Paris Olympics 2024 : ರೋಚಕ ಪಂದ್ಯದಲ್ಲಿ ಜರ್ಮನಿ ಎದುರು ಸೋತ ಭಾರತ – ಚಿನ್ನದ ಕನಸು ಛಿದ್ರ, ಕೊನೆ ಕ್ಷಣದಲ್ಲಿ ಮಾಡಿದ ತಪ್ಪಿಗೆ ಬೆಲೆ ತೆತ್ತ ಟೀಂ ಇಂಡಿಯಾ
ನ್ಯೂಸ್ ಆ್ಯರೋ : ಭಾರತದ ಪುರುಷರ ಹಾಕಿ ತಂಡ ಪ್ಯಾರಿಸ್ ಒಲಿಂಪಿಕ್ಸ್ ನ ಸೆಮಿಫೈನಲ್ಸ್ ಪಂದ್ಯದಲ್ಲಿ ಜರ್ಮನಿ ಎದುರು 3-2 ಗೋಲ್ ಗಳ ಅಂತರದದಿಂದ ಸೋಲು ಅನುಭವಿಸಿದೆ.
ರೋಚಕವಾಗಿ ಸಾಗಿದ ಮೊದಲಾರ್ಧದಲ್ಲಿ ಏಳನೇ ನಿಮಿಷದಲ್ಲೇ ನಾಯಕ ಹರ್ಮನ್ ಪ್ರೀತ್ ಅವರ ಗೋಲ್ ನೊಂದಿಗೆ ಭಾರತ ಗೋಲ್ ಖಾತೆ ತೆರೆದಿತ್ತು. ಆದರೆ ತಿರುಗಿಬಿದ್ದ ಜರ್ಮನಿ ಸತತ ಎರಡು ಗೋಲು ಗಳಿಸಿ ತಿರುಗೇಟು ನೀಡಿತು.
ಪೆನಾಲ್ಟಿ ಕಾರ್ನರ್ ಅವಕಾಶ ಪಡೆದ ಜರ್ಮನಿಯ ಗೊಂಜಾಲೊ ಪೀಲಾಟ್ ಮೊದಲ ಗೋಲು ಗಳಿಸಿ ಸಮ ಗೊಳಿಸಿದರು. ಇದಾದ ಬಳಿಕ ಕ್ರಿಸ್ಟೋಫರ್ ರೂಚರ್ 27ನೇ ನಿಮಿಷದಲ್ಲಿ ಗೋಲು ಗಳಿಸಿ ಜರ್ಮನಿಗೆ ಮುನ್ನಡೆ ಒದಗಿಸಿದರು. ಮೊದಲಾರ್ಧದ ವೇಳೆಗೆ ಜರ್ಮನಿ 2-1ರಿಂದ ಮುನ್ನಡೆ ಸಾಧಿಸಿತ್ತು.
ಮೂರನೇ ಅವಧಿಯಲ್ಲಿ ಸಿಕ್ಕ ಪೆನಾಲ್ಟಿ ಅವಕಾಶ ಸದುಪಯೋಗ ಮಾಡಿದ ಹರ್ಮನ್ ಪ್ರೀತ್ ನೆರವಿನಿಂದ ಸುಖ್ ಜೀತ್ ಮತ್ತೊಂದು ಗೋಲು ಬಾರಿಸಿ ಮತ್ತೆ ಸಮಬಲ ಮಾಡಿದರು. ಆದರೆ ಪಂದ್ಯ ಮುಕ್ತಾಯಕ್ಕೆ ಕೆಲವೇ ನಿಮಿಷ ಬಾಕಿ ಇರುವಾಗ ಮಾರ್ಕೊ ಮಿಲ್ಟ್ಕೌ ಗೋಲು ಬಾರಿಸಿ ಜರ್ಮನಿಗೆ 3-2 ಮುನ್ನಡೆ ಒದಗಿಸಿದರು.
ಆದರೆ ಕೊನೆಯ ನಿಮಿಷಗಳಲ್ಲಿ ಗೋಲ್ ಕೀಪರ್ ಶ್ರೀಜೇಶ್ ಅನುಪಸ್ಥಿತಿಯಲ್ಲೂ ಜರ್ಮನಿಯ ಪೆನಾಲ್ಟಿ ಕಾರ್ನರ್ ಅವಕಾಶ ಹಾಳುಗೆಡವಿದ ಭಾರತಕ್ಕೆ ಸಮಬಲ ಸಾಧಿಸುವ ಎಲ್ಲಾ ಅವಕಾಶವಿತ್ತು.
ಆದರೆ ಪಂದ್ಯದ ಅಂತ್ಯದ ಕೊನೆ ಸೆಕೆಂಡ್ ನಲ್ಲಿ ಸಿಕ್ಕ ಅವಕಾಶವನ್ನು ಕೈಚೆಲ್ಲಿದ ಭಾರತ ಫೈನಲ್ ನಿಂದ ಹೊರಬಿತ್ತು. ಇನ್ನು ಕಂಚಿಗಾಗಿ ಸ್ಪೇನ್ ವಿರುದ್ಧ ಭಾರತ ಮತ್ತೊಂದು ಪಂದ್ಯವಾಡಲಿದೆ.
ದ್ವಿತೀಯಾರ್ಧದಲ್ಲಿ ಬಹುಪಾಲು ಸಮಯ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದ ಭಾರತ ತಂಡದ ಲೆಕ್ಕಾಚಾರ ಸೋಲಿಗೆ ಬಹುಮೂಲ್ಯ ಕಾರಣ. ವಿಶ್ವ ಚಾಂಪಿಯನ್ ಜರ್ಮನಿ ತಂಡದ ಆಟಗಾರರು ಭಾರತದ ಗೋಲ್ ಪೆಟ್ಟಿಗೆಯತ್ತ ಮುನ್ನುಗ್ಗಿ ಬರುತ್ತಿದ್ದರೆ, ಭಾರತೀಯ ಆಟಗಾರರು ಜರ್ಮನಿ ಆಟಗಾರರ ವೇಗದ ಆಟ ತಡೆಯುವಲ್ಲೇ ಕಾಲ ಹರಣ ಮಾಡಿದ್ದು ಗೋಲ್ ದಾಖಲಿಸದಿರಲು ಕಾರಣವಾಯಿತು.
ಇನ್ನೂ ಈ ಬಾರಿಯ ಇಡೀ ಪಂದ್ಯಾಕೂಟದಲ್ಲಿ ಭಾರತದ ಗೋಲ್ ಪೆಟ್ಟಿಗೆ ರಕ್ಷಿಸಿದ ಗೋಲ್ ಕೀಪರ್ ಪಿ.ಆರ್.ಶ್ರೀಜೇಶ್ ಅವರಿಗೆ ಇದು ಕೊನೆಯ ಒಲಿಂಪಿಕ್ ಕ್ರೀಡಾಕೂಟವಾಗಿದ್ದು, ದೇಶ ಕಂಡ ಅಪ್ರತಿಮ ಸಾಧಕ ಚಿನ್ನದ ಸಾಧನೆಯಿಲ್ಲದೆ ವಿದಾಯ ಹೇಳುತ್ತಿರುವುದು ವಿಪರ್ಯಾಸವೇ ಸರಿ.
Leave a Comment