಹರಿಯಲಾರಂಭಿಸಿತು. ಎಲ್ಲ ಜನರು ಗಾಬರಿಯಿಂದ ಶ್ರೀಕೃಷ್ಣನ ಬಳಿಗೆ ಸಹಾಯ ಕೇಳಲು ಓಡಿದರು.

ಆಗ ಶ್ರೀಕೃಷ್ಣನು, ನೀವು ಯಾರು ಭಯ ಪಡುವ ಅಗತ್ಯವಿಲ್ಲ. ಎಲ್ಲರೂ ಒಟ್ಟು ಸೇರೋಣ. ನಾವು ಪೂಜಿಸಿದ ಗೋವರ್ಧನ ಪರ್ವತವೇ ನಮ್ಮನ್ನು ರಕ್ಷಿಸುತ್ತದೆ ಎಂದು ಅಭಯವನ್ನು ಇತ್ತ. ಎಲ್ಲ ಜನ ಸೇರಿದ ನಂತರ ಕೃಷ್ಣ ತನ್ನ ಕಿರು ಬೆರಳಿನಿಂದ ಗೋವರ್ಧನ ಪರ್ವತವನ್ನು ಎತ್ತಿ ಹಿಡಿದು ಗ್ರಾಮಸ್ಥರನ್ನು ರಕ್ಷಿಸಿದ. ಬಲಿ ಪಾಡ್ಯಮಿಯಂದು ಕೃಷ್ಣ ಗೋವರ್ಧನ ಪರ್ವತವನ್ನು ಎತ್ತಿದ ಹಿನ್ನೆಲೆಯಲ್ಲಿ ಈ ದಿನ ಈಗಲೂ ಗೋವುಗಳಿಗೆ ವಿಶೇಷ ಪೂಜೆ ಮಾಡಲಾಗುತ್ತದೆ.

ಹೆಚ್ಚಿನ ಕಡೆಗಳಲ್ಲಿ ಆ ದಿನದಂದು ಹಸುವಿನ ಹಾಲನ್ನೂ ಕರೆಯಬಾರದೆಂಬ ಪ್ರತೀತಿ ಇದೆ. ಕರುಗಳು ಬೇಕಾದಷ್ಟು ಹಾಲು ಕುಡಿದು ಸಂತೋಷವಾಗಿರಬೇಕೆಂಬುದು ಇದರ ಉದ್ದೇಶ. ಸರ್ವಸಮೃದ್ಧಿಯುಂಟಾಗಿ, ಧನಕನಕಗಳು ವೃದ್ಧಿಯಾಗುವಂತೆ ಇದೇ ದಿನ ಧನಲಕ್ಷ್ಮಿ ಪೂಜೆಯ ಮೂಲಕ ಲಕ್ಷ್ಮಿಯನ್ನು ಒಲಿಸಿಕೊಳ್ಳಲಾಗುತ್ತದೆ. ಈ ರೀತಿ ಮಾಡುವುದರಿಂದ ಬಲಿ ಚಕ್ರವರ್ತಿಯ ರಾಜ್ಯದಲ್ಲಿದ್ದಂತೆ ಎಲ್ಲಾ ಸುಖೋಪಭೋಗಗಳು ದೊರೆಯುವುದು ಎಂಬ ನಂಬಿಕೆ ಜನರಲ್ಲಿದೆ. ಒಟ್ಟಾರೆ ಮೂರು ದಿನಗಳ ಕಾಲ ನಡೆಯುವ ದೀಪಾವಳಿ ಸಂಭ್ರಮದಲ್ಲಿ ಗೋ ಪೂಜೆ ಕೂಡ ಪ್ರಾಮುಖ್ಯತೆ ಪಡೆದುಕೊಂಡಿದ್ದು, ಇದು ಭೂಲೋಕದ ಕಾಮಧೇನುವಿಗೆ ನೀಡಿದ ಮಹತ್ವವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.

Leave a Comment

Leave a Reply

Your email address will not be published. Required fields are marked *

error: Content is protected !!