ಎಲ್ಲೆಲ್ಲೂ ಮನೆ ಮಾಡಿದ ದೀಪಾವಳಿಯ ಸಂಭ್ರಮ; ನರಕ ಚತುರ್ದಶಿಯಂದು ಅಭ್ಯಂಗ ಸ್ನಾನ ಮಾಡುವುದು ಏಕೆ?

Oil
Spread the love

ನ್ಯೂಸ್ ಆ್ಯರೋ: ಹಿಂದೂ ಧರ್ಮೀಯರು ದೀಪಾವಳಿ ಹಬ್ಬದ ಅಂಗವಾಗಿ ನರಕ ಚತುರ್ದಶಿಯನ್ನು ಆಚರಿಸುತ್ತಾರೆ. ಇದನ್ನು ಹಲವೆಡೆ ಚೋಟಿ ದೀಪಾವಳಿ ಎಂದೂ ಕರೆಯಲಾಗುತ್ತದೆ. ನರಕ ಚತುರ್ದಶಿಯನ್ನು ಯಮ ದೇವನಿಗೆ ಗೌರವವನ್ನು ಸಲ್ಲಿಸುವುದಕ್ಕಾಗಿ ಆಚರಿಸಲಾಗುವ ಹಬ್ಬವಾಗಿದೆ. ಕೃಷ್ಣ, ಕಾಳಿ ಮತ್ತು ಸತ್ಯಭಾಮರು ರಾಕ್ಷಸ ರಾಜ ನರಕಾಸುರನನ್ನು ಸೋಲಿಸಿದಂತೆ ಇದು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸ್ಮರಿಸುವ ಹಬ್ಬವಾಗಿದೆ.

ಹಿಂದೂ ಕ್ಯಾಲೆಂಡರ್ ಪ್ರಕಾರ, ಇದನ್ನು ಆಶ್ವಯುಜ ಮಾಸದ ಚತುರ್ದಶಿ ತಿಥಿ ಅಥವಾ ಕೃಷ್ಣ ಪಕ್ಷದ ಹದಿನಾಲ್ಕನೇ ದಿನದಂದು ಆಚರಿಸಲಾಗುತ್ತದೆ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ, ಇದು ಅಕ್ಟೋಬರ್ ಅಥವಾ ನವೆಂಬರ್ ತಿಂಗಳುಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬವಾಗಿದೆ.

  • ನರಕ ಚತುರ್ದಶಿ 2024 ದಿನಾಂಕ: 2024 ರ ಅಕ್ಟೋಬರ್‌ 31 ರಂದು ಗುರುವಾರ
  • ಅಭ್ಯಂಗ ಸ್ನಾನಕ್ಕೆ ಮುಹೂರ್ತ: 2024 ರ ಅಕ್ಟೋಬರ್‌ 31 ರಂದು ಗುರುವಾರ ಮುಂಜಾನೆ 5:6 ರಿಂದ 6:16ರವರೆಗೆ
  • ಅಭ್ಯಂಗ ಸ್ನಾನದ ದಿನ ಚಂದ್ರೋದಯ ಸಮಯ: ಮುಂಜಾನೆ 5:6ಕ್ಕೆ
  • ಚತುರ್ದಶಿ ತಿಥಿ ಆರಂಭ: 2024 ರ ಅಕ್ಟೋಬರ್ 30 ರಂದು ಮಧ್ಯಾಹ್ನ 01:15
  • ಚತುರ್ದಶಿ ತಿಥಿ ಮುಕ್ತಾಯ: 2024 ರ ಅಕ್ಟೋಬರ್ 31 ರಂದು ಮಧ್ಯಾಹ್ನ 03:52

ನರಕ ಚತುರ್ದಶಿಯ ಮಹತ್ವ:

ಜನರು ತಮ್ಮ ಜೀವನದಿಂದ ನಕಾರಾತ್ಮಕ ಶಕ್ತಿಗಳು ಅಥವಾ ದುಷ್ಟಶಕ್ತಿಗಳ ಪ್ರಭಾವವನ್ನು ತೊಡೆದುಹಾಕಲು ಈ ಮಂಗಳಕರ ದಿನದಂದು ಕಾಳಿ ದೇವಿಯನ್ನು ಪೂಜಿಸುತ್ತಾರೆ. ನರಕ ಚತುರ್ದಶಿಯಂದು ಕಾಳಿಯನ್ನು ಪೂಜಿಸುವುದರಿಂದ ನಿಮ್ಮ ಮನೆಯಿಂದ ದೆವ್ವ, ದುಷ್ಟ ಶಕ್ತಿಗಳು ಮತ್ತು ನಕಾರಾತ್ಮಕ ಶಕ್ತಿಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಮನೆಯಲ್ಲಿ ಪೂಜೆಯನ್ನು ಮಾಡುವುದರಿಂದ, ನಿಮ್ಮ ಜೀವನದಲ್ಲಿ ನಕಾರಾತ್ಮಕ ಶಕ್ತಿಗಳ ಉಪಸ್ಥಿತಿಯನ್ನು ನೀವು ತೆಗೆದುಹಾಕಬಹುದು. ಅನೇಕ ಹಿಂದೂಗಳು ತಮ್ಮ ಪಾಪಗಳನ್ನು ತೊಡೆದುಹಾಕಲು ಈ ದಿನದಂದು ಅಭ್ಯಂಗ ಸ್ನಾನವನ್ನು ಮಾಡುತ್ತಾರೆ.

