ಹಣಕ್ಕಾಗಿ ಬ್ಲಾಕ್ ಮೇಲ್: ಪವರ್ ಟಿವಿ ಮುಖ್ಯಸ್ಥ ರಾಕೇಶ್ ಶೆಟ್ಟಿ ವಿರುದ್ಧ ವಿನಯ್ ಕುಲಕರ್ಣಿ ದೂರು
ನ್ಯೂಸ್ ಆ್ಯರೋ: 2 ಕೋಟಿ ರೂಪಾಯಿ ಹಣಕ್ಕೆ ಬ್ಲ್ಯಾಕ್ ಮೇಲ್ ಮಾಡಿ ಹಣ ನೀಡದೆ ಇದ್ದ ಕಾರಣಕ್ಕೆ ನನ್ನ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡಿರುವ ಪವರ್ ಟಿವಿ ಮುಖ್ಯಸ್ಥ ರಾಕೇಶ್ ಶೆಟ್ಟಿ ವಿರುದ್ಧ ಧಾರವಾಡ ನಗರ ಶಾಸಕ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ವಿನಯ್ ಕುಲಕರ್ಣಿ ದೂರು ನೀಡಿದ್ದಾರೆ.
ಅವರು ಸಂಜಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ನಕಲಿ ರೈತ ಹೋರಾಟಗಾರ್ತಿ ಮಂಜುಳ ಪೂಜಾರ್ ಮತ್ತು ರಾಕೇಶ್ ಶೆಟ್ಟಿ ಈ ಷಡ್ಯಂತ್ರ ರೂಪಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ದೂರಿನ ವಿವರ ಹೀಗಿದೆ:
2022ರಲ್ಲಿ ಹಾವೇರಿ ಜಿಲ್ಲೆಯ ಮಂಜುಳ ಪೂಜಾರಿ ಎಂಬ ಮಹಿಳೆಯು ತನ್ನನ್ನು ರೈತ ಹೋರಾಟಗಾರ್ತಿ ಎಂದು ಪರಿಚಯಿಸಿಕೊಂಡು ಕರೆ ಮಾಡುತ್ತಿದ್ದರು. ಈಕೆಯ ವಿರುದ್ಧ ಖಾಸಗಿ ವಾಹಿನಿಯೊಂದರಲ್ಲಿ ಹಣಕ್ಕೆ ಬೇಡಿಕೆ ಇಟ್ಟ ಕುಟುಕು ಕಾರ್ಯಚರಣೆ ವರದಿಯನ್ನು ಪ್ರಸಾರ ಮಾಡಿತ್ತು. ವಂಚನೆ, ಬ್ಲ್ಯಾಕ್ ಮೇಲ್ ನಂತಹ ಕೃತ್ಯಗಳಲ್ಲಿ ಭಾಗಿಯಾಗಿದ್ದರಿಂದ ಈಕೆಯ ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲ. ಹಾಗಾಗಿ ಕಳೆದ 2 ವರ್ಷಗಳಿಂದ ಆಕೆಯೊಂದಿಗೆ ಯಾವುದೇ ರೀತಿಯ ಸಂಪರ್ಕವಿರಲಿಲ್ಲ. ಇದಾದ ಬಳಿಕ ಪವರ್ ಟಿವಿಯ ಮುಖ್ಯಸ್ಥ ರಾಕೇಶ್ ಶೆಟ್ಟಿ ಮತ್ತು ಮಂಜುಳ ಪೂಜಾರಿ ಮತ್ತು ಇತರರು ನನ್ನ ವಿರುದ್ಧ ಸಂಚು ರೂಪಿಸಿ ಪವರ್ ಟಿವಿ ವಾಹಿನಿಯಲ್ಲಿ, ನನ್ನ ಮಾನ ಹಾನಿ ಮಾಡುವ ದುರುದ್ದೇಶದಿಂದ ವಿಡಿಯೋ ಮತ್ತು ಮೊಬೈಲ್ ಸಂಭಾಷಣೆಯ ಧ್ವನಿಯನ್ನು ಪ್ರಸಾರ ಮಾಡಲು ಷಡ್ಯಂತ್ರ ರೂಪಿಸಿ ಹಣ ವಸೂಲಿ ಮಾಡುವ ದುರುದ್ದೇಶದಿಂದ ತಂತ್ರ ರೂಪಿಸಿದ್ದರು.
