ಆಸ್ಪತ್ರೆಯಲ್ಲಿ ಮತ್ತೊಂದು ಭೀಕರ ಅಗ್ನಿ ದುರಂತ; ಉಸಿರು ನಿಲ್ಲಿಸಿದ 7 ರೋಗಿಗಳು

Ire Breaking
Spread the love

ನ್ಯೂಸ್ ಆ್ಯರೋ: ತಮಿಳುನಾಡಿನ ದಿಂಡಿಗಲ್‌ನಲ್ಲಿರುವ ಪ್ರಮುಖ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿ ಮಗು ಸೇರಿ ಕನಿಷ್ಠ ಏಳು ಮಂದಿ ರೋಗಿಗಳು ಮೃತಪಟ್ಟಿದ್ದಾರೆ ಮತ್ತು 20 ಮಂದಿ ಗಾಯಗೊಂಡಿದ್ದಾರೆ. ಗುರುವಾರ ರಾತ್ರಿ ಘಟನೆ ಸಂಭವಿಸಿದೆ. ಸ್ಥಳೀಯ ಅಧಿಕಾರಿಗಳ ಪ್ರಕಾರ ಮೃತರಲ್ಲಿ ಒಂದು ಮಗು ಮತ್ತು ಇಬ್ಬರು ಮಹಿಳೆಯರು ಸೇರಿದ್ದಾರೆ. ನೆಲ ಮಹಡಿಯಲ್ಲಿನ ರಿಸೆಪ್ಷನ್ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಕ್ಷಣಮಾತ್ರದಲ್ಲಿ ಅದು ಇಡೀ ಆಸ್ಪತ್ರೆಯನ್ನು ವ್ಯಾಪಿಸಿದೆ. ಘಟನೆಗೆ ಶಾರ್ಟ್ ಸರ್ಕ್ಯೂಟ್ ಕಾರಣ ಇರಬಹುದೆಂದು ಶಂಕಿಸಲಾಗಿದೆ.

ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಪ್ರಕಾರ, ಅಗ್ನಿ ಅವಘಡದಿಂದಾಗಿ ಆಸ್ಪತ್ರೆಯಲ್ಲಿ ಆವರಿಸಿದ ದಟ್ಟವಾದ ಹೊಗೆಯಿಂದ ಹಲವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ರಿಸೆಪ್ಷನ್​ ಹಾಲ್​ನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ಬೆಂಕಿ ಹೊತ್ತಿಕೊಳ್ಳಲು ಕಾರಣ ಎಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ. ಸರಿಸುಮಾರು 50 ಆಂಬ್ಯುಲೆನ್ಸ್‌ಗಳನ್ನು ಬಳಸಿಕೊಂಡು ರೋಗಿಗಳನ್ನು ಸುರಕ್ಷಿತ ಸ್ಥಳಗಳಿಗೆ, ಸಮೀಪದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಕನಿಷ್ಠ 30 ರೋಗಿಗಳನ್ನು ಚಿಕಿತ್ಸೆಗಾಗಿ ದಿಂಡುಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಕಿಯನ್ನು ಹತೋಟಿಗೆ ತರಲು ಅಗ್ನಿಶಾಮಕ ದಳದ ಸಿಬ್ಬಂದಿ ಒಂದು ಗಂಟೆಗೂ ಹೆಚ್ಚು ಕಾಲ ಹರಸಾಹಸಪಟ್ಟರು. ಕೊನೆಗೂ ಬೆಂಕಿ ನಂದಿಸುವಲ್ಲಿ ಅವರು ಯಶಸ್ವಿಯಾಗಿದ್ದು, ಆಸ್ಪತ್ರೆಯ ಒಳಗೆ ಸಿಲುಕಿರುವವರನ್ನು ಪತ್ತೆಹಚ್ಚಿ ರಕ್ಷಿಸುವ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ.

Leave a Comment

Leave a Reply

Your email address will not be published. Required fields are marked *

error: Content is protected !!