ಅಭ್ಯಂಗ ಸ್ನಾನದ ಮಹತ್ವ ಮತ್ತು ಹಿನ್ನೆಲೆ:

ಹಿಂದೂ ಧರ್ಮದಲ್ಲಿನ ಪ್ರತಿಯೊಂದು ಆಚರಣೆಯ ಹಿಂದೆಯೂ ಅದರದ್ದೇ ಆದ ಕಥೆ, ಮಹತ್ವ ಇರುವಂತೆ ಅಭ್ಯಂಗ ಸ್ನಾನಕ್ಕೂ ಅದರದ್ದೇ ಆದ ಮಹತ್ವವಿದೆ. ನರಕ ಚತುರ್ದಶಿಯ ಶುಭ ದಿನ ಕೆಟ್ಟದರ ವಿರುದ್ಧ ಒಳ್ಳೆಯದರ ವಿಜಯವನ್ನು ಸೂಚಿಸುತ್ತದೆ. ಈ ದಿನ ಸೂರ್ಯೋದಯಕ್ಕೂ ಮೊದಲೇ ಎದ್ದು ಅಭ್ಯಂಗ ಸ್ನಾನ ಮಾಡಿದರೆ ಪವಿತ್ರ ಗಂಗಾ ಸ್ನಾನ ಮಾಡಿದಷ್ಟೇ ಪುಣ್ಯ ಸಿಗುತ್ತದೆ ಎಂಬ ನಂಬಿಕೆಯೂ ಇದೆ. ಅಷ್ಟೇ ಅಲ್ಲದೇ ಅಭ್ಯಂಗ ಸ್ನಾನವು ಮನುಷ್ಯನಲ್ಲಿರುವ ಅಹಂಕಾರ, ಕೋಪ, ನಕರಾತ್ಮಕ ಆಲೋಚನೆಗಳನ್ನು ಶುದ್ಧೀಕರಣ ಮಾಡಿ ಹೊಸ ಭರವಸೆಯೊಂದಿಗೆ ದೇಹ ಮತ್ತು ಮನಸ್ಸಿನ ಶುದ್ಧತೆಯನ್ನು ಸೂಚಿಸುತ್ತದೆ.

