ಉದ್ಯಮಿ ಜಯ ಶೆಟ್ಟಿ ಕೊಲೆ ಕೇಸ್‌ನಲ್ಲಿ ತಿರುವು; ಗ್ಯಾಂಗ್‌ಸ್ಟರ್ ಚೋಟಾ ರಾಜನ್‌ಗೆ ಹೈಕೋರ್ಟ್ ಏನು ಹೇಳಿತು ?
ನ್ಯೂಸ್ ಆ್ಯರೋ: ಉದ್ಯಮಿ ಜಯ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್‌ಸ್ಟರ್ ಛೋಟಾ ರಾಜನ್‌ಗೆ ನೀಡಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಬುಧವಾರ (ಅ. 23) ಅಮಾನತುಗೊಳಿಸಿದೆ ಮತ್ತು ಪ್ರಕರಣದಲ್ಲಿ ಆತನಿಗೆ ಜಾಮೀನು ನೀಡಿದೆ.
ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ದೇರೆ ಮತ್ತು ಪೃಥ್ವಿರಾಜ್ ಚವಾಣ್ ಅವರಿದ್ದ ವಿಭಾಗೀಯ ಪೀಠವು ಜಾಮೀನಿಗಾಗಿ 1 ಲಕ್ಷ ರೂಪಾಯಿ ಬಾಂಡ್ ನೀಡುವಂತೆ ಛೋಟಾ ರಾಜನ್‌ಗೆ ಸೂಚಿಸಿದೆ. ಈ ಪ್ರಕರಣದಲ್ಲಿ ಜಾಮೀನು ಮಂಜೂರಾಗಿದ್ದರು ಛೋಟಾ ರಾಜನ್ ಇತರ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಜೈಲಿನಲ್ಲೇ ಇರುತ್ತಾನೆ.
ಮೇ ತಿಂಗಳಲ್ಲಿ ವಿಶೇಷ ನ್ಯಾಯಾಲಯವು ಹೋಟೆಲ್ ಉದ್ಯಮಿಯ ಕೊಲೆ ಪ್ರಕರಣದಲ್ಲಿ ಛೋಟಾ ರಾಜನ್ ದೋಷಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತು. ವಿಶೇಷ ನ್ಯಾಯಾಲಯದ ಆದೇಶದ ವಿರುದ್ಧ ಛೋಟಾ ರಾಜನ್ ಬಾಂಬೆ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿಯಲ್ಲಿ ಶಿಕ್ಷೆಯನ್ನು ಅಮಾನತುಗೊಳಿಸಬೇಕು ಮತ್ತು ಮಧ್ಯಂತರದಲ್ಲಿ ಜಾಮೀನು ನೀಡಬೇಕೆಂದು ಮನವಿ ಮಾಡಿದ್ದರು.
2011ರಲ್ಲಿ ಪತ್ರಕರ್ತ ಜೆಡೇ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಛೋಟಾ ರಾಜನ್‌ನನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ. ಆತ ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಹಲವಾರು ಆರೋಪಗಳನ್ನು ಎದುರಿಸುತ್ತಿದ್ದಾನೆ. ಬಂಧನದಿಂದ ತಪ್ಪಿಸಿಕೊಳ್ಳುವ ಕುಖ್ಯಾತಿ ಪಡೆದಿದ್ದ ಛೋಟಾ ರಾಜನ್ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ನಂತರ 2015ರಲ್ಲಿ ಇಂಡೋನೇಷ್ಯಾದ ಬಾಲಿಯಲ್ಲಿ ಆತನನ್ನು ಬಂಧಿಸಲಾಯಿತು.
ಮಧ್ಯ ಮುಂಬೈನ ಗಾಮ್‌ದೇವಿಯಲ್ಲಿ ಗೋಲ್ಡನ್ ಕ್ರೌನ್ ಹೋಟೆಲ್ ಮಾಲೀಕರಾಗಿದ್ದ ಜಯ ಶೆಟ್ಟಿ ಅವರನ್ನು ಛೋಟಾ ರಾಜನ್ ಗ್ಯಾಂಗ್‌ನ ಇಬ್ಬರು ಆರೋಪಿಗಳು ಹೋಟೆಲ್‌ನ ಮೊದಲ ಮಹಡಿಯಲ್ಲಿ 2001 ಮೇ 4ರಂದು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಹೇಮಂತ್ ಪೂಜಾರಿಯಿಂದ ಜಯ ಶೆಟ್ಟಿಗೆ ಸುಲಿಗೆ ಕರೆಗಳು ಬಂದಿದ್ದವು ಎನ್ನಲಾಗಿದೆ. ಆದರೆ ಹಣವನ್ನು ಪಾವತಿಸಲು ವಿಫಲವಾದ ಕಾರಣ ಉದ್ಯಮಿಯನ್ನು ಹತ್ಯೆ ಮಾಡಲಾಗಿದೆ ಎಂದು ತನಿಖೆಯು ಸೂಚಿಸಿದೆ. ಇತರ ಕೇಸ್ ನಲ್ಲಿ ಲಾಕ್ ಆಗಿದ್ದರೂ ಜಯ ಶೆಟ್ಟಿ ಹತ್ಯೆ ಮಾಡಿರುವ ಕೇಸ್ ನಲ್ಲಿ ಜಾಮೀನು ಸಿಕ್ಕಿರುವುದು ತಿರುವು ಛೋಟಾ ರಾಜನ್ ಗೆ ತಿರುವು ಸಿಕ್ಕಿದಂತಾಗಿದೆ.
Leave a Comment