ಇದರ ಭಾಗವಾಗಿ ಇದೇ ಸೆಪ್ಟಂಬರ್ 24 ರಂದು ಪವರ್ ಟಿವಿಯ ಮುಖ್ಯಸ್ಥ ರಾಕೇಶ್ ಶೆಟ್ಟಿ, ನನ್ನ ಮೊಬೈಲ್ ಗೆ ಫೇಸ್ ಟ್ರೈಂ ಮೂಲಕ ಕರೆಮಾಡಿ ನೀವು ಓರ್ವ ಮಹಿಳೆಯೊಂದಿಗೆ ಅಶ್ಲೀಲವಾಗಿ ಮಾತನಾಡಿರುವ ವಿಡಿಯೋ ಪ್ರಸಾರ ಮಾಡುವುದಾಗಿ ಬೆದರಿಕೆ ಒಡ್ಡಿದ್ದರು. ಪವರ್ ಟಿವಿಯ ಫೇಸ್ ಬುಕ್ ಮತ್ತು ಯೂ ಟ್ಯೂಬ್ ನಲ್ಲಿ ಕೈ ಶಾಸಕನ ರೇಪ್ ಪ್ರಕರಣ ಎಂದು ಪ್ರೋಮೋ ಪ್ರಸಾರ ಮಾಡಿದ್ದರು. ನಂತರ ಈ ಪ್ರೋಮೋಗಳನ್ನು ಕಳುಹಿಸಿ 2 ಕೋಟಿ ರೂಪಾಯಿ ಹಣ ನೀಡಬೇಕು. ಒಂದು ವೇಳೆ ಹಣ ನೀಡದಿದ್ದರೆ ನಿಮ್ಮ ಸ್ಥಾನಮಾನ ಮತ್ತು ರಾಜಕೀಯ ಬದುಕಿಗೆ ಈ ಹಾನಿ ಮಾಡುವುದಾಗಿ ಬೆದರಿಕೆ ಒಡ್ಡಿದ್ದರು.
ಇದೊಂದು ಸುಳ್ಳು, ವೀಡಿಯೋ ಅಸಲಿ ಅಲ್ಲ. ನಾನು ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಸುದ್ದಿ ಪ್ರಸಾರ ಮಾಡದಂತೆ ನ್ಯಾಯಾಲಯದಿಂದ ನಿರ್ಬಂಧಕಾಜ್ಞೆ ತರಲಾಗಿದೆ. ಈ ಆದೇಶವನ್ನು ವಕೀಲರ ಮೂಲಕ ಪವರ್ ಟಿವಿ ಕಛೇರಿಗೂ ತಲುಪಿಸಲಾಗಿದೆ. ನಂತರವೂ ರಾಕೇಶ್ ಶೆಟ್ಟಿ, ನ್ಯಾಯಾಲಯದ ಆದೇಶಕ್ಕೆ ಕೇರ್ ಮಾಡುವುದಿಲ್ಲ, ಹಣ ನೀಡದೆ ಇದ್ದರೆ ಸುದ್ದಿಯನ್ನು ಪ್ರಸಾರ ಮಾಡುವುದಾಗಿ ಮತ್ತೆ ಬೆದರಿಕೆ ಹಾಕಿದ್ದಾರೆ. ಅವರು ಮತ್ತೆ ಇದೇ ತಿಂಗಳ 7ರಂದು ಸಂಜೆ ಪವರ್ ವಾಹಿನಿಯಲ್ಲಿ ನನ್ನ ಭಾವಚಿತ್ರ ಬಳಸಿ ಸುಳ್ಳು ವಿಡಿಯೋ ಕರೆ, ದೂರವಾಣಿ ಸಂಭಾಷಣೆಯನ್ನು ಪ್ರಸಾರ ಮಾಡಿರುತ್ತಾರೆ.
ಹಲವು ಅಧಿಕಾರಿಗಳು ಮತ್ತು ರಾಜಕೀಯ ಮುಖಂಡರಿಗೆ ಬ್ಲ್ಯಾಕ್ ಮೇಲ್ ಮಾಡಿರುವ ಮಂಜುಳ ಪೂಜಾರ್ ಅವರನ್ನು ಚರ್ಚೆಗೆ ಕೂರಿಸಿಕೊಂಡು ನನ್ನ ಮಾನಹಾನಿ ಮಾಡುವ ಸುದ್ದಿ ಪ್ರಸಾರ ಮಾಡಿದ್ದಾರೆ. ಮಂಜುಳ ಪೂಜಾರ್ ಅವರ ಮೂಲಕ ನನ್ನ ವಿರುದ್ಧ ಆಧಾರ ರಹಿತ ಆರೋಪ ಹೊರಿಸಿ ಮಾನಹಾನಿ ಮಾಡುವ ಪ್ರಯತ್ನ ಮಾಡಿರುತ್ತಾರೆ. ಆದ್ದರಿಂದ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿ ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿರುವ ಪವರ್ ಟಿವಿಯ ಮುಖ್ಯಸ್ಥ ರಾಕೇಶ್ ಶೆಟ್ಟಿ, ಮಂಜುಳ ಪೂಜಾರ್ ಮತ್ತು ಇತರರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ದೂರು ನೀಡಿದ್ದಾರೆ.
Leave a Comment