ಅಭ್ಯಂಗ ಸ್ನಾನವನ್ನು ಏಕೆ ಆಚರಿಸಲಾಗುತ್ತದೆ ಎಂಬುದರ ಬಗ್ಗೆ ನೋಡುವುದಾದರೆ, ಪುರಾಣದ ಒಂದು ಕಥೆಯ ಪ್ರಕಾರ ಬ್ರಹ್ಮನಿಂದ ವರ ಪಡೆದ ನರಕಾಸುರ ನನಗೆ ಯಾರಿಂದಲೂ ತೊಂದರೆಯಾಗುವುದಿಲ್ಲ, ನನಗೆ ಯಾರು ತೊಂದರೆ ಮಾಡಲು ಸಾಧ್ಯವೇ ಇಲ್ಲ ಎಂದು ಅಹಂನಿಂದ ಬೀಗುತ್ತಾನೆ. ಇದೇ ದುರಹಂಕಾರ, ಮದದಿಂದ ಆತ ದೇವತೆಗಳಿಗೆ ತೊಂದರೆ ಕೊಡಲು ಶುರು ಮಾಡುತ್ತಾನೆ. ನರಕಾಸುರನ ಕಾಟ ತಾಳಲಾರದೆ ದೇವತೆಗಳು ಶ್ರೀ ಕೃಷ್ಣನ ಮೊರೆ ಹೋಗುತ್ತಾರೆ. ಇವರ ಪ್ರಾರ್ಥನೆಗೆ ಮನಸೋತ ಶ್ರೀಕೃಷ್ಣನು ನರಕಾಸುರನನ್ನು ಸಂಹಾರ ಮಾಡಲು ನಿರ್ಧರಿಸಿದನು. ಆದರೆ ತನಗೆ ಸ್ತ್ರೀಯರಿಂದಲೇ ಮರಣ ಎಂಬ ವರ ಪಡೆದಿದ್ದ ಕಾರಣ ನರಕಾಸುರನನ್ನು ಕೊಲ್ಲುವುದು ಶ್ರೀಕೃಷ್ಣನಿಗೆ ಅಷ್ಟು ಸುಲಭವಾಗಿರಲಿಲ್ಲ. ಹಾಗಾಗಿ ಸತ್ಯಭಾಮೆಯ ಮುಖಾಂತರ ಶ್ರೀಕೃಷ್ನ ಆಶ್ವಯುಜ ಮಾಸದ ಕೃಷ್ಣಪಕ್ಷದಂದು ನರಕಾಸುರನನ್ನು ಸಂಹರಿಸಿದನು. ಆ ಸಮಯದಲ್ಲಿ ತನ್ನ ಮೇಲೆ ಹಾರಿದ ನರಕಾಸುರನ ರಕ್ತವನ್ನು ತೊಡೆದು ಹಾಕಲು ಕೃಷ್ಣ ಎಣ್ಣೆ ಸ್ನಾನವನ್ನು ಮಾಡುತ್ತಾನೆ. ಇದೇ ಕಾರಣಕ್ಕೆ ನರಕ ಚತುರ್ದಶಿಯ ದಿನ ಎಣ್ಣೆ ಸ್ನಾನ ಮಾಡುವ ಸಂಪ್ರದಾಯ ನಡೆದುಕೊಂಡು ಬಂದಿದೆ.

ಇನ್ನೊಂದು ಕಥೆಯ ಪ್ರಕಾರ, ನರಕಾಸುರನು 16 ಸಾವಿರ ಗೋಪಿಕಾ ಸ್ತ್ರೀಯರನ್ನು ಬಂಧನದಲ್ಲಿಟ್ಟಿದ್ದನು ಮತ್ತು ಅವರಿಗೆ ಅತೀವ ಕಿರುಕುಳವನ್ನು ನೀಡುತ್ತಿದ್ದನು. ಅಂತಹ ಪರಿಸ್ಥಿತಿಯಲ್ಲಿ ಗೋಪಿಕಾ ಸ್ತ್ರೀಯರೆಲ್ಲರು ಸೇರಿ ಶ್ರೀಕೃಷ್ಣನನ್ನು ಪ್ರಾರ್ಥಿಸಿದಾಗ, ಕೃಷ್ಣನು ಗೋಪಿಕಾ ಸ್ತ್ರೀಯರಿಗಾಗಿ ಸತ್ಯಭಾಮೆಯ ಮುಖಾಂತರ ನರಕಾಸುರನ ವಧೆ ಮಾಡಿದನು. ಈ ಬಳಿಕ ಗೋಪಿಕಾ ಸ್ತ್ರೀಯರೆಲ್ಲಾ ಅಭ್ಯಂಗ ಸ್ನಾನ ಮಾಡಿ ಪವಿತ್ರಪಾವನರಾದರು ಎಂದು ಹೇಳಲಾಗುತ್ತದೆ.

ಅಭ್ಯಂಗ ಸ್ನಾನದ ಸರಿಯಾದ ವಿಧಾನ ಮತ್ತು ಇದರ ಪ್ರಯೋಜನಗಳು:

