ಏಷ್ಯಾದ ಎರಡನೇ ಅತಿ ದೊಡ್ಡ ಶ್ರೀಮಂತನಿಗೆ ಸಂಕಷ್ಟ ; ಗೌತಮ್ ಅದಾನಿ ಮೇಲೆ ಅರೆಸ್ಟ್ ವಾರೆಂಟ್ ಜಾರಿ!
ನ್ಯೂಸ್ ಆ್ಯರೋ: ಏಷ್ಯಾದ 2ನೇ ಶ್ರೀಮಂತ ಉದ್ಯಮಿ ಗೌತಮ್ ಅದಾನಿ ಅವರು ಮತ್ತೆ ಸಂಕಷ್ಟದಲ್ಲಿ ಸಿಲುಕಿದ್ದಾರೆ. ನ್ಯೂಯಾರ್ಕ್ ಕೋರ್ಟ್ ಅದಾನಿ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ ಮಾಡಿದ್ದು, ಅದಾನಿ ಕಂಪನಿಗಳ ಮೇಲೆ ಹೂಡಿಕೆ ಮಾಡಿದವರಿಗೆ ಇಂದು ಭಾರೀ ನಷ್ಟ ಉಂಟಾಗಿದೆ. ಅದಾನಿ ಮೇಲೆ ಅರೆಸ್ಟ್ ವಾರೆಂಟ್ ಜಾರಿ ಆಗಿರೋದಕ್ಕೆ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮುಗಿಬಿದ್ದಿದ್ದಾರೆ.
ಅಮೆರಿಕಾದ ನ್ಯೂಯಾರ್ಕ್ ಕೋರ್ಟ್‌ನಲ್ಲಿ ಗೌತಮ್ ಅದಾನಿ ವಿರುದ್ಧ ಬಂಧನದ ವಾರೆಂಟ್ ಆದೇಶ ನೀಡುತ್ತಿದ್ದಂತೆ ಅದಾನಿ ಕಂಪನಿಯ ಷೇರುಗಳ ಮೌಲ್ಯ ಪಾತಾಳಕ್ಕೆ ಕುಸಿದಿದೆ. ಅದಾನಿ ಎಂಟರ್ಪ್ರೈಸಸ್ ಶೇ.20, ಅದಾನಿ ಪೋರ್ಟ್ ಶೇ.20, ಅದಾನಿ ಪವರ್ ಷೇರುಗಳು ಶೇ.15ರಷ್ಟು ಕುಸಿತ ಕಂಡಿದ್ದು, ಅದಾನಿ ಮೇಲೆ ಹೂಡಿಕೆ ಮಾಡಿದವರಿಗೆ ದೊಡ್ಡ ನಷ್ಟ ಉಂಟಾಗಿದೆ.
ಅಮೆರಿಕಾದಲ್ಲಿ ಸೋಲಾರ್ ಎನರ್ಜಿಯ ಒಪ್ಪಂದ ಪಡೆಯಲು ಗೋಲ್‌ಮಾಲ್ ಮಾಡಲಾಗಿದೆ. ಉದ್ಯಮಿ ಗೌತಮ್ ಅದಾನಿ ವಿರುದ್ಧ ಲಂಚ ಮತ್ತು ವಂಚನೆ ಪ್ರಕರಣ ದಾಖಲಾಗಿತ್ತು. ಗುತ್ತಿಗೆಗಳ ಮೂಲಕ ಸೋಲಾರ್ ಎನರ್ಜಿ ಪೂರೈಕೆ ಸ್ಕೀಮ್ ಇದಾಗಿದ್ದು, ಎರಡು ಬಿಲಿಯನ್ ಡಾಲರ್‌ಗೂ ಅಧಿಕ ಲಾಭದ ಯೋಜನೆ ಇದು. ಹೂಡಿಕೆದಾರರಿಂದ ಲಂಚದ ಯೋಜನೆ ಮುಚ್ಚಿಡಲು ಯತ್ನಿಸಲಾಗಿದೆ. ಹೂಡಿಕೆದಾರರನ್ನ ತಪ್ಪು ದಾರಿಗೆಳೆದು ಆಮೆರಿಕಾದ ಮಾರುಕಟ್ಟೆಯಿಂದ ನಿಧಿ ಸಂಗ್ರಹ ಮಾಡಿದ ಗಂಭೀರ ಆರೋಪ ಕೇಳಿ ಬಂದಿದೆ. 2,237 ಕೋಟಿ ರೂಪಾಯಿ ಲಂಚದ ಆರೋಪದಲ್ಲಿ ಹಿನ್ನೆಲೆಯಲ್ಲಿ ಕೋರ್ಟ್ ಬಂಧನದ ವಾರೆಂಟ್ ಜಾರಿ ಮಾಡಿದೆ.
ಗೌತಮ್ ಅದಾನಿ ವಿರುದ್ಧ ಸಾವಿರಾರು ಕೋಟಿ ರೂಪಾಯಿ ಲಂಚದ ಆರೋಪ ಭಾರತದಲ್ಲಿ ಕೋಲಾಹಲ ಸೃಷ್ಟಿಸಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನೇರವಾಗಿ ಪ್ರಧಾನಿ ಮೋದಿ ಗೌತಮ್ ಅದಾನಿಯನ್ನ ರಕ್ಷಿಸುತ್ತಿದ್ದಾರೆ. ಅದಾನಿ ವಿರುದ್ಧ ಮೋದಿ ಅವರು ಏನೂ ಮಾಡಲು ಸಾಧ್ಯವಿಲ್ಲ. ಯಾಕಂದ್ರೆ ಮೋದಿ ಅದಾನಿಯ ನಿಯಂತ್ರಣದಲ್ಲಿದ್ದಾರೆ. ಕೂಡಲೇ ಅದಾನಿ ಬಂಧಿಸುವಂತೆ ರಾಹುಲ್ ಗಾಂಧಿ ಆಗ್ರಹ ಮಾಡಿದ್ದಾರೆ.
ಗೌತಮ್ ಅದಾನಿ ವಿರುದ್ಧ ಸುಪ್ರೀಂಕೋರ್ಟ್ ಮೇಲ್ವಿಚಾರಣೆ ಅಥವಾ ಜಂಟಿ ಪಾರ್ಲಿಮೆಂಟರಿ ಸಮಿತಿ ರಚಿಸಿ ತನಿಖೆ ನಡೆಸಲು ವಿರೋಧ ಪಕ್ಷಗಳಿಂದ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಲಾಗಿದೆ. ಹಿಂಡನ ಬರ್ಗ್ ರಿಸರ್ಚ್ ವರದಿ ಬಳಿಕ ಈಗ ಗೌತಮ್ ಅದಾನಿ ಅವರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
Leave a Comment