ನರಕ ಚತುರ್ದಶಿಯ ಮುನ್ನಾ ದಿನ ಅಂದರೆ ತ್ರಯೋದಶಿಯ ದಿನ ಸ್ನಾನದ ಹಂಡೆಗಳಿಗೆ ನೀರು ತುಂಬುವ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಗುತ್ತದೆ. ಅಂದು ನೀರಿನ ಪಾತ್ರೆ ಅಥವಾ ಹಂಡೆಯನ್ನು ಶುದ್ಧೀಕರಿಸಿ, ಪೂಜಿಸಿ ಬಳಿಕ ಅದಕ್ಕೆ ನೀರು ತುಂಬಬೇಕು. ಮರು ದಿನ ಅಂದರೆ ನರಕ ಚತುರ್ದಶಿಯ ದಿನದಂದು ಸೂರ್ಯೋದಯಕ್ಕೂ ಮುಂಚೆ ಎದ್ದು ಶುಭ ಮುಹೂರ್ತದಲ್ಲಿ ಎಳ್ಳೆಣ್ಣೆ ಅಥವಾ ತೆಂಗಿನ ಎಣ್ಣೆಯನ್ನು ಸಂಪೂರ್ಣ ದೇಹ ಹಾಗೂ ತಲೆಗೂದಲಿಗೆ ಹಚ್ಚಿ ನಂತರ ಬಿಸಿ ನೀರಿನಲ್ಲಿ ಸ್ನಾನ ಮಾಡಬೇಕು. ಅಭ್ಯಂಗ ಸ್ನಾನಕ್ಕೆ ಎಳ್ಳೆಣ್ಣೆಯೇ ಶ್ರೇಷ್ಠ ಎಂದು ಹೇಳುತ್ತಾರೆ. ಆದ್ರೆ ಕೆಲವು ಕಡೆ ಕೊಬ್ಬರಿ ಎಣ್ಣೆಯನ್ನು ಸಹ ಬಳಸುತ್ತಾರೆ. ಧಾರ್ಮಿಕ ಪ್ರಾಮುಖ್ಯತೆಯ ಹೊರತಾಗಿ ಈ ಎಣ್ಣೆ ಸ್ನಾನವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಕೂಡಾ ಹೊಂದಿದೆ. ಹೌದು ಈ ಎಣ್ಣೆಯನ್ನು ದೇಹಕ್ಕೆ ಹಚ್ಚಿ ಮಸಾಜ್‌ ಮಾಡುವುದರಿಂದ ದೇಹದಲ್ಲಿ ರಕ್ತದ ಹರಿವು ಸುಧಾರಿಸುತ್ತದೆ. ಅಷ್ಟೇ ಅಲ್ಲದೆ ಇದು ಮೂಲೆಗಳನ್ನು ಬಲಪಡಿಸುವುದರ ಜೊತೆಗೆ ಚರ್ಮಕ್ಕೂ ತುಂಬಾನೇ ಪ್ರಯೋಜನಕಾರಿಯಾಗಿದೆ.

ನರಕ ಚತುರ್ದಶಿ ಪೂಜೆ ವಿಧಾನ:

  • ಸುರ್ಯೋದಯಕ್ಕೂ ಮುನ್ನ ಎದ್ದು, ಎಣ್ಣೆಯನ್ನು ಹಚ್ಚಿಕೊಂಡು ಅಭ್ಯಂಗ ಸ್ನಾನವನ್ನು ಮಾಡಬೇಕು.
  • ಸ್ನಾನದ ನಂತರ ಹೊಸ ಬಟ್ಟೆಯನ್ನು ಧರಿಸಬೇಕು.
  • ನರಕ ಚತುರ್ದಶಿಯಂದು ಜನರು ದೀಪಾವಳಿಗೆ ಮಾಡುವ ರೀತಿಯಲ್ಲಿಯೇ ತಮ್ಮ ಮನೆಗಳನ್ನು ಅಲಂಕರಿಸಲು ದೀಪಗಳನ್ನು ಬಳಸುತ್ತಾರೆ. ಇಡೀ ಕುಟುಂಬವು ಲಕ್ಷ್ಮಿ ದೇವಿಯನ್ನು ಗೌರವಿಸಲು ಸೇರುತ್ತದೆ. ಆಕೆಯ ದೈವಿಕ ಆಶೀರ್ವಾದವನ್ನು ಪಡೆಯಲು ದೇವಿಗೆ ವಿವಿಧ ಅರ್ಪಣೆಗಳನ್ನು ಮತ್ತು ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತದೆ.
  • ಹಲವಾರು ಆರಾಧಕರು ಈ ದಿನದಂದು ಉಪವಾಸವನ್ನು ಆಚರಿಸುತ್ತಾರೆ. ಅವರು ಲಕ್ಷ್ಮಿ ದೇವಿಯನ್ನು ಮತ್ತು ಭಗವಾನ್ ಕುಬೇರನನ್ನು ಸಂಪೂರ್ಣ ಭಕ್ತಿಯಿಂದ ಪೂಜಿಸುತ್ತಾರೆ ಮತ್ತು ಎಲ್ಲಾ ಪೂಜಾ ವಿಧಿಗಳನ್ನು ಪೂರ್ಣಗೊಳಿಸಿದ ನಂತರ ತಮ್ಮ ಉಪವಾಸವನ್ನು ತ್ಯಜಿಸುತ್ತಾರೆ.
  • ಈ ದಿನದಂದು ಹನುಮಂತನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಭಗವಂತನನ್ನು ಗೌರವಿಸಲು ಹೂವುಗಳು, ಎಣ್ಣೆ ಮತ್ತು ಶ್ರೀಗಂಧವನ್ನು ಬಳಸಲಾಗುತ್ತದೆ.

Leave a Comment

Leave a Reply

Your email address will not be published. Required fields are marked *

error: Content is protected !!